

ಕೆಲ ಸಮಯದ ಹಿಂದೆ ಆಯ್ದ ಕೆಲ ಖಾಸಗಿ ಬ್ಯಾಂಕ್ಗಳಲ್ಲಿ ಕಪ್ಪು ಹಣವನ್ನು ಬಿಳುಪು ಮಾಡುವ ಸೌಲಭ್ಯವನ್ನೂ ನೀಡಲಾಗುತ್ತಿದೆ ಎನ್ನುವ ವಿಚಾರ ಕುಟುಕು ಕಾರ್ಯಾಚರಣೆಯೊಂದರಲ್ಲಿ ಬಯಲಾಗಿತ್ತು. ಅದು ಬ್ಯಾಂಕಿಂಗ್ ರೆಗ್ಯುಲೇಟರ್ಗಳ ನಿದ್ದೆಗೆಡಿಸಿದೆ. ಬ್ಯಾಂಕಿನ ಉನ್ನತಾಧಿಕಾರಿಗಳು ತಕ್ಷಣದಿಂದಲೇ ಆಮೂಲಾಗ್ರ ವಿಚಾರಣೆಗೆ ಮುಂದಾಗಿದ್ದಾರೆ.
ಕಾರ್ಯಾಚರಣೆಯ ಹಿಂದಿನ ಉದ್ದೇಶ ಮತ್ತು ಇದರ ಸತ್ಯಾಸತ್ಯತೆ ಏನೇ ಇರಲಿ, ಬೆಂಕಿ ಇಲ್ಲದೆ ಹೊಗೆ ಬರುವುದು ಅಸಾಧ್ಯದ ಮಾತು. ಬ್ಯಾಂಕು ಯಾವುದೇ ಇರಲಿ, ರೆಗ್ಯುಲೇಟರ್ಗಳು ನಿರೂಪಿಸುವ ಪ್ರತಿಯೊಂದು ನೀತಿ ನಿಯಮಾವಳಿ ಮತ್ತು ಮಾರ್ಗದರ್ಶಿ ಸೂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆಡಳಿತ ವರ್ಗ ತನ್ನ ಪ್ರತಿಯೊಂದು ಶಾಖೆಗೆ ಆಂತರಿಕ ಸುತ್ತೋಲೆಯನ್ನು ಕಳಿಸುತ್ತದೆ ಮತ್ತು ಈ ಸುತ್ತೋಲೆಗಳ ಅನುಸರಿಸುವಿಕೆಯ ಮೇಲ್ವಿಚಾರಣೆಯನ್ನೂ ಕಟ್ಟುನಿಟ್ಟಾಗಿ ಮಾಡುತ್ತವೆ. ಆದರೂ ಇಂತಹ ಘಟನೆಗಳು ಹೇಗೆ ನಡೆಯುತ್ತವೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬ್ಯಾಂಕಿನ ಪ್ರತಿಯೊಂದು ಶಾಖೆಯಲ್ಲಿ ವರ್ಷಪೂರ್ತಿ ಲೆಕ್ಕಪತ್ರಗಳ ಪರಿಶೀಲನೆ ನಡೆದಿರುತ್ತದೆ. ಕೆಲವು ದೊಡ್ಡ ಶಾಖೆಗಳಲ್ಲಂತೂ ಕನ್ಕರೆಂಟ್ ಆಡಿಟರ್ ಹೆಸರಿನಲ್ಲಿ ಪ್ರತಿದಿನವೂ ಲೆಕ್ಕಪರಿಶೋಧಕರು ಕುಳಿತಿರುತ್ತಾರೆ. ವರ್ಷಕ್ಕೆ ನಾಲ್ಕು ಬಾರಿ ಆಡಿಟರ್ ಅವರಿಂದ ಆಡಿಟ್ ಆದ ನಂತರವೇ ಬ್ಯಾಂಕುಗಳು ತಮ್ಮ ತ್ರೈಮಾಸಿಕ ರಿಸಲ್ಟನ್ನು ಬಹಿರಂಗಗೊಳಿಸುತ್ತವೆ. ಇದಕ್ಕೆ ಹೊರತಾಗಿ ವರ್ಷಕ್ಕೊಮ್ಮೆ ಆಂತರಿಕ ಪರಿಶೋಧಕರು ಕಡ್ಡಾಯವಾಗಿ ಲೆಕ್ಕ ಪರಿಶೋಧನೆ ಮಾಡುತ್ತಾರೆ. ಸಾಲ ಮತ್ತು ವಿದೇಶಿ ವಿನಿಮಯ ವಿಭಾಗಗಳು ವಿಶೇಷ ತನಿಖೆಗೆ ಒಳಪಡುತ್ತವೆ. ಆಗೊಮ್ಮೆ ಈಗೊಮ್ಮೆ ದಿಢೀರ್ ಎಂದು ತನಿಖಾಧಿಕಾರಿಗಳು ಶಾಖೆಗಳನ್ನು ಪರಿಶೀಲಿಸುತ್ತಾರೆ. ರಿಸರ್ವ್ ಬ್ಯಾಂಕ್ ಮತ್ತು ಜಾರಿ ನಿರ್ದೇಶನಾಲಯಗಳು ಈ ನಿಟ್ಟಿನಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸುತ್ತವೆ. ಬ್ಯಾಂಕುಗಳಲ್ಲಿ ಲೆಕ್ಕ ಪರಿಶೋಧನೆಗಳು ಇಷ್ಟು ನಿಯಮಬದ್ಧವಾಗಿ, ನಿರಂತರವಾಗಿ ನಡೆಯುತ್ತಿದ್ದು, ಬ್ಯಾಂಕ್ ಸಿಬ್ಬಂದಿಗೆ ಹೊರತಾಗಿ ಲೆಕ್ಕ ಪರಿಶೋಧಕರಿಗೂ ಖಾಯಂ ಆಸನದ ವ್ಯವಸ್ಥೆ ಇರುತ್ತದೆ.
ಇಲ್ಲಿ ಮೂರು ರೀತಿಯ ಸಂದೇಹಗಳು ಉದ್ಭವವಾಗುತ್ತವೆ. ಮೊದಲನೆಯದು ಲೆಕ್ಕ ಪತ್ರ ಪರಿಶೀಲನೆ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡಲಿಲ್ಲ ಅಥವಾ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ? ಎರಡನೆಯದು ಸಿಬ್ಬಂದಿಗಳು ಕೊಟ್ಟ ಮಾಹಿತಿಯನ್ನು ಲೆಕ್ಕ ಪರಿಶೋಧಕರು ತಮ್ಮ ಫೈನಲ್ ರಿಪೋರ್ಟ್ನಲ್ಲಿ ಅಳವಡಿಸಲಿಲ್ಲ? ಮೂರನೆಯದು ಲೆಕ್ಕ ಪರಿಶೋಧಕರು ಸರಿಯಾದ ರಿಪೋರ್ಟ್ ಕೊಟ್ಟಿದ್ದರೂ ಬ್ಯಾಂಕಿನ ಮೇಲಧಿಕಾರಿಗಳು ಬೆಳೆಯುತ್ತಿರುವ ವ್ಯವಹಾರದ ಮೇಲೆ ಕಣ್ಣಿಟ್ಟು ಇಂತಹ ವರದಿಗಳನ್ನು ನಿರ್ಲಕ್ಷಿಸಿರಬಹುದು? ಮೇಲ್ನೋಟಕ್ಕೆ ಕ್ರಮ ತೆಗೆದುಕೊಂಡಿರುವಂತೆ ಮಾಡಿರಬಹುದು?
ದಂಡವೇ ಲೇಸು!
ನೂರಾರು ವರ್ಷಗಳ ಅನುಭವ, ಅಪಾರ ಸಿಬ್ಬಂದಿ, ಸರ್ಕಾರದ ನಿರಂತರ ಸಹಾಯ, ದೇಶಾದ್ಯಂತ ಶಾಖೆಗಳ ಜಾಲ, ದಶಕಗಳ ನಿಷ್ಠೆಯಿಂದ ವ್ಯವಹರಿಸುತ್ತಿರುವ ಗ್ರಾಹಕ ವರ್ಗ, ಉನ್ನತಮಟ್ಟದ ತಾಂತ್ರಿಕತೆ ಇದ್ದಾಗಲೂ ಸಾರ್ವಜನಿಕ ರಂಗದ ಬ್ಯಾಂಕುಗಳು ಸಮಾಧಾನಕರ ಎನ್ನುವ ಸಾಧನೆ ತೋರಿ ಶೇರುದಾರರಿಂದ, ಸರ್ಕಾರದಿಂದ, ಜನಸಾಮಾನ್ಯರಿಂದ, ಮಾಧ್ಯಮದಿಂದ ಟೀಕಿಸಿಕೊಳ್ಳುವಾಗ, ನಿನ್ನೆ ಮೊನ್ನೆ ಹುಟ್ಟಿದ ಬ್ಯಾಂಕುಗಳು ಕನಿಷ್ಠ ಶಾಖೆಗಳಿಂದ ಕಡಿಮೆ ಸಿಬ್ಬಂದಿಯಿಂದ ಸಾರ್ವಜನಿಕ ರಂಗದ ಬ್ಯಾಂಕುಗಳ ಅಸ್ತಿತ್ವವನ್ನೇ ನಡುಗಿಸುತ್ತಿವೆ. ಈ ಬ್ಯಾಂಕುಗಳ ಕಾರ್ಯನಿರ್ವಹಣೆ ಪದ್ಧತಿಯಲ್ಲಿ ಏನೋ ಹೇಳಲಾಗದ ಸೂತ್ರವಿದೆ ಎನ್ನುವ ಕೆಲವು ನಿವೃತ್ತ ಉನ್ನತ ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯದಲ್ಲಿ ಸತ್ಯವಿಲ್ಲದಿಲ್ಲ.
ಇಂತಹ ಅಪರಾಧಗಳಿಗೆ ಗರಿಷ್ಠ ಒಂದು ಕೋಟಿ ರು. ದಂಡವನ್ನು ಬ್ಯಾಂಕುಗಳಿಗೆ ಹಾಕಲಾಗುತ್ತಿದ್ದು, ಲಕ್ಷಾಂತರ ಕೋಟಿ ವ್ಯವಹಾರ ಮಾಡುವ ಬ್ಯಾಂಕುಗಳಿಗೆ ಇದು ತೃಣಕ್ಕೆ ಸಮಾನ. ಈ ಹಿಂದೆ ಕಡ್ಡಾಯ ನಗದನ್ನು (ಕ್ಯಾಷ್ ರಿಸರ್ವ್) ನ್ನು ಇಡಲಿಲ್ಲವೆಂದು ಒಂದು ಬ್ಯಾಂಕಿಗೆ ದಂಡ ಹಾಕಲು, ಆ ಬ್ಯಾಂಕು ಕಡ್ಡಾಯ ನಗದನ್ನು ಇಡುವುದಕ್ಕಿಂತ ದಂಡ ಕೊಡುವುದೇ ಲೇಸು ಎಂದು ನಿರ್ಲಕ್ಷಿಸಿ ರಿಸರ್ವ್ ಬ್ಯಾಂಕಿನಿಂದ ಶಿಕ್ಷೆಗೊಳಗಾಗಿತ್ತು. ತಮ್ಮ ಶಬ್ದ ಕೋಶದಿಂದ ಲಾಭ ಶಬ್ದವನ್ನೇ ತೆಗೆದು ಹಾಕಿ ಬ್ಯಾಂಕುಗಳು ಇರುವುದು ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಪರಿವರ್ತನೆಗೆ ಎನ್ನುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಸರ್ಕಾರಿ ರಂಗದ ಕೆಲವು ಬ್ಯಾಂಕುಗಳೂ, ಈ ಖಾಸಗಿ ಬ್ಯಾಂಕುಗಳ ಕಪ್ಪು-ಬಿಳುಪು ವ್ಯವಹಾರಕ್ಕೆ ಕೈ ಹಾಕಿರುವುದು ಕುಟುಕು ಕಾರ್ಯಾಚರಣೆಯಿಂದ ಜಗಜ್ಜಾಹೀರಾಗಿದ್ದು ಹಣಕಾಸು ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ.
ರಿಸರ್ವ್ ಬ್ಯಾಂಕ್, ಹಣಕಾಸು ಇಲಾಖೆ, ಆರ್ಥಿಕ ತಂತ್ರಜ್ಞರ ಮತ್ತು ಜನಸಾಮಾನ್ಯರ ಒತ್ತಡದಿಂದ ಬ್ಯಾಂಕುಗಳಲ್ಲಿ ನಿರಂತರವಾಗಿ ಬಡ್ಡಿ ದರ ಕಡಿಮೆಯಾಗುತ್ತಿದ್ದು, ಬ್ಯಾಂಕ್ಗಳಲ್ಲಿ ನೆಟ್ ಇಂಟರೆಸ್ಟ್ ಮಾರ್ಜಿನ್ (ಬ್ಯಾಂಕ್ ಒಟ್ಟಾರೆ ಕೊಡುವ ಮತ್ತು ತೆಗೆದುಕೊಳ್ಳುವ ಬಡ್ಡಿಯ ಪ್ರಮಾಣದ ವ್ಯತ್ಯಾಸ) ಕಡಿಮೆಯಾಗುತ್ತಿದೆ. ಈ ಪ್ರಮಾಣ ಈಗಲೂ ಸುಮಾರು 3ರಿಂದ 4 ಪ್ರತಿಶತವಿದ್ದು ಇದರ ಮೇಲೆಯೇ ಬ್ಯಾಂಕಿಂಗ್ ಉದ್ಯಮ ನಡೆಯುತ್ತಿದೆ. ಇದು ರಿಸರ್ವ್ ಬ್ಯಾಂಕ್ ರೂಲು ಕೂಡಾ. ಈ ನಿಟ್ಟಿನಲ್ಲಿ ಬ್ಯಾಂಕ್ ಇನ್ನೇನೂ ಮಾಡುವಂತಿಲ್ಲ. ಅಂತೆಯೇ ಬ್ಯಾಂಕುಗಳು ಬಡ್ಡಿಯೇತರ ಆದಾಯವನ್ನು ಹುಡುಕುತ್ತಿದ್ದು, ಈ ಕಪ್ಪು-ಬಿಳುಪು ವ್ಯವಹಾರ ಪರಿಹಾರ ಮಾರ್ಗ ಸೂಚಿಸಿದೆ. ಇದಕ್ಕೂಗಿ ಮಿಗಿಲಾಗಿ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಹಾರದಿಂದ ಬರುವ ಆದಾಯದಲ್ಲಿ ಲಾಭಾಂಶ ಕಡಿಮೆ ಮತ್ತು ಬ್ಯಾಂಕುಗಳದ್ದೇ ಕೊನೆ ಮಾತು.
- ರಮಾನಂದ ಶರ್ಮಾ