ಕುಸಿದ ಸೆನ್ಸೆಕ್ಸ್

Updated on: 

ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕ ಕೆಂಪು ದೀಪವನ್ನು ತೋರಿಸುತ್ತಿದೆ. ಸದ್ಯಕ್ಕೆ ಪೇಟೆಯಲ್ಲಿ ಹೆಚ್ಚಿನ ಉತ್ಸಾಹ ಮೂಡುವ ಸಂಭವ ಕಡಿಮೆ, ವಿದೇಶೀ ಫಂಡ್‌ಗಳು ಇಲ್ಲಿಂದ ಹಣವನ್ನು ಬೇರೆ ಕಡೆಗೆ ರವಾನಿಸುವುದನ್ನು ಆರಂಭಿಸಿವೆ. ಅದು ಈಗಿನ ಅನಿಶ್ಚಿತ ಸನ್ನಿವೇಶದಲ್ಲಿ ತೀರ ಸಹಜ ಪ್ರತಿಕ್ರಿಯೆ.
ಷೇರು ಬಜಾರಿನ ಕುಸಿತಕ್ಕೆ ಅಮೆರಿಕದಲ್ಲಿ ಕಂಡು ಬಂದಿರುವ ಕೆಟ್ಟ  ಪರಿಸ್ಥಿತಿ, ದಕ್ಷಿಣ ಕೊರಿಯಾದಲ್ಲೇನಾಗುವುದೋ ಎನ್ನುವ ಗಾಬರಿಯೂ ಕಾರಣವಾಗಿರಬಹುದು. ಆದರೆ ಇಲ್ಲಿನ ಪೇಟೆಯ ಆಂತಂರಿಕ ಸ್ಥಿತಿಯೂ ಚೆನ್ನಾಗಿಲ್ಲ. ಹಲವು ಪಂಡಿತರ ಪ್ರಕಾರ ಭಾರತೀಯ ಪೇಟೆಗಳಲ್ಲಿ ವಿದೇಶೀ ಆಸಕ್ತಿ ಚಿಗುರುವುದಾದರೆ ಅದಕ್ಕೆ ಕನಿಷ್ಠ ಎರಡು-ಮೂರು ವಾರವಾದರೂ ಬೇಕು. ಅದೂ ಖಾತ್ರಿ ಇಲ್ಲ.
ಸ್ವದೇಶಿ ಫಂಡ್ ಮ್ಯಾನೇಜರ್‌ಗಳೂ ಷೇರುಗಳನ್ನು ಮಾರುವುದರಲ್ಲಿ ಹಿಂದೆ ಬಿದ್ದಿಲ್ಲ. ಅದು ಅವರಿಗೆ ಅನಿವಾರ್ಯ. ಫಂಡ್‌ಗಳಲ್ಲಿ ಹಣ ಹೂಡಿರುವುದು ಕೇಳಿದಾಗ ಅವರು ಹಾಕಿದ ಹಣವನ್ನು ಕೊಡಲೇಬೇಕಲ್ಲ.
ಕಳೆದ ವಿತ್ತೀಯ ವರ್ಷದಲ್ಲಿ ಸುಮಾರು 22,750 ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಫಂಡ್‌ಗಳು ಮಾರಿವೆ. 2011-12 ರಲ್ಲಿ ಈ ಫಂಡ್‌ಗಳು ಮಾರಿದ ಷೇರುಗಳ ಪ್ರಮಾಣಕ್ಕಿಂತ ಇದು ಹದಿನೇಳು ಪಟ್ಟು ಹೆಚ್ಚು.
ಸೆನ್ಸೆಕ್ಸ್ ಹೆಚ್ಚಿದಾಗಲೆಲ್ಲ, ಹೂಡಿಕೆದಾರರು ಫಂಡ್‌ಗಳಲ್ಲಿ ಹೂಡಿದ್ದ ಹಣವನ್ನು ಹಿಂದಕ್ಕೆ ತೆಗೆದು ಬೇರೆ ಷೇರುಗಳತ್ತ ತಿರುಗುವುದು ಸಹಜವೇ. ಮ್ಯೂಚ್ಯುಯಲ್ ಫಂಡ್‌ಗಳಿಗೆ ಈಗ ಒಳಹರಿವು ಕಡಿಮೆಯಾಗುತ್ತಿದೆ, ಆದರೆ ಹೂಡಿಕೆದಾರರ ಒತ್ತಡ ಹೆಚ್ಚುತ್ತಿದೆ.
ಮ್ಯೂಚ್ಯುಯಲ್ ಫಂಡ್‌ಗಳ ಸಂಘಟನೆಯ ಅಧಿಕೃತ ಪ್ರಕಟಣೆಯಂತೆ ಫೆಬ್ರವರಿಯವರೆಗೆ ಈಕ್ವಿಟಿ (ಷೇರು) ಫಂಡ್‌ಗಳು 15,354 ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಮಾರಿದ್ದವು.
ಬ್ಯಾಂಕ್‌ಗಳ ಗೋಳು
ಸರ್ಕಾರ ಹೆಚ್ಚು ಹಣವನ್ನು ಖರ್ಚು ಮಾಡುತ್ತಿಲ್ಲ. ಬಿಲ್‌ಗಳ ಪಾವತಿಯನ್ನು ಮುಂದಕ್ಕೆ ಹಾಕುತ್ತಿದೆ. ಒಟ್ಟಿನಲ್ಲಿ ಕೈ ಬಿಗಿ ಹಿಡಿದಿದೆ. ಆ ಕೈಯನ್ನೇ ನಂಬಿರುವ ವ್ಯವಹಾರಸ್ಥರೂ ತಾವು ಬ್ಯಾಂಕ್‌ಗಳಿಗೆ ಕೊಡಬೇಕಾದ ಸಾಲದ ಕಂತುಗಳು ಹಾಗೂ ಬಡ್ಡಿಯ ಪಾವತಿಯನ್ನು ಮುಂದಕ್ಕೆ ಹಾಕುತ್ತಿವೆ. ಇದರ ಪರಿಣಾಮವಾಗಿ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳು ತಮಗೆ ತಾವೇ ನಿಗದಿಪಡಿಸಿದ್ದ ಗುರಿಗಳನ್ನು ಮುಟ್ಟುವುದು ಕಷ್ಟ.
ಕೆಟ್ಟ ಸಾಲದ ಪಟ್ಟಿಗೆ ಸೇರಿಸದೇ ಇರಲು, ಒಳ್ಳೆಯ ಗ್ರಾಹಕರಿಗೆ ಅಧಿಕ ಸಾಲವನ್ನು ನೀಡಿ, ಅದನ್ನು ಹಳೆಯ ಸಾಲಕ್ಕೆ ವಜಾ ಮಾಡಿಕೊಳ್ಳುವ ಲೆಕ್ಕಾಚಾರದ ತಂತ್ರದ ಬಳಕೆಗೂ ಇತಿ-ಮಿತಿ ಇದೆ. ಅದನ್ನು ವಿಪರೀತದ ಮಟ್ಟಕ್ಕೆ ಕೊಂಡೊಯ್ಯುವುದು ಬ್ಯಾಂಕ್‌ಗಳಿಗೇ ಹಾನಿಕರ. ಇದರಿಂದ ಈಗಾಗಲೇ ಅನೇಕ ಬ್ಯಾಂಕರುಗಳು ತಮ್ಮ ವಾರ್ಷಿಕ ಸಾಲದ ಪ್ರಮಾಣ ಕುಗ್ಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕೊನೆ ಮಾತು

ಅನೇಕ ಸಂಸ್ಥೆಗಳ ಪ್ರಾಯೋಜಕರು ತಮ್ಮ ಷೇರುಗಳನ್ನು ಬೇರೆಯವರ ಹೆಸರಿನಲ್ಲಿಟ್ಟು, ಬಗೆಬಗೆಯ ರೀತಿಯಲ್ಲಿ ವ್ಯವಹಾರ ನಡೆಸಿ ಬೆಲೆಗಳ ಏರುಪೇರಿಗೆ ಕಾರಣರಾಗಿದ್ದಾರೆನ್ನುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಸೆಬಿಯ ಆದೇಶದಂತೆ, ಅನೇಕ ದಲ್ಲಾಳಿಗಳು ದೊಡ್ಡ ಪ್ರಮಾಣದ ಷೇರುಗಳ ಮಾರಾಟದ ಸಂಬಂಧದಲ್ಲಿ, ಷೇರು ಕೊಂಡವರಿಗೂ ಪ್ರಾಯೋಜಕರಿಗೂ ಸಂಬಂಧವಿಲ್ಲ ಎನ್ನುವ ಪ್ರಮಾಣ  ಪತ್ರವನ್ನು ಪಡೆಯುತ್ತಿದ್ದಾರೆ.

-ಸತ್ಯ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com