2019 ರ ಲೋಕಸಭಾ ಚುನಾವಣೆಗೆ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಸರ್ಕಾರ ಬಜೆಟ್ ಮಂಡಿಸಿದ್ದು, ಕೃಷಿಕರು, ಕಾರ್ಮಿಕರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಘೋಷಿಸಿದೆ.
ಇನ್ನು ಮಧ್ಯಮ ವರ್ಗದ ಜನತೆಗೆ ಸಹಕಾರಿಯಾಗುವ ಆದಾಯ ತೆರಿಗೆ ಮಿತಿಯನ್ನೂ 5 ಲಕ್ಷಕ್ಕೆ ವಿಸ್ತರಿಸಲಾಗಿದೆ. ಗ್ರಾಮೀಣ ಭಾರತ, ತೆರಿಗೆ ಪಾವತಿ ಮಾಡುವ ಮಧ್ಯಮ ವರ್ಗದ ಜನತೆ, ಕೃಷಿಕರು ಮೋದಿ ಸರ್ಕಾರದ ಬಜೆಟ್ ನ ಲಾಭದ ಪ್ರಯೋಜನ ಹೊಂದಿದರೆ ಇನ್ನೂ ಕೆಲವರು ನಷ್ಟವನ್ನೂ ಎದುರಿಸಲಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಲಾಭ ಯಾರಿಗೆ?
ರೈತರು: ಮೊದಲೇ ಹೇಳಿದಂತೆ ಕೃಷಿಕರು, ಕಾರ್ಮಿಕರು ಮೋದಿ ಸರ್ಕಾರದ ಬಜೆಟ್ ನ ಲಾಭ ಪಡೆದುಕೊಳ್ಳುವ ಬಹುದೊಡ್ಡ ವರ್ಗ. ಕೃಷಿ ಯೋಜನೆಗಳಿಗೆ 750 ಬಿಲಿಯನ್ ರೂಪಾಯಿಯನ್ನು ಕೃಷಿ ಆದಾಯ ಬೆಂಬಲ ಯೋಜನೆಗೆ ಮೀಸಲಿರಿಸಲಾಗಿದೆ. 2 ಹೆಕ್ಟೇರ್ ಗಳಿಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತನ ಖಾತೆಗೆ 6,000 ರೂಪಾಯಿ ಪ್ರತಿ ವರ್ಷ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. 12 ಕೋಟಿ ರೈತರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ತೆರಿಗೆ ಪಾವತಿಸುವವರು: 500,000 ವರೆಗೆ ಆದಾಯ ಹೊಂದಿರುವವರು ಸಂಪೂರ್ಣವಾಗಿ ತೆರಿಗೆ ಪಾವತಿ ಮಾಡುವಂತಿಲ್ಲ. ಇನ್ನು 650,000 ರೂ ವರೆಗೆ ಆದಾಯ ಹೊಂದಿರುವವರು ವಿವಿಧ ರೀತಿಯ ಹೂಡಿಕೆ ಮಾಡಿದ್ದರೆ ತೆರಿಗೆ ವಿನಾಯಿತಿ ಸಿಗಲಿದೆ. ಇದರಿಂದ ಸುಮಾರು 30 ಮಿಲಿಯನ್ ಮಧ್ಯಮವರ್ಗದ ಕುಟುಂಬಗಳಿಗೆ ಲಾಭವಾಗಲಿದೆ
ಗ್ರಾಮೀಣ ಭಾರತ: ಬಜೆಟ್ ನಲ್ಲಿ ಪಶುಸಂಗೋಪನೆ, ಮೀನುಗಾರಿಕೆಗೆ ಹೆಚ್ಚು ಅನುದಾನ ಘೋಷಿಸಲಾಗಿದ್ದು, ಸಣ್ಣ ಹಾಗೂ ಮಧ್ಯಮ ಉದ್ಯಮಕ್ಕೆ ತೆರಿಗೆ ವಿನಾಯಿತಿ ಗ್ರಾಮೀಣ ಭಾರತಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಹಕಾರಿಯಾಗಲಿದೆ.
ರಿಯಲ್ ಎಸ್ಟೇಟ್: ಇದೀಗ ಎರಡು ಮನೆಯ ಆದಾಯವನ್ನ ತೆರಿಗೆಯಿಂದ ಮುಕ್ತ ಗೊಳಿಸಲಾಗಿದೆ. ಅಂದರೆ ತೆರಿಗೆದಾರನ ಬಳಿ ಎರಡಕ್ಕಿಂತ ಹೆಚ್ಚಿನ ಮನೆಯಿದ್ದಾಗ ಮಾತ್ರ ಆತ ಅದರ ಮೇಲೆ ತೆರಿಗೆ ನೀಡಬೇಕು. ಮನೆ ಖರೀದಿಸುವವರಿಗೆ ಬೆಜೆಟ್ ನಲ್ಲಿ ನೀಡಲಾಗಿರುವ ವಿನಾಯಿತಿಯಿಂದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಸಹ ಲಾಭವಾಗಲಿದೆ.
ಮೋದಿ: ಹೌದು ಈ ಬಜೆಟ್ ನಿಂದ ಅತಿ ಹೆಚ್ಚು ಲಾಭವಾಗುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೇನೆ. ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತರು, ಕೃಷಿಕರು ಮಧ್ಯಮವರ್ಗದವರನ್ನು ಆಕರ್ಷಿಸುವಂತಹ ಬಜೆಟ್ ಮಂಡನೆಯಾಗಿದ್ದು 2019 ರ ಲೋಕಸಭಾ ಚುನಾವಣೆಗೆ ಮೋದಿ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ನಷ್ಟ ಯಾರಿಗೆ
ಬಾಂಡ್ ಹೋಲ್ಡರ್ ಗಳಿಗೆ: ಬಜೆಟ್ ನ ಅಂತರ ಶೇ.3.4 ರಷ್ಟಿದ್ದು ಎರಡನೇ ವರ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಹಣಕಾಸಿನ ಕೊರತೆ ಟಾರ್ಗೆಟ್ ನ್ನು ತಲುಪುವುದಕ್ಕೆ ಸಾಧ್ಯವಾಗುವುದಿಲ್ಲ. ದೇಶದ ಕ್ರೆಡಿಟ್ ರೇಟಿಂಗ್ ನಲ್ಲಿ ಕುಸಿತವಾದರೆ ಬಾಂಡ್ ಹೋಲ್ಡರ್ ಗಳಿಗೆ ಇದರಿಂದಾಗಿ ಸಮಸ್ಯೆ ಎದುರಾಗಲಿದೆ. ಈಗಾಗಲೇ ಮೂಡೀಸ್ ಬಜೆಟ್ ನ್ನು ಆದಾಯ ಹೆಚ್ಚಿಸಲು ಹೊಸ ನೀತಿಗಳಿಲ್ಲದ ಬಜೆಟ್ ಎಂದು ಹೇಳಿದೆ.
2019 ನೇ ಸಾಲಿನ ಬಜೆಟ್ ಘೋಷಣೆಯಾದ ಬೆನ್ನಲ್ಲೇ ದೇಶಿಯ ಬಾಂಡ್ ಗಳು ಕುಸಿತ ಕಂಡಿವೆ.
ವಿಪಕ್ಷಗಳು: ಮೋದಿ ಸರ್ಕಾರದ ಜನಪ್ರಿಯ ಬಜೆಟ್ ನಿಂದ ಮೋದಿ ಅತಿ ಹೆಚ್ಚು ಲಾಭ ಪಡೆದರೆ ತೀವ್ರ ನಷ್ಟ ಎದುರಿಸುವವರೆಂದರೆ ಅದು ವಿರೋಧಪಕ್ಷದವರು, ಬಜೆಟ್ ನಿಂದಾಗಿ ಮಧ್ಯಮವರ್ಗ, ರೈತರು, ಕೃಷಿಕರ ಮನಸ್ಥಿತಿ ಮತವಾಗಿ ಪರಿವರ್ತನೆಯಾದರೆ ಅದು ವಿಪಕ್ಷಗಳಿಗೆ ತೀವ್ರ ನಷ್ಟ ಉಂಟಾಗಲಿದೆ.