ವಾಣಿಜ್ಯ

ಬಿಸು ಬಿಸು' ಭಾರತೀಯ ಮಾದರಿ ಉಡುಪು ಬಿಡುಗಡೆ

ಬಿಸು ಬಿಸು' ಭಾರತೀಯ ಮಾದರಿ ಉಡುಪು ಬಿಡುಗಡೆ
Published On :

ರಿಲಯನ್ಸ್ ಟ್ರೆಂಡ್ಸ್ ಸಂಸ್ಥೆ ಮಿಶೆಲ್ ಬೊಹೋಟ್ ವಿನ್ಯಾಸಗೊಳಿಸಿರುವ ನೂತನ 'ಬಿಸು ಬಿಸು' ಭಾರತೀಯ ಮಾದರಿ ಉಡುಪುಗಳನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ಋತುವಿಗೆ ಹೊಂದುವಂತಹ ಅಲಂಕಾರಿಕ ಬಟ್ಟೆಯನ್ನು ವಿನ್ಯಾಸಗೊಳಿಸಲಾಗಿದೆ. ನೈಸರ್ಗಿಕ ಕಲ್ಪನೆ ಹಾಗೂ ಆಧುನಿಕ ಕಲೆಗಳ ಸಮ್ಮಿಲನವನ್ನು ಇದು ಹೊಂದಿದೆ. ಪ್ಯಾಸ್ಟಲ್ ಪುಷ್ಪ ಹಾಗೂ ಮೊಸೈಕ್ ಮುದ್ರಣ ಶೈಲಿಯ ಮಿಶ್ರಣವನ್ನು ಈ ಸಂಗ್ರಹಗಳು ಹೊಂದಿವೆ. ಲೆಮನ್ ಡ್ರೀಮ್, ವೆಕೇಷನ್ ಗ್ರೀನ್ ಹಾಗೂ ಆಫ್ರಿಕನ್ ಲಿಲ್ಯಾಕ್‌ನಂತಹ ಬಣ್ಣಗಳನ್ನು ಬಳಸಿ ಉಡುಪು ವಿನ್ಯಾಸ ಮಾಡಲಾಗಿದೆ. ವಿಶ್ವದ ಪ್ರಮುಖ ಮಹಿಳಾ ಉದ್ಯಮಿ ಹಾಗೂ ವಿನ್ಯಾಸಗಾರ್ತಿ ಎಂಬ ಖ್ಯಾತಿಗೆ ಒಳಗಾಗಿರುವ ಮಿಶೆಲ್ ಬೊಹೋಟ್ 1989ರಿಂದ 'ಬಿಸು ಬಿಸು' ಬ್ರಾಂಡ್‌ನಲ್ಲಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಫ್ರೆಂಚ್ ಭಾಷೆಯಲ್ಲಿ ಬಿಸು ಬಿಸು ಎಂದರೆ ಒಂದು ಕಿರು ಚುಂಬನ ಎಂದರ್ಥ. '19 ರಾಜ್ಯಗಳ 75 ನಗರಗಳಲ್ಲಿ 125ಕ್ಕೂ ಅಧಿಕ ಮಳಿಗೆ ಹೊಂದಿರುವ ರಿಲಯನ್ಸ್ ಟ್ರೆಂಡ್ಸ್ ಸಂಸ್ಥೆಯು ಜಾಗತಿಕ ಹಾಗೂ ಭಾರತೀಯ ವಸ್ತ್ರ ವಿನ್ಯಾಸವನ್ನು ಪ್ರಚುರಗೊಳಿಸಲು ಪ್ರಯತ್ನಪಡುತ್ತಿದೆ. ನೂತನ ಬಿಸು ಬಿಸು ಬ್ರಾಂಡ್‌ನ ಉತ್ಪನ್ನವು ಬಟ್ಟೆ ಪ್ರಿಯರಿಗೆ ರಸದೌತಣ ನೀಡಲಿದೆ' ಎಂದು ರಿಲಯನ್ಸ್ ಟ್ರೆಂಡ್ಸ್‌ನ ಸಿಇಓ ಅಖಿಲೇಶ್ ಪ್ರಸಾದ್ ಹೇಳಿದರು.


ಕಲ್ಲಿನಾಯಕನಹಳ್ಳಿಗೆ ಕುಡಿವ ನೀರಿನ ವ್ಯವಸ್ಥೆ

ಚಿಕ್ಕಬಳ್ಳಾಪುರದ ಕಲ್ಲಿನಾಯಕನಹಳ್ಳಿಯ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮೊನ್‌ಸ್ಯಾಂಟೊ ಹಾಗೂ ಆ್ಯಕ್ಷನ್ ಫಾರ್ ಫುಡ್ ಪ್ರೊಡಕ್ಷನ್ ಸಂಸ್ಥೆಯು ಕೊಳವೆಬಾವಿ ನಿರ್ಮಿಸಿಕೊಟ್ಟಿದೆ. ಗಂಟೆಗೆ 10 ಸಾವಿರ ಲೀಟರ್ ನೀರು ಪೂರೈಸುವ ಯಂತ್ರವನ್ನು ಕೊಳವೆ ಬಾವಿಗೆ ಅಳವಡಿಸಲಾಗಿದ್ದು, ಗ್ರಾಮದ 650ಕ್ಕೂ ಹೆಚ್ಚು ಜನರಿಗೆ ಲಾಭವಾಗಲಿದೆ. ದಿನನಿತ್ಯದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಲಿದ್ದು, ಇವೆರಡು ಖಾಸಗಿ ಕಂಪನಿಗಳು ಆರ್ಥಿಕ ನೆರವು ನೀಡಲಿವೆ. ಕೃಷಿ ಸಂಬಂಧಿತ ಉದ್ಯಮದಲ್ಲಿ ಕಂಪನಿಯು ಪಾಲ್ಗೊಂಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ಕೊಳವೆ ಬಾವಿ ತೆರೆಯಲು ಸಂಸ್ಥೆ ಚಿಂತಿಸಿದೆ ಎಂದು ಮೊನ್‌ಸ್ಯಾಂಟೊ ಸಂಸ್ಥೆಯ ಹಿರಿಯ ಅಧಿಕಾರಿ ವಿ.ಕೆ. ಕಿಶೋರ್ ಹೇಳಿದರು.


5ರಿಂದ ಅಗ್ನಿ ಸುರಕ್ಷತಾ ತಂತ್ರಜ್ಞಾನ ಪ್ರದರ್ಶನ


ಭದ್ರತಾ ವ್ಯವಸ್ಥೆ ಹಾಗೂ ಅಗ್ನಿ ಸುರಕ್ಷತಾ ತಂತ್ರಜ್ಞಾನ ಕುರಿತಂತೆ ನೋಯಿಡಾದಲ್ಲಿ ಡಿ.5ರಿಂದ 7ರವರೆಗೆ ಅಂತಾರಾಷ್ಟ್ರೀಯ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದೆ. ನಾಗರಿಕ ಹಾಗೂ ವಾಣಿಜ್ಯ ಕ್ಷೇತ್ರದ ಭದ್ರತೆ ಮತ್ತು ಅಗ್ನಿ ಅವಘಡಗಳನ್ನು ನಿಯಂತ್ರಿಸುತ್ತಿರುವ ಸಂಸ್ಥೆಗಳಿಗೆ ನೂತನ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿದೆ. ಇವತ್ತಿನ ದಿನಮಾನಕ್ಕೆ ಅನಿವಾರ್ಯವಾಗಿರುವ ಆಧುನಿಕ ಸುರಕ್ಷತಾ ತಂತ್ರಾಂಶ, ಸಾಧನ ಹಾಗೂ ಭದ್ರತಾ ಸೇವೆಗಳ ಕುರಿತಂತೆ ಪ್ರದರ್ಶನದಲ್ಲಿ ನೂರಾರು ಜಾಗತಿಕ ಕಂಪನಿಗಳು ಭಾಗವಹಿಸಲಿವೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಉದ್ಯಮವು ಬೆಳೆಯುತ್ತಿದೆ. ಹಾಗೆಯೇ ಗ್ರಾಹಕರ ಬೇಡಿಕೆ ಕೂಡ ಬದಲಾಗುತ್ತಿದೆ. ನೋಯಿಡಾದ ಇಂಡಿಯಾ ಎಕ್ಸ್‌ಪೋ ಕೇಂದ್ರದಲ್ಲಿ 15 ಸಾವಿರ ಚದರ ಮೀಟರ್ ವಿಸ್ತಾರದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಚೀನಾ, ಫ್ರಾನ್ಸ್ ಸೇರಿದಂತೆ 20ಕ್ಕೂ ಅಧಿಕ ದೇಶಗಳಿಂದ 250 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಐಎಫ್‌ಎಸ್‌ಇಸಿ ಆಯೋಜಿಸುತ್ತಿರುವ ಈ ಪ್ರದರ್ಶನವು ಏಷ್ಯಾದ ಅತಿ ದೊಡ್ಡ ಭದ್ರತಾ ಪ್ರದರ್ಶನವಾಗಲಿದೆ. ಬ್ಯಾಂಕ್, ಖಾಸಗಿ ಕಚೇರಿಗಳು, ಶಾಲಾ-ಕಾಲೇಜು, ಹೋಟೆಲ್, ಆಸ್ಪತ್ರೆ, ರೈಲ್ವೆ, ವಿಮಾನ ನಿಲ್ದಾಣ ಹಾಗೂ ಕ್ರೀಡಾಂಗಣಗಳ ಭದ್ರತೆಯು ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಪ್ರದರ್ಶನವು ಕೆಲವು ಪರಿಹಾರ ಮಾರ್ಗಗಳನ್ನು ಸೂಚಿಸಬಹುದು ಎಂದು ಆಯೋಜಕ ಜೋಜಿ ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.



ಗ್ರೀನ್ ಟ್ರೆಂಡ್‌ನ 149ನೇ ಸಲೂನ್ ಆರಂಭ

ಗ್ರೀನ್ ಟ್ರೆಂಡ್ ಸಂಸ್ಥೆಯು ತನ್ನ 149ನೇ ಸಲೂನ್‌ನನ್ನು ಜಯನಗರದಲ್ಲಿ ಪ್ರಾರಂಭಿಸಿದೆ. ಕರ್ನಾಟಕದ 16ನೇ ಸಲೂನ್ ಕೇಂದ್ರವನ್ನು ನಟಿ ಕಾವ್ಯಾ ಶೆಟ್ಟಿ ಉದ್ಘಾಟಿಸಿದರು. ಸಲೂನ್ ಕೇಂದ್ರವು 7 ಹೇರ್ ಝೋನ್, 2 ಹೇರ್ ವಾಶ್ ಝೋನ್ ಹಾಗೂ ತಲಾ ಮೂರು ಫೇಶಿಯಲ್, ಸ್ಪಾ ಮತ್ತು ಪೆಡಿಕ್ಯೂರ್ ಝೋನ್‌ನ್ನು ಹೊಂದಿದೆ. ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದ ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಗೋಪಾಲಕೃಷ್ಣನ್ ಮಾತನಾಡಿ, ಸಂಸ್ಥೆಯು ಫ್ರೆಂಚೈಸಿ ಮಾದರಿಯಲ್ಲಿ ಉದ್ಯಮವನ್ನು ವಿಸ್ತರಿಸಲು ಮುಂದಾಗಿದೆ. ಇದರ ಪ್ರಾಥಮಿಕ ಅಂಗವಾಗಿ ಜಯನಗರದಲ್ಲಿಯೇ 2ನೇ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮುಖ ಹಾಗೂ ಕೂದಲಿನ ಸೌಂದರ್ಯ ಕುರಿತಂತೆ ಹೊಸ ಮೈಲಿಗಲ್ಲು ಸ್ಥಾಪಿಸಬೇಕು ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು. ಕಳೆದ ಒಂದು ವರ್ಷದಲ್ಲಿ ಫ್ರಾಂಚೈಸಿ ಮಾದರಿಯಲ್ಲಿ 54 ಕೇಂದ್ರವನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. ಇನ್ನು ಕೆಲ ಕೇಂದ್ರಗಳನ್ನು ಶೀಘ್ರವಾಗಿ ತೆರೆಯಲಾಗುವುದು. ಈಗಾಗಲೇ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಫ್ರಾಂಚೈಸಿಗಳಿಗೆ ಸಂಸ್ಥೆಯು ಸೂಕ್ತ ತರಬೇತಿ ಹಾಗೂ ನೆರವು ನೀಡಲಿದೆ ಎಂದು ಅವರು ಗೋಪಾಲಕೃಷ್ಣನ್ ತಿಳಿಸಿದರು. ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಕೂದಲು ವಿನ್ಯಾಸಕ್ಕೆ ಸಂಬಂಧಿಸಿ ಫ್ಯಾಶನ್ ಶೋ ಆಯೋಜಿಸಲಾಗಿತ್ತು.



ಬಯೋಕಾನ್ ಸಂಸ್ಥೆಯಿಂದ ಶೈಕ್ಷಣಿಕ ಅಕಾಡೆಮಿ
ಅನ್ವಯಿಕ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿಷ್ಠಿತ ಬಯೋಕಾನ್ ಸಂಸ್ಥೆಯು ಶೈಕ್ಷಣಿಕ ಅಕಾಡೆಮಿ ಪ್ರಾರಂಭಿಸಿದೆ. ಭಾರತೀಯ ಜೈವಿಕ ಕ್ಷೇತ್ರಕ್ಕೆ ಉದ್ಯಮಸಿದ್ಧ ಪ್ರತಿಭೆಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಜೈವಿಕ ವಿಜ್ಞಾನದ ಉತ್ತಮ ಶಿಕ್ಷಣವನ್ನು ಈ ಅಕಾಡೆಮಿ ನೀಡಲಿದ್ದು, ವಿಜ್ಞಾನ ಪದನೀಧರರಿಗೆ ಹೆಚ್ಚಿನ ವೃತ್ತಿಪರತೆ ಕಲಿಸಲಿದೆ. ಉದ್ಯಮ ಮತ್ತು ಅಕಾಡೆಮಿಗೆ ಸಂಪರ್ಕ ಕಲಿಸುವ ಮೂಲಕ ಜೈವಿಕ ತಂತ್ರಜ್ಞರಿಗೆ ಗರಿಷ್ಠ ಅವಕಾಶ ನೀಡಲಿದೆ. ಜತೆಗೆ ಉದ್ಯಮದಲ್ಲಿನ ಕೊರತೆ ನೀಗಿಸುವಲ್ಲಿಯೂ ಸಹಾಯವಾಗಲಿದೆ ಎಂದು ಅಕಾಡೆಮಿ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಲಿರ್ಫೋನಿಯಾದ ಕೆಕ್ ಗ್ರ್ಯಾಜ್ಯುಯೇಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿದ್ದು, 16 ವಾರಗಳ ಪೂರ್ಣಾವಧಿ ಪ್ರಮಾಣಪತ್ರ ಕೋರ್ಸ್ ಇದಾಗಲಿದೆ. ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಡಿ.6ರವರೆಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಯೋಕಾನ್ ಸಂಸ್ಥೆಯೇ ಶೇ.75ರಷ್ಟು ಸಹಾಯ ಧನ ನೀಡಲಿದೆ. ಪ್ರತಿ ಕೋರ್ಸ್‌ಗೆ 30 ಜನರಿಗೆ ಅವಕಾಶವಿದ್ದು, ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಯೋಕಾನ್ ವೆಬ್‌ಪುಟದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ.


21ರಂದು 'ಸ್ಮಿರ್ನಾಫ್ ಅನುಭೂತಿ' ಕಾರ್ಯಕ್ರಮ

ಸಂಗೀತ ಪ್ರಿಯರ ಮನ ತಣಿಸುವ ನಿಟ್ಟಿನಲ್ಲಿ ಡಿ.21ರಂದು ಬೆಂಗಳೂರಿನಲ್ಲಿ 'ಸ್ಮಿರ್ನಾಫ್ ಅನುಭೂತಿ' ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಮ್ಯಾನ್ಫೋ ಸಭಾಭವನದಲ್ಲಿ ನಡೆಯಲಿರುವ ಸಂಗೀತೋತ್ಸವದಲ್ಲಿ ಭಾರತೀಯ ಸಂಗೀತದ ನಾನಾ ಪ್ರಕಾರಗಳನ್ನು ಪ್ರಚುರಪಡಿಸಲಾಗುತ್ತದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ಮಾಡಲಾಗುತ್ತಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ತಂಡದ ತಾರೆ ನೆರೊ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಪ್ರಾಮಿಸಿಸ್ ಗಾಯನವನ್ನು ಮರು ಸೃಷ್ಟಿಸಿದ್ದಕ್ಕಾಗಿ ನೆರೊ ಅವರಿಗೆ ಅತ್ಯುತ್ತಮ ರೀಮಿಕ್ಸ್ ರೆಕಾರ್ಡಿಂಗ್ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿತ್ತು. ಇವರ ಜತೆ ಡಬ್‌ಸ್ಟೆಪ್‌ನ ಡಾನ್ ಎಂದೇ ಖ್ಯಾತರಾಗಿರುವ ರುಸ್ಕೊ ಕ್ರಿಸ್ಟೋಫರ್ ಮೆರ್ಸೆರ್ ಅವರ ತಂಡ ಕೂಡ ಭಾಗವಹಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.