

ಭಾರತೀಯ ಮಾರುಕಟ್ಟೆಗೆ ಫಿಯೆಟ್ನಿಂದ ಹೊಸ ಕಾರುಗಳು ಬರುವ ಲಕ್ಷಣ ಕಾಣುತ್ತಿಲ್ಲ.
ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಗಳಲ್ಲಿ ಸುಮಾರು 15 ಕಾರುಗಳು ಲಭ್ಯವಿವೆ. ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಎಸ್ಯುವಿನಲ್ಲಿಯೂ ಸುಮಾರು 5 ಕಾರುಗಳು ದೊರೆಯುತ್ತವೆ. ಆದರೆ ಭಾರತದಲ್ಲಿ ಪುಂಟೊ ಹಾಗೂ ಲೀನಿಯಾ ಕಾರುಗಳನ್ನು ಬಿಟ್ಟರೆ ಮತ್ಯಾವುದೂ ಸಿಗುತ್ತಿಲ್ಲ. ಹೊಸತನ್ನು ಮಾರುಕಟ್ಟೆಗೆ ತರುವ ವಿಚಾರವನ್ನು ಫಿಯೆಟ್ ಮಾಡುತ್ತಿದ್ದಂತಿಲ್ಲ.
ಇದರ ಸ್ಪಷ್ಟ ಸೂಚನೆಯೆಂದರೆ ಫಿಯೆಟ್ ಪುಂಟೊವಿನ ಸ್ಪೋರ್ಟ್ಸ್ ಮಾದರಿ ಮಾರುಕಟ್ಟೆಗೆ ಬಂದಿದೆ. ಈ ಹಿಂದಿನ ಪುಂಟೊ ಕಾರಿನ ಹೊರ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಎಂಜಿನ್ ಅಥವಾ ಒಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಭಾರತದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಪುಂಟೊ ಸ್ಪೋರ್ಟ್ನ್ನು ವಿನ್ಯಾಸಗೊಳಿಸಲಾಗಿದೆ ಎಂದು ಫಿಯೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಾಗೇಶ ಬಸವನಹಳ್ಳಿ ಹೇಳಿದ್ದಾರೆ. ಭಾರತದ ಯುವಕರು ಅದರಲ್ಲೂ ಬೆಂಗಳೂರಿಗರು ಪುಂಟೊ ಕಾರಿಗೆ ಉತ್ತಮ ಪ್ರತಿಕ್ರಿಯೆ ನೀಡಿರುವುದು ಸ್ಪೋರ್ಟ್ಸ್ ಎಡಿಷನ್ ಪ್ರಾರಂಭಿಸಲು ಉತ್ತೇಜನ ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಪುಂಟೊಗೆ ಸ್ಪರ್ಧೆ ನೀಡುತ್ತಿರುವ ಸ್ವಿಫ್ಟ್, ವಿಸ್ತಾ ಹಾಗೂ ಐ20 ಕಾರುಗಳು ಈಗಾಗಲೆ ಹೊರ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಸ್ಪೋರ್ಟಿ ಲುಕ್ ನೀಡಿರುವುದು ಈ ಬದಲಾವಣೆಗೆ ಕಾರಣ ಎನ್ನುವುದು ಮಾರುಕಟ್ಟೆ ತಜ್ಞರ ವಾದ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಂಡಿ ನಾಗೇಶ್ ಅವರಿಗೆ ಫಿಯೆಟ್ ಕಂಪನಿಯು ಎಸ್ಯುವಿ ಬಗ್ಗೆ ತೋರಿಸುತ್ತಿರುವ ನಿರಾಸಕ್ತಿ ಬಗ್ಗೆ ಕೇಳಿದಾಗ, ಭಾರತೀಯ ಮಾರುಕಟ್ಟೆಗೆ ಸಧ್ಯದಲ್ಲಿಯೇ ಹೊಸ ಕಾರುಗಳೊಂದಿಗೆ ಲಗ್ಗೆ ಇಡುತ್ತೇವೆ ಎಂಬ ಭರವಸೆ ನೀಡಿದರು. ಆದರೆ ಮುಂದಿನ 3 ವರ್ಷಗಳಿಗೆ ಭಾರತದ ಮಾರುಕಟ್ಟೆಗೆ ಎಸ್ಯುವಿ ತರುವ ಬಗ್ಗೆ ಯೋಜನೆಯಲ್ಲಿ ಸೇರಿಲ್ಲ ಎಂದು ಮತ್ತೊಂದು ಪ್ರಶ್ನೆಗ ೆಉತ್ತರ ನೀಡಿದರು.
ಅಂದ ಹಾಗೆ ಪುಂಟೊ ಸ್ಪೋರ್ಟ್ ಬೆಂಗಳೂರಿನಲ್ಲಿ 7.74 ಲಕ್ಷಕ್ಕೆ ಸಿಗುತ್ತಿದೆ. ಸೇವೆಯನ್ನು ಉತ್ತಮ ಪಡಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ಫಿಯೆಟ್ನಿಂದ ಅಧಿಕೃತವಾಗಿ ಸರ್ವಿಸ್ ಸೆಂಟರ್ನ್ನು 100ಕ್ಕೆ ಏರಿಸಲು ನಿರ್ಧರಿಸಲಾಗಿದೆ.
ಸ್ಪೋರ್ಟ್ನ ಹೊಸತನವೇನು?
- ಕಪ್ಪು ಬಣ್ಣದ ರೂಫ್
- ಬಿಳಿ ಬಣ್ಣದ ಕಾರಿಗೆ ಕೆಂಪು ಕನ್ನಡಿ ಹಾಗೂ ಕೆಂಪು ಬಣ್ಣದ ಕಾರಿಗೆ ಕಪ್ಪು ಕನ್ನಡಿ
- ಸ್ಪೋರ್ಟಿ ಡಿಕೆಲ್
- ಕ್ರೋಮ್ ಎಕ್ಸಾಸ್ಟ್ ಪೈಪ್
- ರೂಫ್ ಸ್ಪೈಲರ್