ಆವಿಷ್‌ಕಾರ್

ಆವಿಷ್‌ಕಾರ್
Updated on: 

ಇಂದು ದಿನಗಳೆದಂತೆ ಕಾರುಗಳ ಆವಿಷ್ಕಾರ, ತಂತ್ರಜ್ಞಾನ ಬದಲಾಗುತ್ತಲೇ ಇದೆ. ಹೀಗಾಗಿ ಎಲ್ಲ ಕಂಪನಿಗಳು ಗ್ರಾಹಕರನ್ನು ಸೆಳೆಯಲು ನಿತ್ಯ ಸಂಶೋಧನೆ, ಅಭಿವೃದ್ಧಿಯನ್ನು (ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್- ಆರ್ ಆ್ಯಂಡ್ ಡಿ) ಮಾಡುತ್ತಲೇ ಇರುತ್ತವೆ.
ಒಂದು ಹೊಸ ಕಾರನ್ನು ರಸ್ತೆ ಮೇಲೆ ತರಲು ಅದರ ಹಿಂದಿರುವ ಪ್ರಯತ್ನ, ಪರೀಕ್ಷೆ, ಪ್ರಯೋಗಗಳು ನಿಜಕ್ಕೂ ಕಾರು ಓಡಿಸಿದಷ್ಟು ಸುಲಭ ಆಗಿರುವುದಿಲ್ಲ. ನಾನಾ ಪರೀಕ್ಷೆಗಳನ್ನು ಒಡ್ಡಿಕೊಂಡೇ ಒಂದು ಕಾರು ತನ್ನ ರೂಪ ಪಡೆದುಕೊಂಡು ರಸ್ತೆಗಿಳಿಯುತ್ತದೆ. ಇಂಥ ಅದ್ಭುತ ಅನುಭವ ನೀಡಿದ್ದು ಟಾಟಾ ಮೋಟಾರ್ಸ್. ಇತ್ತೀಚೆಗೆ ಪುಣೆಯ ಪಿಂಪ್ರಿಯಲ್ಲಿರುವ ಟಾಟಾ ಕಾರು ತಯಾರಿಕಾ ಘಟಕಕ್ಕೆ ಭೇಟಿ ನೀಡಿದಾಗ ಇಂಥ ಅಂಶಗಳು ನಮ್ಮ ಮುಂದೆ ಹಾದುಹೋದವು.
ಒಟ್ಟಾರೆ 800 ಎಕರೆಯಲ್ಲಿ ತನ್ನ ಘಟಕವನ್ನು ವಿಸ್ತರಿಸಿಕೊಂಡಿರುವ ಪಿಂಪ್ರಿ ಮತ್ತು 130 ಎಕರೆ ಪ್ರದೇಶವನ್ನು ಒಳಗೊಂಡಿರುವ ಚಿಂಚವಾಡದಲ್ಲಿ ಟಾಟಾ ತನ್ನ ಕಾರುಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಒಂದು ಕಾರನ್ನು ಸಂಪೂರ್ಣವಾಗಿ ಪರೀಕ್ಷಿಸಿಯೇ ರಸ್ತೆಗಿಳಿಸಲಾಗುತ್ತದೆ. ಹಾಗಾದರೆ, ಆ ಪರೀಕ್ಷಾ ಹಂತಗಳು ಯಾವುವು?

ಕ್ರ್ಯಾಷ್ ಟೆಸ್ಟ್
ಟಾಟಾ ಕಂಪನಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಪಘಾತ ಪರೀಕ್ಷಾ ಕೇಂದ್ರವನ್ನು (ಕ್ರ್ಯಾಷ್ ಟೆಸ್ಟ್ ಸೆಂಟರ್) ಸ್ಥಾಪಿಸಿದ್ದು ಇಲ್ಲಿಯೇ. ಪ್ರಯಾಣಿಕರ ಸುರಕ್ಷತೆಯಿಂದ ಅಪಘಾತ ಪರೀಕ್ಷೆ ಇಲ್ಲಿ ಕಡ್ಡಾಯ. ಅಪಘಾತಗಳುಂಟಾಗುವ ಎಲ್ಲ ಬಗೆಯೂ ಪರೀಕ್ಷೆಯಾಗುತ್ತದೆ. ಮುಖಾಮುಖಿ ಅಪಘಾತ (ಫ್ರಂಟ್), ಕಾರಿನ ಎಡ ಮತ್ತು ಬಲಭಾಗದಲ್ಲಿ ಉಂಟಾಗುವ ಅಪಘಾತಗಳು, ಹಿಂದಿನಿಂದ ಆಗುವ ಅವಘಡಗಳ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪರೀಕ್ಷೆ ಎಲ್ಲವೂ ಯಾಂತ್ರೀಕೃತವಾಗಿಯೇ ಇರುತ್ತದೆ. ಅಷ್ಟೇ ಅಲ್ಲ, ಚಾಲಕರ ಜಾಗದಲ್ಲಿ ಮನುಷ್ಯರಂತೆ ಇರುವ ಯಂತ್ರಗಳನ್ನು ಕೂರಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಕಾರಿನ ವೇಗದ ಮಿತಿಯನ್ನು ಪ್ರತಿ ಗಂಟೆಗೆ 15ರಿಂದ 64 ಕಿ.ಮೀ.ವರೆಗೆ ಇರುತ್ತದೆ. ಅಪಘಾತ ಆಗುವುದನ್ನು ಸೆರೆಹಿಡಿಯಲೆಂದೇ ಹೈ ಡೆಫಿನೇಷನ್ ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ. ಈ ಕ್ಯಾಮೆರಾ ನೀಡುವ ದೃಶ್ಯಗಳ ಆಧಾರದ ಮೇಲೆ ಅಪಘಾತ ನಿಯಂತ್ರಣ ಸಾಧನಗಳನ್ನು ಎಂಜಿನಿಯರ್‌ಗಳು ಕಾರಿಗೆ ಅಳವಡಿಸುತ್ತಾರೆ. ಈ ಎಲ್ಲ ಹಂತವನ್ನು ನೋಡಿಕೊಳ್ಳಲೆಂದೇ ಈ ವಿಭಾಗದಲ್ಲಿ ಕ್ರ್ಯಾಷ್ ಟೆಸ್ಟ್ ಎಂಜಿನಿಯರ್‌ಗಳು ಇರುತ್ತಾರೆ.

ಶಬ್ದ ಪರೀಕ್ಷೆ
ಕಾರಿನ ಎಂಜಿನ್, ಬಾಗಿಲುಗಳು ಸೇರಿದಂತೆ ಅದರ ಇತರ ಭಾಗಗಳು ಯಾವ ರೀತಿ ಶಬ್ದ ಮಾಡುತ್ತವೆ ಎಂದು ತಿಳಿದುಕೊಳ್ಳುವುದಕ್ಕಾಗಿಯೇ ಸೆಮಿ ಆ್ಯನ್‌ಇಕೋಯಿಕ್ ಚೇಂಬರ್ ಇದೆ. ಕಾರಿನ ಶಬ್ದ ಪ್ರತಿಧ್ವನಿಸದಂತೆ, ಈ ಚೇಂಬರ್ ಸುತ್ತಲಿನ ಗೋಡೆಗೆ ಉದ್ದನೆಯ ರಬ್ಬರ್‌ನಿಂದ ಬಾರ್‌ಗಳನ್ನು ಇಟ್ಟಿರುತ್ತಾರೆ. ನಂತರ ಕಾರಿನ ವೇಗಕ್ಕೆ ತಕ್ಕಂತೆ ಶಬ್ದವನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಶಬ್ದವನ್ನು ಸೆರೆಹಿಡಿಯಲು ಹೈಡೆಫಿನೇಷನ್ ಕ್ಯಾಮೆರಾ ಬಳಸಲಾಗುತ್ತದೆ.

ಹವಾಮಾನ ಪರೀಕ್ಷೆ
ಕಾರುಗಳು ಎಲ್ಲ ಹವಾಮಾನಕ್ಕೂ ಒಗ್ಗಬೇಕು. ಅದಕ್ಕಾಗಿ ಕಾರುಗಳನ್ನು ಮೂಲದಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿಯೇ ಹಾಟ್ ಮತ್ತು ಕೋಲ್ಡ್ ಚೇಂಬರ್‌ಗಳಿವೆ. ಹಾಟ್ ಚೇಂಬರ್‌ನಲ್ಲಿ ಕಾರನ್ನು 55 ಡಿಗ್ರಿಯಷ್ಟು ಉಷ್ಣಾಂಶದಲ್ಲಿಟ್ಟು ಪರೀಕ್ಷಿಸುತ್ತಾರೆ. ಇಲ್ಲಿ ಕಾರಿನ ಏರ್ ಕಂಡಿಷನ್, ಎಂಜಿನ್ ಕೂಲ್ ಆಗುವ ವಿಧಾನ, ವಾಹನದಲ್ಲಿರುವ ವಿದ್ಯುನ್ಮಾನಗಳು ಬಿಸಿಯಾದರೆ ಆಗುವ ಪರಿಣಾಮ, ಕಾರಿನ ಬಣ್ಣ, ಅದರ ಮೇಲ್ಭಾಗದಲ್ಲಿರುವ ಫ್ಯಾಬ್ರಿಕ್ ಮತ್ತು ಚಾವಣಿ ಯಾವ ರೀತಿ ಇರುತ್ತದೆ ಎಂಬ ಎಲ್ಲ ಮಾಹಿತಿಯನ್ನು ತಿಳಿಯಲಾಗುತ್ತದೆ.
ಇನ್ನು ಕೋಲ್ಡ್ ಚೇಂಬರ್‌ನಲ್ಲಿ -40 ಡಿಗ್ರಿಯಲ್ಲಿ ಕಾರನ್ನಿಟ್ಟು ಪರೀಕ್ಷಿಸಲಾಗುತ್ತದೆ. ಅತಿ ಕಡಿಮೆ ಉಷ್ಣಾಂಶದಲ್ಲಿ ಕಾರುಗಳ ಎಂಜಿನ್‌ಗಳು ಕ್ರ್ಯಾಕ್ ಆಗುತ್ತವೆ. ಹೆಚ್ಚು ಕ್ಷಮತೆ ಇರುವುದಿಲ್ಲ ಕೂಡ. ಆಯಿಲ್, ಪೆಟ್ರೋಲ್ ಯಾವ ರೀತಿ ಪ್ರತಿಕ್ರಿಯೆ ತೋರುತ್ತದೆ ಎಂಬುದನ್ನು ತಿಳಿಯಲಾಗುತ್ತದೆ.
ಇವಿಷ್ಟೇ ಅಲ್ಲ, ಸ್ಟೀಯರಿಂಗ್ ರೊಬೊಟ್ ಟೆಸ್ಟ್, ಟ್ರ್ಯಾಕ್ ಟೆಸ್ಟಿಂಗ್, ಎಂಜಿನ್ ಟೆಸ್ಟಿಂಗ್, ಸಸ್ಪೆನ್ಷನ್ ಪ್ಯಾರಾಮೀಟರ್ ಸೇರಿದಂತೆ ಹಲವು ಬಗೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇಷ್ಟೆಲ್ಲ ಪರೀಕ್ಷೆಗಳಾದ ಮೇಲೆ ಒಂದು ಆವಿಷ್‌'ಕಾರ್‌' ಮುಗಿದಂತೆ. ನಂತರ ಇನ್ನೇನಿದ್ದರೂ ತಯಾರು ಮಾಡಿ, ಮಾರುಕಟ್ಟೆಗೆ ಬಿಡುವುದೊಂದೇ ಕೆಲಸ.

- ಬ್ರಹ್ಮಾನಂದ ಎನ್. ಹಡಗಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com