ಇ2ಒ ಓಟ

ಇ2ಒ ಓಟ
Updated on: 

ಸಣ್ಣ ಕಾರು. ನಿರ್ವಹಣಾ ಖರ್ಚೂ ಸಣ್ಣದು. ಹಾಗಂತ ಶಕ್ತಿ- ಸಾಮರ್ಥ್ಯದಲ್ಲಿ ಖಂಡಿತಾ ಸಣ್ಣದಲ್ಲ. ಸರಿಯಾಗಿ ಚಲಾಯಿಸಿದರೆ ನಗರ ಪ್ರದೇಶದಲ್ಲಿ ಈ ಕಾರನ್ನು ಹಿಂದಿಕ್ಕುವುದು ಕಷ್ಟವಾಗಬಹುದು.
ಇದೆಲ್ಲಕ್ಕಿಂತ ಮುಖ್ಯವಾಗಿ ಪೆಟ್ರೋಲ್ ಬೆಲೆ ಏರಿದರೂ, ಇಳಿದರೂ ನಿಮ್ಮ ಚಾಲನಾ ಆನಂದಕ್ಕೆ ಯಾವುದೇ ಭಂಗವಿಲ್ಲ! ಕಿಸೆಗೂ ಪರಿಸರಕ್ಕೂ ಹಾನಿಯಿಲ್ಲ!!
ಕಾರಣ ಈ ಕಾರು ವಿದ್ಯುತ್ ಚಾಲಿತ. ವಿದ್ಯುತ್ ಚಾಲಿತ ಕಾರುಗಳ ಕ್ಷೇತ್ರದಲ್ಲಿ 'ರೇವಾ' ಪರಿಚಿತ ಹೆಸರು. ಇದನ್ನು ಈಗ ಮಹೀಂದ್ರಾ ಕಂಪನಿ ಖರೀದಿಸಿದೆ. ಕೇವಲ ಖರೀದಿ ಮಾಡಿದ್ದಷ್ಟೇ ಅಲ್ಲ ಕಾರನ್ನು ಸಂಪೂರ್ಣವಾಗಿ ಬದಲಾಯಿಸಿದ ಮತ್ತು ಆಕರ್ಷಕವಾಗಿಸಿದ ಖ್ಯಾತಿ ಮಹೀಂದ್ರಾ ಕಂಪನಿಗೆ ಸಲ್ಲುತ್ತದೆ.
ಹೈಎಂಡ್ ಕಾರುಗಳಲ್ಲಿರುವ ಫುಷ್ ಬಟನ್ ಸ್ಟಾರ್ಟ್, ಕೀ ಲೆಸ್ ಎಂಟ್ರಿ, ಪ್ರಾಜೆಕ್ಟರ್ ಹೆಡ್‌ಲ್ಯಾಂಪ್ಸ್‌ಗಳನ್ನು ನೀಡುವ ಮೂಲಕ ಮಹೀಂದ್ರಾ ಕಂಪನಿ ಇ2ಒ ಕಾರನ್ನು ಯಾವುದೇ ದುಬಾರಿ ಕಾರುಗಳಿಗೆ ಕಡಿಮೆ ಇಲ್ಲದಂತೆ ರೂಪಿಸಿದೆ. ಚಾಲನೆಯಲ್ಲೂ ಈ ಕಾರು ಇತರೆ ಸಾಮಾನ್ಯ ಕಾರುಗಳಿಗಿಂತ ಪ್ರತ್ಯೇಕವಾಗೇನೂ ಇಲ್ಲ.
ಮಹೀಂದ್ರಾ ಕಂಪನಿಯ ಇ2ಒ ಕಾರನ್ನು ಚಲಾಯಿಸಿ, ಪರೀಕ್ಷೆಗೊಳಪಡಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ಲಭ್ಯವಾಗಿತ್ತು.
ಈ ಕಾರಿಗೆ ಗೇರ್ ಇಲ್ಲ. ಎಕ್ಸಿಲರೇಟರ್ ಮತ್ತು ಬ್ರೇಕ್ ಮಾತ್ರ. ಆಟೋ ಗೇರ್ ವ್ಯವಸ್ಥೆ ನಗರ ಸಂಚಾರಕ್ಕೆ ಹೇಳಿ ಮಾಡಿಸಿದ್ದು. ಸಾಮಾನ್ಯವಾಗಿ ಇಂಥ ಕಾರುಗಳಲ್ಲಿ ವೇಗಕ್ಕೆ ಹೆಚ್ಚು ಮಹತ್ವವಿಲ್ಲ. ಆದರೆ ಈ ಕಾರು ಈ ಮಾತಿಗೆ ವ್ಯತಿರಿಕ್ತವಾಗಿತ್ತು. ನಗರ ಪ್ರದೇಶದಲ್ಲಿ ಆರಾಮದಲ್ಲಿ 60-70 ಕಿ.ಮೀ. ವೇಗದಲ್ಲಿ ಕಾರು ಚಲಿಸುತ್ತಿತ್ತು. ಅಷ್ಟೇ ಉತ್ತಮವಾಗಿ ನಿಯಂತ್ರಣಕ್ಕೂ ಬರುತ್ತಿತ್ತು. ಇದು ಸಾಲದೆಂಬಂತೆ ಕಂಪನಿ 'ಬೂಸ್ಟ್‌' ಎಂಬ ಆಯ್ಕೆ ನೀಡಿದೆ. ನೀವು ಬೂಸ್ಟ್ ಆಯ್ಕೆ ಮಾಡಿಕೊಂಡರೆ, ಬಿಲ್ಲಿನಿಂದ ಬಿಟ್ಟ ಬಾಣದಂತೆ ಕಾರು ಮುನ್ನುಗ್ಗುತ್ತದೆ. ರನ್ ಆಯ್ಕೆ ಮಾಡಿಕೊಂಡರೆ ಸಾಮಾನ್ಯ ವೇಗದಲ್ಲಿ ಕಾರು ಚಲಿಸುತ್ತದೆ.
ವಿದ್ಯುತ್ ಚಾಲಿತ ಕಾರುಗಳಲ್ಲಿ ಚಾರ್ಜ್ ಮುಗಿದುಹೋಗುವ ಭಯ. ಸಾಧ್ಯವಾದಷ್ಟೂ ಅದನ್ನು ಪರಿಹರಿಸಲು ಕಂಪನಿ ಪ್ರಯತ್ನಿಸಿದೆ. ಪ್ರಮುಖ ಅಂಶವೆಂದರೆ ಬ್ಯಾಟರಿ ಚಾರ್ಜ್ ಎಷ್ಟಿದೆ ಮತ್ತು ಎಷ್ಟು ದೂರ ಕ್ರಮಿಸಬಲ್ಲದು, ಯಾವ ವೇಗದಲ್ಲಿ ಹೋದರೆ ಹೆಚ್ಚು ಚಾರ್ಜ್ ಬರುತ್ತದೆ ಎಂಬುದನ್ನೆಲ್ಲ ಚಾಲಕನಿಗೆ ತೋರಿಸುವ ಸೌಲಭ್ಯ ಅಳವಡಿಸಲಾಗಿದೆ. ಇದರ ಜತೆಗೆ ಪ್ರತಿ ಬಾರಿ ನೀವು ಎಕ್ಸಿಲರೇಟರ್ ಬಿಟ್ಟಾಗಲೂ ಎಂಜಿನ್ ಟ್ರ್ಯಾಕ್ಷನ್ ಮೂಲಕ ಕಾರಿನ ವೇಗ ಕಡಿಮೆಯಾಗುತ್ತದೆ. ಅಂಥ ಸಂದರ್ಭಗಳಲ್ಲಿ ಎಂಜಿನ್ ಟ್ರ್ಯಾಕ್ಷನ್ ಶಕ್ತಿ ಬಳಸಿಕೊಂಡು ಬ್ಯಾಟರಿ ಚಾರ್ಜ್ ಆಗುವ ವ್ಯವಸ್ಥೆ ಮಾಡಲಾಗಿದೆ. ಇದರ ಪರಿಣಾಮವಾಗಿ ಖರ್ಚಾದ ಬ್ಯಾಟರಿ ಆಗಾಗ ಕೊಂಚ ತುಂಬುತ್ತಿರುತ್ತದೆ.
ಇದಕ್ಕಿಂತ ಮುಖ್ಯವಾಗಿ ಇನ್ನೇನು ಬ್ಯಾಟರಿ ಮುಗಿದೇ ಹೋಯಿತು ಎಂದುಕೊಳ್ಳುವಾಗ ಸಹಾಯಕ್ಕೆ ಬರುವ ರಿವೈವ್ ವ್ಯವಸ್ಥೆಯೊಂದನ್ನು ಕಂಪನಿ ಕಾರಿನಲ್ಲಿ ಅಳವಡಿಸಿದೆ. ಈ ರಿವೈವ್ ಬಟನ್ ಒತ್ತಿದರೆ ಹೆಚ್ಚುವರಿ 8 ಕಿ.ಮೀ. ಕ್ರಮಿಸಲು ಸಾಧ್ಯವಿದೆ. ನೀವು ಈ ಆಯ್ಕೆ ಬಳಸಿಕೊಂಡಾಗಲೆಲ್ಲ ಕಾರು ರಿಚಾರ್ಜ್ ಆಗಲು ಹೆಚ್ಚು ತೆಗೆದುಕೊಳ್ಳುತ್ತದೆ. ಈ ಆಯ್ಕೆ ಮಾಡಿಕೊಂಡರೂ ನೀವು ನಿಮ್ಮ ಗಮ್ಯ ತಲುಪಲು ಸಾಧ್ಯವಾಗುವುದಿಲ್ಲ ಅಂತ ನಿಮಗನ್ನಿಸಿದರೆ ಆಗ ಕಾರಿನಲ್ಲೇ ಇರುವ ಮ್ಯಾಪ್‌ನಲ್ಲಿ ಅತ್ಯಂತ ಸಮೀಪದಲ್ಲಿರುವ ಚಾರ್ಜಿಂಗ್ ಪಾಯಿಂಟ್ ಎಲ್ಲಿದೆ ಎಂಬುದನ್ನು ನೋಡಿ ಅಲ್ಲಿಗೆ ತೆರಳಲೂ ಅವಕಾಶವಿದೆ. ಈ ಸೌಲಭ್ಯ ಟಾಪ್ ಎಂಡ್ ಮಾದರಿ ಕಾರಿನಲ್ಲಿ ಮಾತ್ರ ಲಭ್ಯ.
ಮೊದಲು ರೇವಾ ಕಾರು ಆಕರ್ಷಕವಾಗಿರಲಿಲ್ಲ. ಸಣ್ಣ ಗೂಡಿನ ರೀತಿಯಲ್ಲಿತ್ತು. ಹೊಸ ಮಹೀಂದ್ರಾ ಇ2ಒ ಕಾರು ನೋಡಲು ಆಕರ್ಷಕವಾಗಿದೆ. ಅಷ್ಟೇ ಅತ್ಯಾಧುನಿಕವಾಗಿದೆ. ಒಳಾಂಗಣ ವಿನ್ಯಾಸ ಮತ್ತು ಸ್ಥಳದ ದೃಷ್ಟಿಯಿಂದಲೂ ಉತ್ತಮವಾಗಿದೆ. ಬ್ಯಾಟರಿ ಫುಲ್ ಚಾರ್ಜ್ ಆಗಲು 5 ತಾಸು ಬೇಕು. ಅಂದರೆ ಪ್ರತಿ ತಾಸಿಗೆ ಶೇ.20ರಷ್ಟು ಚಾರ್ಜ್ ಆಗುತ್ತದೆ. ಶೇ.100ರಷ್ಟು ಬ್ಯಾಟರಿ ಚಾರ್ಜ್ ಇದ್ದರೆ 100 ಕಿ.ಮೀ. ಕ್ರಮಿಸಬಹುದು. ಕ್ವಿಕ್ ಟು ಚಾರ್ಜ್ ಆಯ್ಕೆಯೂ ಇದೆ. ಇದರಲ್ಲಿ 1 ತಾಸಿನಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ.
ಇದರ ಜತೆಗೆ ಬೆಂಗಳೂರಿನ ಸಾಕಷ್ಟು ಶಾಪಿಂಗ್ ಮಾಲ್‌ಗಳಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನೀವು ಮಾಲ್‌ನಲ್ಲಿ ಸುತ್ತಾಡುವ, ಸಿನಿಮಾ ನೋಡುವ ಸಮಯದಲ್ಲಿ ನಿಮ್ಮ ಕಾರು ಫುಲ್ ಚಾರ್ಜ್ ಆಗಿ ಸಿದ್ಧವಾಗಿರುತ್ತದೆ. ಇಲ್ಲಿ ನೀವು ಪಾರ್ಕಿಂಗ್ ಚಾರ್ಜ್ ಮಾತ್ರ ನೀಡಿದರೆ ಆಯಿತು. ಚಾರ್ಜಿಂಗ್‌ಗೆ ಬೇರೆ ಹಣ ನೀಡಬೇಕಾದ ಅಗತ್ಯವಿಲ್ಲ.
ವಿಶೇಷವಾಗಿ ಬೆಂಗಳೂರಿನಂಥ ಸಂಚಾರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಎಷ್ಟೇ ಉತ್ತಮ, ಶಕ್ತಿಶಾಲಿ ಕಾರು ತೆಗೆದುಕೊಂಡರೂ 40-50 ಕಿ.ಮೀ.ಗಿಂತ ವೇಗವಾಗಿ ಹೋಗಲು ಸಾಧ್ಯವಿಲ್ಲ. ಅದೇ ವೇಗವನ್ನು ಮಹೀಂದ್ರಾ ಇ2ಒ ಕೂಡ ಆರಾಮವಾಗಿ ನೀಡಬಲ್ಲದು. ಉಳಿದಂತೆ ಬೇರೆ ಕಾರುಗಳಲ್ಲಿರುವ ಎಸಿ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಬಹುತೇಕ ಎಲ್ಲ ಸೌಲಭ್ಯಗಳೂ ಇ2ಒನಲ್ಲಿ ಲಭ್ಯವಿದೆ.
ನಾನು ಗಮನಿಸಿದ ಒಂದೇ ಒಂದು ಮೈನಸ್ ಪಾಯಿಂಟ್ ಅಂದರೆ ದರ. ಟಾಪ್ ಎಂಡ್ ಮಾದರಿಯ ಇ2ಒಗೆ ಬೆಂಗಳೂರಿನಲ್ಲಿ ರು. 6 ಲಕ್ಷವಿದೆ. ಇದರಲ್ಲಿ ಕ್ವಿಕ್ ಟು ಚಾರ್ಜ್ ಸೌಲಭ್ಯವಿದೆ. ಆರಂಭಿಕ ಮಾದರಿಗೆ ರು. 5 ಲಕ್ಷವಿದೆ. ಸರ್ಕಾರ ವಿದ್ಯುತ್ ಚಾಲಿತ ಕಾರುಗಳಿಗೆ ಸಬ್ಸಿಡಿ ನೀಡುವ ನಿರೀಕ್ಷೆಯಿದೆ. ಆಗ ಈ ವಾಹನದ ದರ ಇಳಿಯಬಹುದು. ಆದರೂ ಗ್ರಾಹಕರನ್ನು ಸೆಳೆಯಲು ಕಂಪನಿ ಆರಂಭದಲ್ಲಿ ರು. 4.99 ಲಕ್ಷ ಪಾವತಿಸಿ, ಮುಂದೆ ಪ್ರತಿ ತಿಂಗಳು ರು. 2,599 ಪಾವತಿಸುವ ಅವಕಾಶವೂ ಇದೆ.

= ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com