ಅಡಕೆ ಚಡಪಡಿಕೆ

ಅಡಕೆ ಚಡಪಡಿಕೆ
Updated on: 

ಅಡಕೆ ಕೃಷಿಯನ್ನು ಮುಂದುವರಿಸಬೇಕೇ ಬೇಡವೇ? ಮುಂದುವರಿಸದೇ ಇದ್ದರೆ ಜೀವನೋಪಾಯಕ್ಕೆ ಇರುವ ದಾರಿ ಯಾವುದು?
ಇಂಥ ಒಂದು ಸಂದಿಗ್ಧತೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಬೆಳೆಗಾರರನ್ನು ಬಹುವಾಗಿ ಕಾಡುತ್ತಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕೂಲಿ ಕಾರ್ಮಿಕರ ಅಭಾವ, ಸಾಂಪ್ರದಾಯಿಕ ತಳಿಗಳಲ್ಲಿ ದೊರಕುತ್ತಿರುವ ಕಡಿಮೆ ಇಳುವರಿ ಸಮಸ್ಯೆಗಳು ಬೆಳೆಗಾರರನ್ನು ಇನ್ನಿಲ್ಲದಷ್ಟು ಹೈರಾಣಾಗಿಸಿದೆ. ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಸಿಗುವ ಏರಿಳಿತದ ದರದಿಂದಾಗಿ ಅಡಕೆ ಕೃಷಿ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಪೂರಕ ಅಲ್ಲ ಎಂಬ ಭಾವನೆ ಬೆಳೆಗಾರರಲ್ಲಿ ಬೇರೂರಿ ಬಿಟ್ಟಿದೆ.
ಆಧುನಿಕ ಯಂತ್ರೋಪಕರಣ ಕಾಣಿಸಿದರೂ ರೈತಸ್ನೇಹಿಯಾಗಿ ಯಾವುದೂ ಸರಿಯಾಗಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿಲ್ಲ. ಈ ಗೊಂದಲಗಳ ಮಧ್ಯೆ ಅಡಕೆ ಕೃಷಿಯನ್ನೇ ನಂಬಿದ ಬೆಳೆಗಾರರು ಎಲ್ಲ ಏರುಪೇರುಗಳನ್ನು ಸಹಿಸಿಕೊಂಡು ಕೃಷಿ ಮುಂದುವರಿಸುತ್ತಿದ್ದಾರೆ.

ಸುಧಾರಿಸಿಲ್ಲ ಫಸಲು
 ಸದ್ಯ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸದ್ಯ ಒಂದು ಎಕರೆಗೆ ಎರಡೂವರೆ ಖಂಡಿ (1 ಖಂಡಿ ಅಂದರೆ 260 ಕಿಲೋ) ಅಡಕೆ ಉತ್ಪಾದನೆಯಾಗುತ್ತಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಭರಿಸಲು ಒಂದು ಎಕರೆಗೆ ಸಾಂಪ್ರದಾಯಿಕ ಅಡಕೆಯಲ್ಲಿ 420 ಕಿಲೋ ವರೆಗೆ ಫಸಲು ಪಡೆಯಬೇಕು. ಅದು ಸದ್ಯದ ದಿನಮಾನದಲ್ಲಿ ಅಗತ್ಯವಾಗಿದೆ. ಆದರೆ ಬೆಳೆಗಾರನಿಗೆ ಅದಕ್ಕಿಂತ ಜಾಸ್ತಿ ಬೆಳೆ ತೆಗೆಯಲು ಇದುವರೆಗೆ ಸಾಧ್ಯವಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಫಸಲು ಪಡೆಯಲು ಬೆಳೆಗಾರ ಮಂಗಳ ಮತ್ತಿತರ ಹೊಸ ತಳಿಗಳ ಮೊರೆಹೋಗಬೇಕು.

ತಂತ್ರ ಕರಗತವಾಗಿಲ್ಲ
ಹಲವಾರು ವರ್ಷಗಳಿಂದ ಇರುವ ಗಿಡ ನೆಡುವ ಪದ್ಧತಿಯಲ್ಲೇ ಅಧಿಕ ಇಳುವರಿ ಪಡೆಯುವ ತಂತ್ರವನ್ನು ಬೆಳೆಗಾರರು ಕರಗತ ಮಾಡಿಕೊಂಡಿಲ್ಲ. ಈ ಬಗ್ಗೆ ಬೆರಳೆಣಿಕೆಯ ಅಡಕೆ ಬೆಳೆಗಾರರು ಶ್ರಮ ವಹಿಸುತ್ತಿದ್ದರೂ ಅದು ಪ್ರಯೋಗಕ್ಕೆ ಮಾತ್ರ ಸೀಮಿತವಾಗಿದೆ. ಸದ್ಯ ಅಡಕೆ ಉತ್ಪಾದನಾ ವೆಚ್ಚ ಕಿಲೋಗೆ ರು. 160ರಿಂದ ರು. 170ಕ್ಕೆ ತಲಪಿದೆ. ಇದನ್ನು ನಿಭಾಯಿಸಲು ಕೃಷಿಕರಿಂದ ಸಾಧ್ಯವಾಗುತ್ತಿಲ್ಲ.

ಹಲವು ಹಂತಗಳು
ಅಡಕೆ ಗಿಡದ ಪೋಷಣೆ, ಮರ ಸಾಕಣೆ, ಕೊಯ್ಲು, ಔಷಧ ಸಿಂಪಡಣೆ, ಅಡಕೆ ಹೆಕ್ಕುವುದು, ಅಂಗಳಕ್ಕೆ ಸಾಗಣೆ,  ಅಡಕೆ ಒಣಗಿಸುವುದು, ಕೊನೆಗೆ ಸುಲಿದು ಮಾರುಕಟ್ಟೆಗೆ ತರುವಲ್ಲಿ ವರೆಗಿನ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ. ಅದು ನಿಧಾನವಾಗಿ ಅಭಿವೃದ್ಧಿಯಾಗುತ್ತಿರುವುದರಿಂದ ಎಲ್ಲ ಕೃಷಿಕರನ್ನು ತಲಪಿಲ್ಲ. ಹೀಗಾಗಿ ಅಡಕೆ ಉತ್ಪಾದನಾ ವೆಚ್ಚವೇ ಅಧಿಕವಾಗುತ್ತಿದೆ. ಅಡಕೆ ಕೃಷಿ ಎಂಬುದು ಬಿಳಿಯಾನೆಯಾಗುತ್ತಿದೆಯೇ ಎಂಬ ಆತಂಕವೂ ಬೆಳೆಗಾರರಲ್ಲಿದೆ.

ಶೇ.60 ಗುಜರಾತ್‌ಗೆ
ಕರಾವಳಿ ಜಿಲ್ಲೆಯಲ್ಲಿ ಬೆಳೆಯುವ ಅಡಕೆಯಲ್ಲಿ ಶೇ.60 ಪಾಲು ಗುಜರಾತ್ ಮಾರುಕಟ್ಟೆಗೆ ಬೇಕು. ಮುಖ್ಯವಾಗಿ ದ.ಕ. ಜಿಲ್ಲೆಯ ವಿಟ್ಲ, ಪುತ್ತೂರು, ಪಾಣಾಜೆ ಮತ್ತು ಅಡ್ಯನಡ್ಕದಿಂದ ಕಾಸರಗೋಡಿನ ಕುಂಬ್ಳೆ ವರೆಗೆ ವಿಟ್ಲ-ಕಾಸರಗೋಡು ಹೆಸರಿನಲ್ಲಿ ಜನಜನಿತವಾದ ಸಾಂಪ್ರದಾಯಿಕ ತಳಿಗಳದ್ದೇ ಕಾರುಭಾರು. ಇದೇ ತಳಿಯ ಅಡಕೆ ಗುಣಮಟ್ಟದಿಂದ ಕೂಡಿದ್ದು, ಗುಜರಾತ್ ಮಾರುಕಟ್ಟೆಗೆ ಇದೇ ಅಡಕೆ ಬೇಕು ಎನ್ನುತ್ತಾರೆ ಅಡಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ.

ಗುಣಮಟ್ಟದ ಅಡಕೆ
ಕಾಸರಗೋಡು ಪ್ರದೇಶದ ಮಣ್ಣಿನ ಗುಣ, ಸಾಂಪ್ರದಾಯಿಕ ತಳಿ ಉತ್ತಮ ಗುಣಮಟ್ಟದ್ದು ಎಂಬ ಗೌರವ ಹೊಂದಿದೆ. ಮಹಾರಾಷ್ಟ್ರ ಕೂಡ ಇಲ್ಲಿನ ತಳಿಯ ಅಡಕೆಯನ್ನೇ ಬಯಸುತ್ತದೆ. ಹಾಗಾಗಿ ಈ ಭಾಗದ ಚಾಲಿ ಅಡಕೆ ಬೇರೆ ಕಡೆಗಳಿಗಿಂತ ಕಿಲೋಗೆ ರು. 2ರಿಂದ ರು. 4 ಹೆಚ್ಚು ದರದಲ್ಲಿ ಮಾರಾಟವಾಗುತ್ತದೆ.

ಕರ್ನಾಟಕದಲ್ಲೇ ಹೆಚ್ಚು
ಅಡಕೆ ಬೆಳೆಯುವ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಇದರ ಪ್ರಮಾಣ ಜಾಸ್ತಿ. ಕರ್ನಾಟಕದಲ್ಲಿ 1.84 ಲಕ್ಷ ಹೆಕ್ಟೇರ್, ಕೇರಳದಲ್ಲಿ 1 ಲಕ್ಷ ಹೆಕ್ಟೇರ್, ಅಸ್ಸಾಂನಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೃಷಿ ಇದೆ. ರಾಜ್ಯದಲ್ಲಿ ವಾರ್ಷಿಕ 5 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತಿದೆ.

ಕ್ಯಾಂಪ್ಕೋ ಸಲಹೆ
ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆ ಎಂದರೆ ಬಿಳಿಯಾನೆ ಸಾಕಿದಂತೆ ಎಂಬ ಭಾವನೆ ಬೆಳೆಗಾರರ ಮನಸ್ಸಿನಲ್ಲಿ ಬೇರೂರಿದೆ. ಅದಕ್ಕೆ ಕೇರಳ, ಕರ್ನಾಟಕದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಹಲವು ಕಾರ್ಯಕ್ರಮಗಳನ್ನು ನಡೆಸಿತ್ತು. ಆದರೆ ಸಾಮಾನ್ಯ ಕೃಷಿಕರಿಗೆ ಅದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ಅಡಕೆ ಸಂಶೋಧನಾ ಕೇಂದ್ರ ಅಡಕೆಯ ಪರ್ಯಾಯ ಉಪಯೋಗದ ಬಗ್ಗೆ ಹಲವು ಸಂಶೋಧನೆಗಳನ್ನು ಆವಿಷ್ಕರಿಸಿದರೂ, ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ನೀಡುತ್ತಿಲ್ಲ. ಆದರೂ ಕ್ಯಾಂಪ್ಕೋ ಹಲವು ಸಲಹೆ ಮುಂದಿಟ್ಟಿದೆ
    ಕೋಕೋ, ಕಾಳುಮೆಣಸು ಉಪಬೆಳೆಯತ್ತ ಮನಸ್ಸು ಮಾಡಿ. ಅಡಕೆ ಧಾರಣೆಯಲ್ಲಿ ಏರಿಳಿತ ಕಂಡುಬಂದಾಗ ಅದರ ನಷ್ಟ ಉಪಬೆಳೆಗಳಿಂದ ಸರಿತೂಗಿಸಬಹುದು.
    ಖಾಸಗಿ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಳೆಗಾರರಿಗೆ ನಷ್ಟ ಬಾರದು ಎನ್ನುತ್ತಾರೆ ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ. <

ಹೀಗೂ ಮಾಡಬಾರದೇಕೆ?
    ಅಡಕೆ ಕೃಷಿಗೆ ಕಾರ್ಮಿಕರ ಕೊರತೆ ನೀಗಿಸಲು ಉದ್ಯೋಗ ಖಾತರಿ ಯೋಜನೆಯನ್ನು ಅನ್ವಯಿಸುವುದು. ಇದರಿಂದ ಶೇ.50 ಸಮಸ್ಯೆ ಬಗೆಹರಿದೀತು.
    ಗ್ರಾಮ ಮಟ್ಟದಲ್ಲಿ ಕೃಷಿ ಕಾರ್ಮಿಕರ ಸಹಕಾರಿ ಸಂಘ ಸ್ಥಾಪನೆ.
    ಅಡಕೆ ಉತ್ಪಾದನೆ, ಬೇಡಿಕೆ, ಪೂರೈಕೆ, ಧಾರಣೆಗೆ ಸಂಬಂಧಿಸಿ ಮಾರುಕಟ್ಟೆ ವ್ಯವಸ್ಥೆ ಸರಿಪಡಿಸಬೇಕು.

1.84    ಲಕ್ಷ ಹೆಕ್ಟೇರ್ ರಾಜ್ಯದಲ್ಲಿ ಅಡಕೆ ಬೆಳೆಯುವ ಪ್ರದೇಶ.
2.24    ಲಕ್ಷ ಟನ್ ರಾಜ್ಯದಲ್ಲಿ ಅಡಕೆ ಉತ್ಪಾದನೆ.
92,200    ಹೆಕ್ಟೇರ್ ಪ್ರದೇಶದಲ್ಲಿ ಕೇರಳದ ಅಡಕೆ ಬೆಳೆ.
1.12    ಲಕ್ಷ ಟನ್ ಅಡಕೆ ಕೇರಳದ ಉತ್ಪಾದನೆ.
600    ಟನ್ ಅಡಕೆ ರಫ್ತು
ರು. 900    ಕೋಟಿ ಅಡಕೆ ಮಾರುಕಟ್ಟೆ
4.78    ಲಕ್ಷ ಟನ್ ಭಾರತದ ಅಡಕೆ ಉತ್ಪಾದನೆ (ಮೊದಲ ಸ್ಥಾನ)
2.40    ಲಕ್ಷ ಟನ್ ಚೀನಾದ ಅಡಕೆ ಉತ್ಪಾದನೆ (ದ್ವಿತೀಯ ಸ್ಥಾನ)
1.26    ಲಕ್ಷ ಟನ್ ಮ್ಯಾನ್ಮಾರ್‌ನ ಅಡಕೆ ಉತ್ಪಾದನೆ (ತೃತೀಯಸ್ಥಾನ)


-ಆತ್ಮಭೂಷಣ್
-athmaatlar@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com