ಅಲ್ಯೂಮಿನಿಯಂ ಉದ್ಯಮಕ್ಕೆ ತಂತ್ರಜ್ಞಾನ
ಅಲ್ಯುಮಿನಿಯಂ ಉದ್ಯಮದ ಮಾರ್ಗಸೂಚಿಯನ್ನು ಅಲ್ಯೂಮಿನಿಯಂ ಅಸೋಸಿಯೇಷನ್ ಆಫ್ ಇಂಡಿಯಾ ಬಿಡುಗಡೆಗೊಳಿಸಿದೆ. ನೂತನ ಉತ್ಪನ್ನ, ಮಾರುಕಟ್ಟೆ ವಿಸ್ತರಣೆ ಹಾಗೂ ಸಂಶೋಧನೆಗಳನ್ನು ಆಧರಿಸಿ ಮಾರ್ಗಸೂಚಿ ರೂಪಿಸಲಾಗಿದೆ. 'ಭಾರತದ ಅಲ್ಯೂಮಿನಿಯಂ ಉದ್ಯಮಕ್ಕೆ ತಂತ್ರಜ್ಞಾನ' ಎಂಬ ಹೆಸರಲ್ಲಿ ಮಾರ್ಗಸೂಚಿ ಹೊರತಲಾಗಿದೆ. ಭಾರತೀಯ ಅಲ್ಯೂಮಿನಿಯಂ ಉದ್ಯಮದಲ್ಲಿ ಪ್ರಾಥಮಿಕ ಲೋಹ ಮತ್ತು ಅದರ ಬಳಕೆ ಹೆಚ್ಚುತ್ತಿದೆ. ಆರ್ಥಿಕ ಪ್ರಗತಿಯ ಹಿನ್ನೆಲೆಯಲ್ಲಿ ಲೋಹದ ಬಳಕೆಯೂ ಹೆಚ್ಚುತ್ತದೆ. ಆದರೆ ಉದ್ಯಮದ ಸ್ಥಿರ ಬೆಳವಣಿಗೆಗೆ ಕೆಲ ಮಾರ್ಗಸೂಚಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘವು ಭವಿಷ್ಯದ ಕುರಿತಂತೆ ತನ್ನ ನಿಲುವುಗಳನ್ನು ಈ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿದೆ. ಅಲ್ಯೂಮಿನಿಯಂನ್ನು ಉಕ್ಕಿಗಿಂತಲೂ ಹೆಚ್ಚು ಶಕ್ತಿಯುತ ಹಾಗೂ ಲಘುವಾಗಿಸಲು ಸಾಧ್ಯವಿದೆ. ಆದರೆ ಈ ಬಗ್ಗೆ ಗಂಭೀರ ಸಂಶೋಧನೆಯಾಗಬೇಕಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್.ಎಸ್.ಮೂರ್ತಿ ಹೇಳಿದ್ದಾರೆ. ಭಾರತವು ಅಲ್ಯೂಮಿನಿಯಂ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಆದರೆ ಇದರ ಬಳಕೆ ಹಾಗೂ ಗುಣಮಟ್ಟದ ಬಗ್ಗೆ ಸಂಶೋಧನೆಯಾಗಬೇಕು. ಜತೆಗೆ ಎಲ್ಲ ಕ್ಷೇತ್ರಗಳು ಅಲ್ಯೂಮಿನಿಯಂ ಬಳಕೆಗೆ ಆಸಕ್ತಿ ತೋರಬೇಕು ಎಂದು ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ಕಮಾನಿಯೋ ಚಟ್ಟೋಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.
- ಅತ್ಯಾಧುನಿಕ ಫೋನ್ ಮಾರುಕಟ್ಟೆಗೆ
ಬೀಟೆಲ್ ಟೆಲಿಟೆಕ್ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿನ್ಯಾಸಗಳಿಂದ ಕೂಡಿರುವ ಫೋನ್ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಫೋನ್ ಸಂಗ್ರಹ ಯೋಗ್ಯ ಎಂದು ಕಂಪನಿ ಹೇಳಿಕೊಂಡಿದೆ. ರೌಂಡ್ ಡಿಜಿಟಲ್ ಡಯಲ್ ಸೇರಿದಂತೆ 3.5 ಮಿ.ಮೀ ಆಡಿಯೋ ಜಾಕ್ ನೀಡಲಾಗಿದೆ. ಇದರಿಂದ ಫೋನ್ಗೆ ಇಯರ್ ಫೋನ್ನ್ನು ಕೂಡ ಸಂಪರ್ಕಿಸಬಹುದಾಗಿದೆ. ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳ ಮಿಶ್ರಣದೊಂದಿಗೆ ಫೋನ್ ಲಭ್ಯವಿದೆ. ದೇಶಾದ್ಯಂತ ಇರುವ 4 ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ಇದು ಲಭ್ಯವಿದ್ದು, 1690 ದರ ನಿಗದಿಪಡಿಸಲಾಗಿದೆ. ಈ ಫೋನ್ನ ವಿಶೇಷತೆಯೆಂದರೆ ಕಳುವಾಗದಂತೆ ಅಲರಾಂ ವ್ಯವಸ್ಥೆಮಾಡಲಾಗಿದೆ. ಇದರೊಂದಿಗೆ ಡಿಜಿಟಲ್ ಎಲ್ಸಿಡಿ ಡಿಸ್ಪ್ಲೇ ಕೂಡ ನೀಡಲಾಗಿದೆ. ಇದರಲ್ಲಿ 30 ಒಳ ಹಾಗೂ ಹೊರ ಕರೆಗಳು ಸಂಗ್ರಹವಾಗಿರುತ್ತವೆ. ಭಾರತೀ ಗ್ರೂಪ್ಸನ್ ಭಾಗವಾಗಿರುವ ಬೀಟೆಲ್ ಕಳೆದ 1985ರಿಂದ ಸ್ಥಿರ ದೂರವಾಣಿಗಳನ್ನು ಉತ್ಪಾದಿಸುತ್ತಿದೆ.
-ವಾಟ್ಸ್ ಆ್ಯಪ್ ಸೌಲಭ್ಯ ವಿಸ್ತರಣೆ
ಆಶಾ 501 ಮೊಬೈಲ್ ಬಳಕೆದಾರರಿಗೂ ವಾಟ್ಸ್ ಆ್ಯಪ್ ಸೌಲಭ್ಯವನ್ನು ನೋಕಿಯಾ ಸಂಸ್ಥೆ ಒದಗಿಸಿದೆ. ಜನಪ್ರಿಯ ಮೆಸೇಜಿಂಗ್ ಸೇವೆಯಾಗಿರುವ ವಾಟ್ಸ್ ಆ್ಯಪ್ನ್ನು ಬಹುತೇಕ ಮೊಬೈಲ್ ಬಳಕೆದಾರರು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ನ.21ರಿಂದ ಫೋನ್ ಬಳಕೆದಾರರಿಗೆ ಈ ಅಪ್ಲಿಕೇಷನ್ ಸೌಲಭ್ಯ ನೀಡಲಾಗುತ್ತಿದೆ. ಐಎಂ ಅಪ್ಲಿಕೇಷನ್ ಮೂಲಕ ವಾಟ್ಸ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಉಳಿದ ಮೊಬೈಲ್ಗಳಲ್ಲಿ ಹೇಗೆ ವಾಟ್ಸ್ ಆ್ಯಪ್ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಆಶಾ ಫೋನ್ನಲ್ಲಿಯೂ ಕೆಲಸ ಮಾಡುತ್ತದೆ. ಡಿಸೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಎಲ್ಲ ಆಶಾ 501 ಫೋನ್ಗಳಿಗೆ ವಾಟ್ಸ್ ಆ್ಯಪ್ ಅಪ್ಲಿಕೇಷನ್ ಇನ್ಬಿಲ್ಟ್ ಆಗಿಯೇ ಗ್ರಾಹಕರಿಗೆ ದೊರೆಯುತ್ತದೆ. ವಿಶ್ವಾದ್ಯಂತ ಪ್ರತಿ ದಿನ ಸುಮಾರು 2.50 ಲಕ್ಷ ಬಳಕೆದಾರರು ನೋಕಿಯಾ ಫೋನ್ನಿಂದ ಹೊಸದಾಗಿ ವಾಟ್ಸ್ ಆ್ಯಪ್ ಬಳಕೆಗೆ ಮುಂದಾಗುತ್ತಿದ್ದಾರೆ ಎಂದು ನೋಕಿಯಾ ಪ್ರಕಟಣೆ ಹೇಳಿದೆ.
- ಪ್ಯಾನ್ ಪಿಜ್ಜಾ ಖಾದ್ಯ ಬಿಡುಗಡೆ
ಡಾಮಿನೋಸ್ ಪಿಜ್ಜಾ ಮಾರುಕಟ್ಟೆಗೆ ಪ್ಯಾನ್ ಪಿಜ್ಜಾ ಖಾದ್ಯವನ್ನು ಬಿಡುಗಡೆ ಮಾಡಿದೆ. ಪ್ಯಾನ್ ಪಿಜ್ಜಾ ಮೃದು ಹಾಗೂ ಖಾರವಾಗಿದೆ. ಇದರಿಂದ ಭಾರತೀಯ ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. 'ಡಾಮಿನೋಸ್ನಲ್ಲಿ ಸದಾ ನೂತನ ಉತ್ಪನ್ನಗಳನ್ನು ಹೊರತರಲಾಗುತ್ತಿದೆ. ವಿಶ್ವದೆಲ್ಲೆಡೆ ಈ ಉತ್ಪನ್ನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಭಾರತೀಯ ಖಾದ್ಯ ಪ್ರಿಯರಿಗೆ ಇಷ್ಟವಾಗಲಿದೆ' ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಹರ್ನೀತ್ ಸಿಂಗ್ ರಾಜ್ಪಲ್ ಹೇಳಿದ್ದಾರೆ. ಪ್ಯಾನ್ ಪಿಜ್ಜಾ ಮಧ್ಯಮ ಗಾತ್ರದಲ್ಲಿ ಲಭ್ಯವಿದ್ದು, ನೂತನ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುತ್ತಿದೆ. ಮೊದಲ ಬಾರಿಗೆ ಪ್ಯಾನ್ ಪಿಜ್ಜಾ ಖರೀದಿಸಿ ಎರಡನೆ ಬಾರಿಗೆ ಪಿಝಾ ಖರೀದಿಸಿದರೆ ಶೇ.50ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಸಂಸ್ಥೆ ಹೇಳಿದೆ.
- ಬೇಯ್ಬ್ಲೇಡ್ ಆಟಿಕೆ
ಪ್ರತಿಷ್ಠಿತ ಫನ್ಸ್ಕೂಲ್ ಮಕ್ಕಳ ಆಟಿಕೆ ತಯಾರಿಕಾ ಸಂಸ್ಥೆಯು ಜನಪ್ರಿಯ ಕಾರ್ಟೂನ್ ಸರಣಿ ಬೇಯ್ಬ್ಲೇಡ್ನ ಆಟಿಕೆಗಳನ್ನು ಮಾರುಕಟ್ಟೆಗೆ ತಂದಿದೆ. ಈ ನೂತನ ಆಟಿಕೆ ಸರಣಿಗಳಲ್ಲಿ ಹೈಪರ್ಬ್ಲೇಡ್, ಬ್ಯಾಟಲ್ ಟಾಪ್ಸ್, ಫೇಸ್ ಆಫ್ ಪ್ಯಾಕ್ಸ್, ಸ್ಟೇಡಿಯ್ಂ ಹಾಗೂ ಹೈಪರ್ ಸ್ಟ್ರೈಕ್ ಬ್ಲೇಡ್ಗಳು ಲಭ್ಯವಿವೆ. ಈ ಆಟಿಕೆಯ ಪ್ರಾರಂಭಿಕ ದರವು 475 ಎಂದು ನಿಗದಿಯಾಗಿದೆ.
ಐಸ್ಕ್ರೀಂ ಕಂಪನಿ ಜಾಗ ವಾಪಸ್ ಮಾಡಿ
ಹುಬ್ಬಳ್ಳಿ: ಬೆಂಗಳೂರಿನ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಜಾಯ್ ಐಸ್ ಕ್ರೀಂ ಕಂಪನಿಗೆ ನೀಡಲಾಗಿರುವ ಭೂಮಿಯನ್ನು ಅಡ್ವೋಕೇಟ್ ಜನರಲ್ ಅವರ ಕಾನೂನು ಸಲಹೆಯಂತೆ ಹಿಂಪಡೆಯಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಒತ್ತಾಯಿಸಿದರು. ಈ ಭೂ ಅವ್ಯವಹಾರದಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಶಾಮೀಲಾಗಿದ್ದು ಅವರೆಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದರು. ಬೆಂಗಳೂರು ಪೂರ್ವ ತಾಲೂಕು ಕೆ.ಆರ್. ಪುರ ಹೋಬಳಿ ಪಟ್ಟಂದೂರು ಅಗ್ರಹಾರದ ಸರ್ವೆ ನಂ.42ರಲ್ಲಿ 3 ಎಕರೆ 23 ಗುಂಟೆ ಈ ಸರ್ಕಾರಿ ಜಮೀನನ್ನು ಜಾಯ್ ಕಂಪನಿ ಹೆಸರಿನಲ್ಲಿ ವರ್ಗಾಯಿಸುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಗಾಳಿಗೆ ತೂರಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದೆ ಎಂದು ಹಿರೇಮಠ ದಾಖಲೆ ಸಮೇತ ಆರೋಪಿಸಿದರು.
ನರಭಕ್ಷಕ ಹುಲಿಯ ಬಲಗಾಲಿಗೆ ಚಿಕಿತ್ಸೆ
ಮೈಸೂರು: ಚಿಕ್ಕಬರಗಿ ಗ್ರಾಮದ ಬಳಿ ಸೆರೆಸಿಕ್ಕ ನರಭಕ್ಷಕ ಹುಲಿಯ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದು, ಬಲಗಾಲಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಶ್ರೀ ಚಾಮರಾಜೇಂದ್ರ ಮೃಗಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವ ಹೆಸರಿನ ಆ ಹುಲಿಯು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದೆ. ಆದರೆ ತನಗಿದ್ದ ಮುಂಚಿನ ವಾತಾವರಣ ಇಲ್ಲ ಎಂಬ ಕೋಪ ಮತ್ತು ನಾಲ್ವರನ್ನು ಕೊಂದಾಗ ಇದ್ದ ರೋಷವೇನು ಕಡಿಮೆ ಆಗಿಲ್ಲ. ಆದರೆ ಕಾಲಕಾಲಕ್ಕೆ ಆಹಾರ ಸಿಗುತ್ತಿದೆ ಎಂಬ ನೆಮ್ಮದಿ ಮಾತ್ರ ಇದೆ. ಹುಲಿಯ ಬಲ ಅಂಗಾಲು ಮತ್ತು ದವಡೆ ಬಳಿ ಆಗಿರುವ ಗಾಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಹುಲಿಯ ಮಲವನ್ನು ಸೋಮವಾರ ಅಥವಾ ಮಂಗಳವಾರ ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸುವ ಸಾಧ್ಯತೆ ಇದೆ. ಗುರುವಾರ ಮತ್ತು ಶುಕ್ರವಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಬಿಟ್ಟರೆ ಮತ್ತೆ ಯಾವುದೆ ರೀತಿಯ ರಂಪಾಟ ನಡೆಸಿಲ್ಲ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

