ಮೂಲಗಳ ಪ್ರಕಾರ ಪ್ರಸ್ತುತ ಇರುವ ಪ್ರವೇಶ ಟಿಕೆಟ್ ದರ ಏರಿಕೆ ಮಾಡಲು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ನಿರ್ಧರಿಸಿದ್ದು, ಪ್ರಸ್ತುತ ಇರುವ ದರದಲ್ಲಿ ಶೇ. 10 ರಿಂದ ಶೇ.20ರಷ್ಟು ಏರಿಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಎಸ್ ಐ ಪ್ರಸ್ತಾವನೆಯ ಪ್ರಕಾರ, ದೇಶಿ ಪ್ರವಾಸಿಗರು, ಸಾರ್ಕ್ ಮತ್ತು ಬಿಮ್ಸ್‌ಟೆಕ್ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರ ಪ್ರವೇಶದರವನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆಯಂತೆ. ತಾಜ್ ಮಹಲ್ ನ ಟಿಕೆಟ್ ದರದಲ್ಲಿ ಎಎಸ್ ಐ ಹಾಗೂ ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಪಾಲು ಇದ್ದು, ಪ್ರಸ್ತುತ ದೇಶಿ ಪ್ರವಾಸಿಗರಿಗೆ 40 ರೂಪಾಯಿ ಟಿಕೆಟ್ ದರ ಇದೆ. ಈ ಪೈಕಿ 30 ರೂಪಾಯಿ ಎಎಸ್ ಐ ಹಾಗೂ 10 ರೂಪಾಯಿ ಎಡಿಎಗೆ ಸಲ್ಲುತ್ತದೆ. ಇದನ್ನು 50 ರೂಪಾಯಿಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಎಎಸ್ ಐಗೆ 40 ರೂಪಾಯಿ ಪಾಲು ಸಿಗುವ ಸಾಧ್ಯತೆ ಇದೆ.