ಮಾಯಕಾರ್

ಟ್ರಾಫಿಕ್‌ನಲ್ಲಿ ಕೆಂಪು ಸಿಗ್ನಲ್ ಗಮನಿಸಿದ ಕಾರು 'ಬ್ರೇಕ್ ಅದಮೋ....' ಎಂದು ಕಿರುಚಿದರೆ...?
ಮಾಯಕಾರ್
Updated on: 

ಟ್ರಾಫಿಕ್‌ನಲ್ಲಿ ಕೆಂಪು ಸಿಗ್ನಲ್ ಗಮನಿಸಿದ ಕಾರು 'ಬ್ರೇಕ್ ಅದಮೋ....' ಎಂದು ಕಿರುಚಿದರೆ...? ಎದುರಿನ ರಸ್ತೆಯಲ್ಲಿ ನೀವು ಗಮನಿಸಿದಿರುವಾಗ ವಾಹನ ಬಂದಾಗ ಕಾರೇ ನಿಮಗೆ ಎಚ್ಚರಿಸಿದರೆ...? ಇನ್ನು ಡ್ರೈವರ್ ಸೀಟೇ ಬೇಡ, ಕಾರೇ ವಾಹನ ಚಲಾಯಿಸಿದರೆ...?
ಇಂತಹ ಸಾಕಷ್ಟು 'ರೆ...'ಗಳ ಕುರಿತಂತೆ ಆಟೊಮೋಬೈಲ್ ವಿಜ್ಞಾನ ಲೋಕವು ಸಂಶೋಧನೆ ನಡೆಸುತ್ತಿದೆ. ಕಾರುಗಳನ್ನು ಅಕ್ಷರಶಃ ರಿಮೋಟ್ ಯಂತ್ರದಂತೆ ರೂಪಿಸಲು ಅಮೆರಿಕ ಹಾಗೂ ಜರ್ಮನ್‌ನ ಆಟೊಮೊಬೈಲ್ ಉದ್ಯಮಗಳು ಹಗಲು ರಾತ್ರಿ ಶ್ರಮಿಸುತ್ತಿವೆ. ಆದರೆ ರಿಮೋಟ್ ನಿಯಂತ್ರಿಸಿದಂತೆ ಕಾರುಗಳನ್ನು ರಸ್ತೆಯ ಮೇಲೆ ನಿಯಂತ್ರಿಸುವುದು ಅಷ್ಟು ಸುಲಭದ ಕಸುಬಲ್ಲ.
ಚಾಲಕರಿಲ್ಲದೇ ರಸ್ತೆಗಳಲ್ಲಿ ವಾಹನ ಚಲಾಯಿಸಲು ಉಪಗ್ರಹದ ನಿರಂತರ ಸಂಪರ್ಕ ಹಾಗೂ ಸೆನ್ಸಾರ್ ತಂತ್ರಜ್ಞಾನ ಅನಿವಾರ್ಯವಾಗುತ್ತದೆ. ಕಾರಿನಲ್ಲಿ ಪ್ರಯಾಣಿಸುವವರು ಕೂಡ ಸುರಕ್ಷಿತವಾಗಿ ಮನೆ ತಲುಪುವಂತಹ ತಂತ್ರಜ್ಞಾನವನ್ನು ಉದ್ಯಮ ರೂಪಿಸಬೇಕಾಗುತ್ತದೆ. ಈ ಕುರಿತ ಸಂಶೋಧನೆಗಳು ಪ್ರಾರಂಭವಾಗಿವೆ. ಆದರೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳೂ ಎದುರಾಗುತ್ತಿವೆ.
ಸೆನ್ಸಾರ್ ತಂತ್ರಜ್ಞಾನವು ಕೆಲವು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೊಮ್ಮೆ ಉಪಗ್ರಹದಿಂದ ಸಮರ್ಪಕವಾಗಿ ಸಂದೇಶಗಳು ಸಿಗುತ್ತಿಲ್ಲ. ಇದರಿಂದ ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಗಾಡಿಗೆ ಸೆನ್ಸಾರ್ ತಂತ್ರಜ್ಞಾನ ಅಳವಡಿಸಿ, ಉಪಗ್ರಹ ಸಂದೇಶಗಳು ಆಗಿಂದಾಗ್ಗೆ ದೊರೆಯುವಂತಹ ತಂತ್ರಜ್ಞಾನ ಕುರಿತಂತೆ ವ್ಯಾಪಕ ಸಂಶೋಧನೆ ನಡೆಸಲಾಗುತ್ತಿದೆ.

ಅದೇನದು?
ಅಮೆರಿಕದ ಮ್ಯಾಪ್‌ಗಳನ್ನು ಸಂಗ್ರಹಿಸುವ ಸಲುವಾಗಿ ಸುಮಾರು 3.21 ಲಕ್ಷ ಕಿ.ಮೀನಷ್ಟು ರಸ್ತೆಯಲ್ಲಿ ಗೂಗಲ್ ಸಂಸ್ಥೆಯು ಚಾಲಕ ರಹಿತ ವಾಹನ ಉಪಯೋಗಿಸಿತ್ತು. ಇದಕ್ಕೆ ರಿಮೋಟ್ ತಂತ್ರಜ್ಞಾನ ಬಳಸಲಾಗಿತ್ತು. ಇದನ್ನೇ ಆಧಾರವಾಗಿರಿಸಿಕೊಂಡು ಚಾಲಕ ರಹಿತ ವಾಹನವನ್ನು ಮಾರುಕಟ್ಟೆಗೆ ಬಿಡಲು ಅಮೆರಿಕದಲ್ಲಿ ಸಂಶೋಧನೆ ನಡೆಯುತ್ತಿದೆ. ಕ್ಯಾಲಿಫೋರ್ನಿಯಾ ಹಾಗೂ ನೆವಡಾದ ಎಂಜಿನಿಯರ್‌ಗಳು ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪ್ರತಿ ಸೆಕೆಂಡ್‌ಗೂ ಈ ಕಾರುಗಳಿಗೆ ಉಪಗ್ರಹದಿಂದ ಸಂದೇಶಗಳು ರವಾನೆಯಾಗುತ್ತವೆ. ಇದನ್ನು ಗ್ರಹಿಸಿ ಟ್ರಾಫಿಕ್ ಹಾಗೂ ಇತರ ಅಂಶಗಳನ್ನು ಕಾರು ಲೆಕ್ಕಹಾಕಲಿದೆ. ಒಬ್ಬ ಚಾಲಕ ಎದುರಿನ ರಸ್ತೆ ನೋಡಿ ಹೇಗೆ ಚಲಾಯಿಸುತ್ತಾನೋ ಅದೇ ರೀತಿ ಕಾರು ಉಪಗ್ರಹಗಳಿಂದ ಎಲ್ಲ ಮಾಹಿತಿ ಪಡೆದು ಚಲಾಯಿಸುತ್ತದೆ. ಇದಕ್ಕೆ ಪೂರಕವಾಗಿ ಕಾರು ಅಕ್ಕಪಕ್ಕದ ವಸ್ತುಗಳನ್ನು ಸೆನ್ಸಾರ್ ತಂತ್ರಜ್ಞಾನದಿಂದ ಗ್ರಹಿಸುತ್ತದೆ. ಕ್ಯಾಮರಾ ಮತ್ತು ಸೆನ್ಸಾರ್ ತಂತ್ರಜ್ಞಾನದಿಂದ ಪಕ್ಕದಲ್ಲಿ ಯಾವ ವಸ್ತು ಎಷ್ಟು ಅಂತರದಲ್ಲಿದೆ ಎನ್ನುವುದು ಕಾರಿಗೆ ತಿಳಿಯುತ್ತದೆ. ಚಾಲಕ ರಹಿತ ಕಾರಾಗಿದ್ದರೆ ಅದನ್ನು ಗಮನಿಸಿ ಸುರಕ್ಷಿತವಾಗಿ ರಸ್ತೆಯಲ್ಲಿ ಮುಂದುವರಿಯುತ್ತದೆ. ಒಂದೊಮ್ಮೆ ಚಾಲಕರಿದ್ದರೆ ಚಾಲಕನಿಗೆ ಎದುರಿಗೆ ಬರುವ ಎಲ್ಲ ವಸ್ತುಗಳ ಸಂಪೂರ್ಣ ಮಾಹಿತಿ ಹಾಗೂ ಸಿಗ್ನಲ್‌ಗಳ ಎಚ್ಚರಿಕೆ ನೀಡುತ್ತದೆ. ಆದರೆ ಈ ಕಾರುಗಳು ಭಾರತೀಯ ರಸ್ತೆಯಲ್ಲಿ ಹೇಗೆ ಚಲಿಸುತ್ತವೋ ದೇವರೇ ಬಲ್ಲ.

ಕಾರು ನಿಲ್ಲಿಸುವ ಏರ್‌ಬ್ಯಾಗ್
ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರುಗಳಲ್ಲಿ ನಾಲ್ಕು ಹಾಗೂ ಆರು ಏರ್‌ಬ್ಯಾಗ್‌ಗಳು ಲಭ್ಯವಿವೆ. ಆದರೆ ಅವು ಅಷ್ಟು ಸುರಕ್ಷಿತವಾಗಿಲ್ಲ ಎಂಬ ಆರೋಪವೂ ಇದೆ. ಮುಖ್ಯವಾಗಿ ಅಪಘಾತವಾದಾಗ ಕಾರಿನ ವೇಗವನ್ನು ಕೂಡಲೇ ನಿಯಂತ್ರಿಸಿ ಸಂಭವಿಸಬಹುದಾದ ದೊಡ್ಡ ಅವಘಡ ನಿಲ್ಲಿಸುವುದಿಲ್ಲ ಎಂಬ ಆರೋಪವಿದೆ. ಇದೇ ಕಾರಣದಿಂದ ಮತ್ತೊಂದು ವಿಶೇಷ ಏರ್‌ಬ್ಯಾಗ್‌ನ್ನು ಗಾಡಿಗೆ ಅಳವಡಿಸಲಾಗುತ್ತಿದ್ದು, ಅಪಘಾತವಾದಾಗ ಈ ಏರ್‌ಬ್ಯಾಗ್ ಕಾರಿನ ವೇಗವನ್ನು ಸಂಪೂರ್ಣ ನಿಯಂತ್ರಿಸಲಿದೆ. ಇದಲ್ಲದೇ ಚಾಲಕರು ಹಾಗೂ ಪ್ರಯಾಣಿಕರ ರಕ್ಷಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತದೆ. ಬ್ಯಾಗ್‌ಗೆ ಫ್ರಿಕ್ಷನ್ ಕೋಟಿಂಗ್ ಹಾಗೂ ಸೆನ್ಸಾರ್ ತಂತ್ರಜ್ಞಾನವಿರುತ್ತದೆ. ಕಳೆದ 5 ವರ್ಷಗಳಿಂದ ಮರ್ಸಿಡಸ್ ಸಂಸ್ಥೆ ಈ ಕುರಿತಂತೆ ಸಂಶೋಧನೆ ನಡೆಸಿದೆ.

ಬಿಡಿ ಭಾಗಗಳಲ್ಲಿ 'ಎನರ್ಜಿ' ಸಂಗ್ರಹ
ಭವಿಷ್ಯದ ಇಂಧನದ ತಲೆಬಿಸಿಯಲ್ಲಿ ಕಾರು ಉದ್ಯಮವು ಹೈಬ್ರೀಡ್ ಕಾರುಗಳನ್ನು ಅಗ್ಗದ ದರದಲ್ಲಿ ನಿರ್ಮಿಸಲು ಹರಸಾಹಸ ಮಾಡಲಾಗುತ್ತಿದೆ. ಮತ್ತೊಂದೆಡೆ ಹೈಬ್ರೀಡ್ ಕಾರುಗಳಲ್ಲಿ ಬಳಸುವ ಬ್ಯಾಟರಿಗಳ ಗಾತ್ರ ಸಾಕಷ್ಟು ದೊಡ್ಡದಿದೆ. ಇದೇ ಕಾರಣದಿಂದ ಗಾಡಿ ಬಿಡಿ ಭಾಗಗಳಲ್ಲಿಯೂ ಏನರ್ಜಿ ಸಂಗ್ರಹಿಸುವಂತೆ ಸಂಶೋಧನೆ ನಡೆಸಲಾಗುತ್ತಿದೆ. ಪಾಲಿಮರ್ ಫೈಬರ್ ಹಾಗೂ ಕಾರ್ಬನ್‌ಗಳಿಂದ ಬಿಡಿಭಾಗಗಳಲ್ಲಿ ಶಕ್ತಿ ಸಂರಕ್ಷಣೆ ಮಾಡಲಾಗುತ್ತದೆ. ಈ ಕುರಿತಂತೆ ಯುರೋಪಿನ 9 ಪ್ರತಿಷ್ಠಿತ ವಾಹನೋದ್ಯಮಗಳು ಸಂಶೋಧನೆಯಲ್ಲಿ ತೊಡಗಿವೆ.

-  ರಾಧೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com