ಕರ್ನಾಟಕದ ಹೆಮ್ಮೆ ಚಾಲುಕ್ಯರ ನಾಡು ಈ ಬಾದಾಮಿ

ಅಂದಿನ ಚಾಲುಕ್ಯರ ರಾಜಧಾನಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕಾಗಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ....
ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರ ಬಾದಾಮಿ
ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರ ಬಾದಾಮಿ
Updated on

ಬಾದಾಮಿ ಎಂದೊಡನೆ ಕರ್ನಾಟಕವನ್ನಾಳಿದ ಹೆಮ್ಮೆಯ ಚಾಲುಕ್ಯ ರಾಜರು ಮತ್ತು ವಂಶಸ್ಥರು ನೆನಪಾಗುತ್ತಾರೆ. ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಕ್ಷೇತ್ರವೇ ಬಾದಾಮಿ. ಅಂದಿನ ಚಾಲುಕ್ಯರ ರಾಜಧಾನಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕಾಗಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಾದಾಮಿ  ಒಂದು ದೈತ್ಯ ಏಕಶಿಲಾ ಗುಹೆಯಾಗಿದ್ದು, ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ  ಇವೆ.

ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವಿದ್ದು, ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ  ಪಲ್ಲವ ನರಸಿಂಹವರ್ಮನ ಜಯಶಾಸನವನ್ನು ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆ ಮತ್ತು ವಾಸ್ತು ಶಿಲ್ಪದ ತವರೆನಿಸಿಕೊಂಡಿರುವ ಐಹೊಳೆ, ಪಟ್ಟದಕಲ್ಲು, ಚಾಲುಕ್ಯರ  ಪೂರ್ವ ರಾಜಧಾನಿಯಾಗಿತ್ತು ಎಂದು ಹೇಳಲಾಗುವ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ. ಇಲ್ಲಿನ ಶಿಲ್ಪಗಳು ಕಲೆಯನ್ನು ಕಣ್ಣುತುಂಬಾ ವರ್ಣಿಸುತ್ತವೆ. ಕ್ರಿ.ಶ. 543ರಲ್ಲಿ  ಒಂದನೆಯ ಪುಲಿಕೇಶಿಯು ಕೋಟೆಯನ್ನು ನಿರ್ಮಿಸುವುದರ ಮೂಲಕ ಇಲ್ಲಿ ವಾಸ್ತುಚಟುವಟಿಕೆಗಳು ತೀವ್ರಗೊಂಡವು. ಗುಹಾ ದೇವಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು.  ಶೈವಗುಹೆ, ವೈಷ್ಣವ ಗುಹೆ, ನೈಸರ್ಗಿಕ ಗುಹೆಗಳು ಇಲ್ಲಿನ ಪ್ರಮುಖ ಆಕರ್ಷಣೀಯ ಕ್ಷೇತ್ರಗಳಾಗಿವೆ.

ಬಾದಾಮಿ ಶಿವ ಹಾಗೂ ವಿಷ್ಣುವಿನ ದೇವಾಲಯಗಳ ತವರು. ಗುಹಾಂತರ ದೇವಾಲಯಗಳ ನಾಡು. ಸುಂದರ ಹಾಗೂ ಕಲಾತ್ಮಕ ಕೆತ್ತನೆ ಕೆಲಸಗಳು ಇಲ್ಲಿನ ಎಲ್ಲ ಮನೆಮನೆಗಳಲ್ಲೂ ರಾರಾಜಿಸುತ್ತವೆ. ಬಾದಾಮಿಯು ಸುಂದರ ಪುಷ್ಕರಣಿ ಹಾಗೂ ಮಣ್ಣಿನ ಬಣ್ಣದ ಬಳಪದ ಕಲ್ಲಿನ ಗುಡ್ಡಗಳ ನಡುವೆ ಇರುವ ಸುಂದರ ತಾಣ. ಇಲ್ಲಿ ನಡೆಯುವ ನಾಟಕ, ನೃತ್ಯ, ಸಂಗೀತೋತ್ಸವಗಳು  ಉತ್ತರ ಕರ್ನಾಟಕದ ಕಲಾಶ್ರೀಮಂತಿಕೆಯನ್ನು ಬಿಂಬಿಸುತ್ತವೆ.

ಬಾದಾಮಿಯಲ್ಲಿರುವ ಪ್ರಮುಖ ದೇವಾಲಯಗಳು
ಮಲ್ಲಿಕಾರ್ಜುನ ದೇವಾಲಯ

ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲು ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮ ಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು  ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ. ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ. ಈ ದೇವಾಲಯದಲ್ಲಿ  ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ ಕೆತ್ತನೆಗಳಿದ್ದು, ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು  ಹರಿಹರನ ಬಲಕ್ಕೆ ಮತ್ತು ವಿಷ್ಣುವಿನ ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ, ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು.

ಎರಡನೇ ಗುಹೆ


ಎರಡನೇ ಗುಹೆಯಲ್ಲಿ ವಿಷ್ಣುವಿನ ದೇವಾಲಯವಿದ್ದು, ಇಲ್ಲಿ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ. ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು  ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು. 100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ. ಇದರ ಜೊತೆಗೆ  ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ಜೈನ  ದೇವಾಲಯವಾಗಿದ್ದು, ಮಹಾವೀರನು ಕುಳಿತಿರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು.

ಭೂತನಾಥ ದೇವಾಲಯ


ಬಾದಾಮಿಯ ಮತ್ತೊಂದು ಪ್ರಮುಖ ದೇವಾಲಯವೆಂದರೆ ಭೂತನಾಥ ದೇವಾಲಯ. ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು  ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ. ದೇವಾಲಯವು ಸಮಾಂತರವಾದ ವೇದಿಕೆಗಳು, ಬೃಹತ್ ಚೌಕ ಗೋಪುರಾಕೃತಿ ಮತ್ತು ಸಾದಾ ಗೋಡೆಗಳು ಮತ್ತು  ಕೋನವಾದ ಛಾವಣಿಗಳುಳ್ಳ ತೆರೆದ ಮಂಟಪಗಳನ್ನು ಹೊಂದಿದೆ.

ವಸ್ತು ಸಂಗ್ರಹಾಲಯ
ಮೇಲ್ಕಂಡ ದೇವಾಲಯಗಳಷ್ಟೇ ಅಲ್ಲದೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಇಲ್ಲಿ ಒಂದು ವಸ್ತು ಸಂಗ್ರಹಾಲಯವನ್ನು ಕೂಡ ನಿರ್ಮಾಣ ಮಾಡಲಾಗಿದ್ದು, ಈ ವಸ್ತು ಸಂಗ್ರಹಾಲಯವನ್ನು  1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿತ್ತು. ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತ್ತಿದೆ. ಆದರೆ 1982  ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು.

ದಾರಿ ಹೇಗೆ?
ಪ್ರವಾಸಿ ತಾಣ ಬಾದಾಮಿ ಬಿಜಾಪುರದಿಂದ ಸುಮಾರು 120 ಕಿ.ಮೀ. ದೂರದಲ್ಲಿದ್ದು, ಬಿಜಾಪುರದಿಂದ ಬಾದಾಮಿಗೆ ಸರ್ಕಾರಿ ಹಾಗೂ ಸಾಕಷ್ಟು ಖಾಸಗಿ ಸಾರಿಗೆ ವ್ಯವಸ್ಥೆ ಇದೆ. ಕರ್ನಾಟಕ ರಾಜ್ಯ  ರಸ್ತೆ ಸಾರಿಗೆ ಸಂಸ್ಥೆ ಬಾದಾಮಿಗೆ ವಿವಿಧ ಶ್ರೇಣಿಯ ಬಸ್ ವ್ಯವಸ್ಥೆ ಮಾಡಿದೆ. ಇನ್ನು ಸ್ವಂತ ವಾಹನದಲ್ಲಿ ಪ್ರಯಾಣಿಸುವವರು, ನೇರ ಬಿಜಾಪುರಕ್ಕೆ ಬಂದು ಅಲ್ಲಿಂದ ಗುಲ್ಬರ್ಗಾ-ಬಿಜಾಪುರ-ಹುಬ್ಬಳ್ಳಿ  ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 218ರ ಮೂಲಕವಾಗಿ ಸುಮಾರು 93.8 ಕಿ.ಮೀ ಕ್ರಮಿಸಿ ಬಳಿಕ ರಾಜ್ಯ ಹೆದ್ದಾರಿ 133ರಲ್ಲಿ 10.9 ಕಿ.ಮೀ ಕ್ರಮಿಸಿ ಅಲ್ಲಿಂದ ರಾಜ್ಯ ಹೆದ್ದಾರಿ ಸಂಖ್ಯೆ 57 ರಲ್ಲಿ ಸುಮಾರು 11 ಕಿ.ಮೀ ಕ್ರಮಿಸಬೇಕು. ಬಳಿಕ ಕೆಎಂ ಪಟ್ಟಣಶೆಟ್ಟಿ ಪೆಟ್ರೋಲ್ ಬಂಕ್  ಹಾದು ಎಡಕ್ಕೆ ಸುಮಾರು 9.7 ಕಿ.ಮೀ ಕ್ರಮಿಸಿದರೆ ರಾಮದುರ್ಗ ಕ್ರಾಸ್ ದೊರೆಯುತ್ತದೆ. ಈ ಕ್ರಾಸ್ ನಲ್ಲಿ ಸುಮಾರು 500 ಮೀ. ಕ್ರಮಿಸಿ ಬಲಕ್ಕೆ ತಿರುಗಿದರೆ ಬಾದಾಮಿ ರಸ್ತೆ ದೊರೆಯುತ್ತದೆ.

ಇನ್ನು ರೈಲಿನಲ್ಲಿ ಪ್ರಯಾಣಿಸಬೇಕು ಎನ್ನುವವರು ಹುಬ್ಬಳ್ಳಿ-ಸಿಕಂದರಾಬಾದ್, ಯಶವಂತಪುರ-ಬಾರ್ಮರ್, ಧಾರವಾಡ-ಸೊಲ್ಲಾಪುರ, ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ವಿಜಯಪುರ, ಗೋಲ್  ಗುಂಬಜ್ ಎಕ್ಸ್ ಪ್ರೆಸ್, ಗದಗ-ಸೊಲ್ಲಾಪುರ ಎಕ್ಸ್ ಪ್ರೆಸ್ ಮತ್ತು ಹುಬ್ಬಳ್ಳಿ-ಮುಂಬೈ ವೀಕ್ಲಿ ಎಕ್ಸ್ ಪ್ರೆಸ್ ರೈಲುಗಳು ಬಾದಾಮಿಗೆ ಸಂಪರ್ಕ ಕಲ್ಪಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com