

ಇಕೋ ಸ್ಪೋರ್ಟ್ ಮಾರುಕಟ್ಟೆಗೆ ದಾಳಿ ಇಟ್ಟಿರುವುದು ರೆನೋ ಡಸ್ಟರ್‌ಗೆ ಕೊಂಚ ಮಟ್ಟಿಗೆ ನಡುಕ ಹುಟ್ಟಿಸಿದೆ. ಇದರ ಪರಿಣಾಮವಾಗಿಯೇ ಕಂಪನಿ ಡಸ್ಟರ್‌ಗೆ ಆಫರ್‌ಗಳನ್ನು ನೀಡಲಾರಂಭಿಸಿದೆ. ಇದರ ಜತೆಗೆ ಡಸ್ಟರ್‌ಗೆ ಹೊಸ ರೂಪ ನೀಡಲು ನಿರ್ಧರಿಸಿದೆ. ಈ ಎಲ್ಲ ಬದಲಾವಣೆಗಳು ಕೇವಲ ನೋಟಕ್ಕೆ ಸಂಬಂಧಿಸಿದ್ದೇ ಆಗಿರಲಿವೆ. ಈ ವಾಹನದ ಮಾದರಿಯನ್ನು ಇತ್ತೀಚೆಗೆ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಪ್ರದರ್ಶಿಸಲಾಗಿದೆ.
ಎದುರಿನ ಗ್ರಿಲ್, ಮೇಲಿದ್ದ ರೂಫ್‌ರೇಲ್ಸ್, ಡೇ ರನಿಂಗ್ ಲೈಟ್, ಬ್ಲ್ಯಾಕ್‌ಮೆಟಲ್ ಅಲಾಯ್‌ವೀಲ್ಸ್, ಕ್ರೋಮ್ ಪ್ಲೇಟೆಡ್ ಸೈಲೆನ್ಸರ್ ಪೈಪ್ ಮುಂತಾದ ಹೊಸತನಗಳನ್ನು ವಾಹನಕ್ಕೆ ಅಳವಡಿಸಲಾಗಿದೆ. ರೂಫ್‌ರೇಲ್‌ಗಳು ಡಸ್ಟರ್ ಎಂಬ ಹೆಸರು ಪಡೆಯಲಿವೆ. ಇದರ ಜತೆಗೆ ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕಿಂಗ್‌ಗೆ ಸಹಾಯ ಮಾಡಬಲ್ಲ ಸೆನ್ಸರ್‌ಗಳನ್ನೂ ನೀಡಲಾಗಿದೆಯಂತೆ. ಆದರೆ, ಇದು ಭಾರತೀಯ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬುದನ್ನು ಕಂಪನಿ ಹೇಳಿಲ್ಲ.