ಸ್ವರ್ಣರಂಜಿತ

ತೆಲುಗುನಾಡು ಆಂಧ್ರಪ್ರದೇಶ ಹಲವು ವಿಶೇಷಗಳ ಧಾಮ.
ಸ್ವರ್ಣರಂಜಿತ
Updated on: 

ತೆಲುಗುನಾಡು ಆಂಧ್ರಪ್ರದೇಶ ಹಲವು ವಿಶೇಷಗಳ ಧಾಮ. ಆಗ್ರಾದಲ್ಲಿನ ತಾಜ್‌ಮಹಲ್, ಪ್ಯಾರೀಸ್‌ನ ಐಫೆಲ್ ಟವರ್ ಇದ್ದಂತೆ ಆಂಧ್ರಕ್ಕೆ ಮುಕುಟಪ್ರಾಯವಾಗಿರುವ ಚಾರ್‌ಮಿನಾರ್, ವಿಶ್ವವಿಖ್ಯಾತ ತಿರುಪತಿಯ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲ, ಗೋಲ್ಕಂಡ ಕೋಟೆ, ಆರ್.ಕೆ. ಬೀಚ್‌ದಿಂದ ತೆನ್ನತ್ತಿ ಪಾರ್ಕ್‌ವರೆಗಿನ ವಿಶಾಖಪಟ್ಟಣದ ಕಡಲ ತೀರದ... ಹೀಗೆ ಹಲವು ಪರಂಪರೆ ಹಾಗೂ ಕೌತುಕದ ಪ್ರವಾಸಿ ತಾಣಗಳಿಂದ ಆಂಧ್ರ ವಿಶ್ವಪ್ರಸಿದ್ಧಿ. ಈ ರಾಜ್ಯದ ಇನ್ನೊಂದು ಆಕರ್ಷಣೆ ಎಂದರೆ ಪುರಾತನ ಹಾಗೂ ಧಾರ್ಮಿಕ ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿರುವುದು ಕಾಳಹಸ್ತಿ ದೇಗುಲ.
ಚಿತ್ತೂರು ಜಿಲ್ಲೆ ವ್ಯಾಪ್ತಿಯ ಈ ದೇಗುಲ ಸ್ವರ್ಣಮುಖಿ ನದಿ ದಂಡೆಯಲ್ಲಿದೆ. ದಕ್ಷಿಣ ಭಾರತದ ಪುರಾತನ ಶಿವ ದೇಗುಲಗಳಲ್ಲಿ ಕಾಳಹಸ್ತಿ ದೇಗುಲವೂ ಒಂದು. ಪಲ್ಲವರ ಕಾಲದಲ್ಲಿ ನಿರ್ಮಿಸಿದ್ದ ಈ ದೇಗುಲ ಹೆಚ್ಚು ಪ್ರಸಿದ್ಧಿಗೆ ಬಂದಿದ್ದು 11ನೇ ಶತಮಾನದಲ್ಲಿದ್ದ ಚೋಳರ ದೊರೆ ಒಂದನೇ ಕುಲೋತ್ತುಂಗ ಚೋಳನ್, ಎರಡನೇ ಕುಲೋತ್ತುಂಗ ಚೋಳನ್ ಮತ್ತು ಮೂರನೇ ಕುಲೋತ್ತುಂಗ ಚೋಳನ್ ಕಾಲದಲ್ಲಿ. 16ನೇ ಶತಮಾನದ ಕೃಷ್ಣದೇವರಾಯ 100 ಬೃಹತ್ ಕಂಬಗಳಿಂದ ಮಹಾಮಂಟಪ ನಿರ್ಮಿಸಿದನಂತೆ. ದಕ್ಷಿಣಕಾಶಿ ಖ್ಯಾತಿಯ ದೇಗುಲದ ಮುಖ್ಯದ್ವಾರದ 500 ವರ್ಷಗಳಷ್ಟು ಹಳೆಯ ರಾಜಗೋಪುರವು 2010, ಮೇ 26ರಂದು ಕುಸಿದುಬಿದ್ದಿದೆ. ಮಹಾಶಿವರಾತ್ರಿ ಹಬ್ಬದಂದು ಇಲ್ಲಿ ನಡೆಯುವ ರಥೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ವಿವಿಧೆಡೆಗಳಿಂದ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ.
ವಿಶೇಷ ಏನೇನು?
ಈ ಕ್ಷೇತ್ರಕ್ಕೆ ಕಾಳಹಸ್ತಿ ಹೆಸರು ಬಂದಿರುವುದರ ಹಿಂದೆ ಕೌತುಕವೆನಿಸುವ ಧಾರ್ಮಿಕ ಹಿನ್ನೆಲೆ ಇದೆ. ಶ್ರೀ (ಜೇಡ), ಕಾಳ (ಸರ್ಪ) ಮತ್ತು ಹಸ್ತಿ (ಆನೆ) ಈ ಮೂರು ಜೀವಿಗಳೂ ಶಿವಾರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರ ಪುರಾಣ ವಿಶೇಷ ಹೊಂದಿವೆ. ದೇಗುಲ ಮುಖ್ಯದ್ವಾರದಲ್ಲೇ ಈ ಮೂರು ಜೀವಿಗಳ ಮೂರ್ತಿಗಳು ಭಕ್ತರು- ಪ್ರವಾಸಿಗರನ್ನು ಗಮನ ಸೆಳೆಯುತ್ತವೆ.
ಸ್ಕಂದ ಪುರಾಣ, ಶಿವ ಪುರಾಣ, ಲಿಂಗ ಪುರಾಣಗಳ ಬಗ್ಗೆ ಅರ್ಥ ವಿವರಣೆ ಹೊಂದಿರುವ ಕ್ಷೇತ್ರ ಶ್ರೀಕಾಳಹಸ್ತಿ.  ಸ್ಕಂದ ಪುರಾಣದಲ್ಲಿ ಈ ಕ್ಷೇತ್ರಕ್ಕೆ ಅರ್ಜುನ ಭೇಟಿ ನೀಡಿ ಭಾರದ್ವಾಜ ಮುನಿಗಳನ್ನು ಇಲ್ಲಿ ಬೆಟ್ಟದಲ್ಲಿ ಭೇಟಿಯಾಗಿದ್ದನೆಂದು ಹೇಳುತ್ತದೆ. ಅಲ್ಲದೆ, ಬೇಡರ ಕಣ್ಣಪ್ಪ ಶಿವನನ್ನು ಆರಾಧಿಸಿದ ತಾಣವೂ ಇದೇ ಕಾಳಹಸ್ತಿ ಎಂಬ ನಂಬಿಕೆ ಇದೆ. ಸೃಷ್ಟಿಕರ್ತ ಬ್ರಹ್ಮ ಸ್ವರ್ಣಮುಖಿ ನದಿಯಲ್ಲಿ ಶಿವನಿಗೆ ಅಭ್ಯಂಗ ಮಾಡುವಂತೆ ಹೇಳುವ ಧಾರ್ಮಿಕ ನಂಬಿಕೆ ಹಿನ್ನೆಲೆಯೂ ಕೌತುಕಮಯ. ನದಿ ಹರಿಯುವಲ್ಲಿ ಚಿನ್ನ ದೊರೆತ ಕಾರಣದಿಂದ ಸ್ವರ್ಣಮುಖಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಕಾಳಹಸ್ತಿ ಸಮೀಪದ ಥೊಂಡಮನಾಡು ಬಳಿ ಪ್ರಸಿದ್ಧ ಪಟ್ಟಾಲಮ್ಮ ಮತ್ತು ಪೆರುಮಾಳ್ ದೇಗುಲವಿದೆ. ಥೊಂಡಮನಾಡು ದೊರೆ ಥೊಂಡಮನ್ ಚಕ್ರವರ್ತಿ ನಿರ್ಮಿಸಿದ ಈ ದೇಗುಲ ಹಲವು ಪರಂಪರೆಯ ಕಲೆಗಳಿಂದ ಕೂಡಿದೆ.
ಶ್ರೀಕಾಳಹಸ್ತಿನಾಥೇಶ್ವರ ಅಥವಾ ಶ್ರೀಕಾಳಹಸ್ತಿನಾಥನ್ ಹೆಸರಿನಿಂದಲೂ ಕರೆಯುವ ಶಿವನ ಆರಾಧನೆಯಲ್ಲಿ ಆನೆ, ಜೇಡ ಮತ್ತು ಸರ್ಪಗಳ ಸೇವೆಯ ಕಥೆ ಭಕ್ತರು ಗಮನಿಸುವುದು ಇಲ್ಲಿನ ವಿಶೇಷ. ಆನೆ ಶಿವಲಿಂಗವನ್ನು ನೀರಿನಿಂದ ಸ್ವಚ್ಛಗೊಳಿಸಿದರೆ, ಜೇಡ ಎಂಜಲಿಂದ ಬಲೆ ನೇಯ್ದು ಶಿವಲಿಂಗದ ರಕ್ಷಣೆ ಮಾಡುತ್ತದೆ. ಇನ್ನು ಕಾಳಸರ್ಪವು ತನ್ನ ಮುಕುಟಮಣಿಯನ್ನು ಲಿಂಗದ ಮೇಲಿಟ್ಟು ದಿವ್ಯಬೆಳಕು ಬೀರಿ ಶಿವನ ಸೌಂದರ್ಯ ಇಮ್ಮಡಿಗೊಳಿಸುವಂಥ ಸೇವೆ ಮಾಡುತ್ತದೆ ಎಂಬ ನಂಬಿಕೆ ಪುರಾಣಗಳಲ್ಲಿದೆ.
ರಾಹು-ಕೇತು ಸರ್ಪದೋಷ ನಿವಾರಣೆ, ನಿತ್ಯ ಕಲ್ಯಾಣೋತ್ಸವ, ನಿತ್ಯ ಅನ್ನದಾನ ಮುಂತಾದ ವಿಶೇಷ ಸೇವೆಗಳನ್ನು ನೆರವೇರಿಸಲು ಭಕ್ತರು ಸದಾ ಉತ್ಸುಕರಾಗಿರುತ್ತಾರೆ.
ಶಿವನಿಂದ ಶಾಪಗ್ರಸ್ತಳಾದ ಪಾರ್ವತಿಯ ಪಾಪ ನಿವಾರಣೆ,ಆಡು ಆಗಿ ಶಾಪಕ್ಕೀಡಾಗುವ ಜ್ಞಾನಕಲಾ ಭೈರವ ಮಂತ್ರ ಜಪಿಸುವುದರ ಕಥೆಯ ಚಿತ್ರಣ ಮನೋಹರ. ಮಯೂರ, ಚಂದ್ರ ಮತ್ತು ದೇವೇಂದ್ರ ತಮ್ಮ ನಿವಾರಣೆಗೆ ಸ್ವರ್ಣಮುಖಿ ನದಿಯಲ್ಲಿ ಮೀಯಲು ಕಾಳಹಸ್ತಿಗೆ ಬಂದಿದ್ದರಂತೆ. ಭಕ್ತ ಮಾರ್ಕಂಡೇಯನ ಭಕ್ತಿಯ ಸಾಕ್ಷಿ ಕ್ಷೇತ್ರವಾಗಿಯೂ ಕಾಳಹಸ್ತಿ ಪ್ರಸಿದ್ಧಿ. ಮಹಾಶಿವರಾತ್ರಿ ಆಚರಣೆಗೆ ಮಹತ್ವ ನೀಡುವ ಬೇಡರ ಕಣ್ಣಪ್ಪನ ಭಕ್ತಿ ಪರಾಕಾಷ್ಠೆಗೂ ಕ್ಷೇತ್ರ ಸಾಕ್ಷಿ.

ಎಷ್ಟಾಗುತ್ತೆ ಖರ್ಚು?
ಬೆಂಗಳೂರಿನಿಂದ ಶ್ರೀಕಾಳಹಸ್ತಿ ಕ್ಷೇತ್ರಕ್ಕೆ ಆರೂವರೆ ತಾಸುಗಳ ಪಯಣ. ಸುಮಾರು 283 ಕಿ.ಮೀ. ತಿರುಪತಿ ಹತ್ತಿರದ ಏರ್‌ಪೋರ್ಟ್. ಅಲ್ಲಿಂದ ಕಾಳಹಸ್ತಿಗೆ ಟ್ಯಾಕ್ಸಿಗಳು ಲಭ್ಯವಿದ್ದು, ಅಂದಾಜು ರು. 750 ವೆಚ್ಚವಾಗಬಹುದು. ಬೆಂಗಳೂರು- ಶ್ರೀಕಾಳಹಸ್ತಿಗೆ ರೈಲು ಮಾರ್ಗದಲ್ಲಿ 7 ತಾಸುಗಳ ಪಯಣ. ಬಸ್‌ಗಳಲ್ಲಿ ತೆರಳಿದರೆ ಸುಮಾರು ರು. 200 ರಿಂದ ರು. 450 ಒಬ್ಬರಿಗೆ ವೆಚ್ಚವಾಗುತ್ತದೆ. ಬೆಂಗಳೂರಿನಿಂದ ನೇರ ಟ್ಯಾಕ್ಸಿ ಸೌಲಭ್ಯ ಪಡೆಯುವುದಾದರೆ ಕನಿಷ್ಠ ರು. 8000 ಟ್ರಿಪ್‌ಗೆ ಮೀಸಲಿಡಬೇಕಾಗುತ್ತದೆ.

- ಶಿವಮೊಗ್ಗ ಗಿರಿಧರ್
 girigadikoppa@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com