

ಅದೊಂದು ಕನಸು ಹುಟ್ಟಿದ್ದು ಇವತ್ತು ನಿನ್ನೆಯೇನಲ್ಲ. ಭಾರತದಲ್ಲಿ ಆನ್ಲೈನ್ ವ್ಯವಹಾರ ಶುರುವಾದ ದಶಕದ ಹಿಂದೆಯೇ ಅಮೆಜಾನ್ ಡಾಟ್ ಕಾಂ (amazon.com) ವೆಬ್ಸೈಟಿನ ಹೆಸರನ್ನು ಹಲವರು ಕನವರಿಸಿದ್ದರು. ಅಂಗಡಿಗಳಿಗೆ, ಮಾಲ್ಗಳಿಗೆ ಹೋಗುವಷ್ಟು ಟೈಮಿಲ್ಲದ ಜಗತ್ತಿನಲ್ಲಿ ಒಂದು ಪರಿಪೂರ್ಣ ಆನ್ಲೈನ್ ಮಾರುಕಟ್ಟೆಯ ಅಗತ್ಯ ಖಂಡಿತಾ ಭಾರತಕ್ಕೆ ಇತ್ತು.
ಅದಕ್ಕಾಗಿಯೇ 'ಅಮೆಜಾನ್' ಭಾರತಕ್ಕೆ ಕಾಲಿಟ್ಟಿದೆ!
ವಿಶ್ವದ ಅತಿದೊಡ್ಡ ಆನ್ಲೈನ್ ರಿಟೇಲರ್ ಅಮೆಜಾನ್ ಡಾಟ್ ಕಾಂ. ಇದೀಗ ಭಾರತದಲ್ಲಿ amazon.in ಜಾಲತಾಣವನ್ನು ಪರಿಚಯಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ವೆಬ್ನಲ್ಲೇನಿದೆ?
ನೀವು ನೆಟ್ನಲ್ಲಿ amazon.in ಗೆ ಹೋದರೆ 'ಅಯ್ಯೋ ಇಷ್ಟೇನಾ?' ಅಂತ ರಾಗ ತೆಗೆಯಬಹುದು. ಏಕೆಂದರೆ, ಅಲ್ಲಿ ನಿಮ್ಮೆದುರು ಕಾಣುವುದು ಕೆಲವು ಪ್ರಕಾಶನದ ಪುಸ್ತಕಗಳು, ಕೆಲವೊಂದಿಷ್ಟು ಫಿಲ್ಮುಗಳು, ಜನಪ್ರಿಯ ಟಿವಿ ಕಾರ್ಯಕ್ರಮಗಳ ವಿಡಿಯೋಗಳಷ್ಟೇ. ಇದು ಬರೀ ಓದಿನ, ಸಿನಿಮಾ ಅಭಿರುಚಿಯುಳ್ಳವರಿಗಷ್ಟೇ ವೆಬ್ಸೈಟ್ ಎಂದುಕೊಂಡರೆ ಶುದ್ಧ ತಪ್ಪು. ಅಮೆಜಾನ್ ವೆಬ್ಸೈಟಿನ ಮೊದಲ ಹೆಜ್ಜೆ ಇದಷ್ಟೇ. ವೆಬ್ಸೈಟಿನ ನಂತರದ ಪ್ರಾಜೆಕ್ಟ್ಗಳೇ ಬೇರೆ ಇವೆ.
ಇನ್ನೇನು ಬರುತ್ತೆ?
ಮೊಬೈಲ್ಗಳು, ಕ್ಯಾಮೆರಾಗಳು, ಇನ್ನಿತರೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೂ ಮುಂದಿನ ದಿನಗಳಲ್ಲಿ ಆನ್ಲೈನ್ ಮಾರುಕಟ್ಟೆ ಒದಗಿಸಲಿದೆ ಅಮೆಜಾನ್. ಈಗ ಬಿಟ್ಟಿರುವ ಆಡಿಯೋ, ವಿಡಿಯೋ, ಪುಸ್ತಕೋತ್ಪನ್ನಗಳು ಎಷ್ಟು ಬೇಗ ಗ್ರಾಹಕರಿಗೆ ತಲುಪುತ್ತದೋ ಎಂಬ ಲೆಕ್ಕಾಚಾರದಲ್ಲಿದೆ ಈ ಸಂಸ್ಥೆ. ಭಾರತದ ಆನ್ಲೈನ್ ಮಾರುಕಟ್ಟೆ ಮೇಲೆ ಅನುಮಾನ ಇರುವ ಕಾರಣ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಡವಾಗಿ ಪರಿಚಯಿಸುತ್ತಿದೆ. ವಿಶೇಷವಾಗಿ Filpkartಗೆ ಪೈಪೋಟಿ ನೀಡಲಿದೆ.
ಯಾಕೆ ಅನುಮಾನ?
ಅಮೆಜಾನ್ ಡಾಟ್ ಕಾಂ ಹುಟ್ಟಿದ್ದು ಅಮೆರಿಕದಲ್ಲಿ. 1995ರಲ್ಲಿ ಆನ್ಲೈನ್ ಬುಕ್ಸ್ಟೋರ್ ಆಗಿಯೇ ಹುಟ್ಟಿದ ಈ ವೆಬ್ಸೈಟ್ ಭಾರತದಲ್ಲಿ ಪರಿಚಯಿಸುವ ಬಗ್ಗೆ ಅನೇಕ ವರ್ಷದ ಹಿಂದೆಯೇ ಆಲೋಚಿಸಿತ್ತು. ಆದರೆ, ಅಮೆರಿಕದಲ್ಲಿ ಎದ್ದ ಆರ್ಥಿಕ ಹಿಂಜರಿತ ಇದರ ಧೃತಿಗೆಡಿಸಿತ್ತು. ಅತ್ಯಧಿಕ ಮೊತ್ತ ತಂದುಕೊಡುವ ವಿಡಿಯೋ ಗೇಮ್ ಕ್ಷೇತ್ರ ಭಾರತದಲ್ಲಿ ಇನ್ನೂ ನಷ್ಟದಲ್ಲೇ ಇದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಅಮೆಜಾನ್ ಭಾರತಕ್ಕೆ ಕಾಲಿಡಲು ಹೆದರಿತ್ತು.
ಈ ಹಿಂದೆ...
ಭಾರತದಲ್ಲಿ ಅಮೆಜಾನ್ ಡಾಟ್ ಕಾಂ ಕಳೆದ ವರ್ಷವೇ ಸುದ್ದಿಮಾಡಿತ್ತು. ಆಗ ಅದು junglee.com ಹೆಸರಿನ ಜಾಲತಾಣದ ಮೂಲಕ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಚಿಲ್ಲರೆ ವ್ಯಾಪಾರಿಗಳು ಇದರಲ್ಲಿ ಜಾಹೀರಾತನ್ನು ಅಂಟಿಸಿ, ಲಾಭ ಪಡೆದಿದ್ದೂ ಉಂಟು.
ಹೊಸ ಶಕೆ
ಈಗ ಮುಂಬೈನಲ್ಲಿ ಇದು 1.5 ಲಕ್ಷ ಚದರ ಅಡಿಯ ಬೃಹತ್ ಉಗ್ರಾಣ ಸ್ಥಾಪಿಸಿದೆ. ಅಲ್ಲದೆ, ತನ್ನ ವ್ಯವಹಾರ ಸಂಬಂಧ ದೇಶದ 100 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಗ್ರಾಹಕರನ್ನು ಸೆಳೆಯಲು ಸೀಮಿತ ಅವಧಿಗೆ ಉತ್ಪನ್ನಗಳ ಉಚಿತ ಸರಬರಾಜು ಸೇವೆ ನೀಡಲಿದೆ.
ಯಾವ್ಯಾವ ದೇಶದಲ್ಲಿದೆ?
ಅಮೆಜಾನ್ ವಿಶ್ವದ ಅತಿದೊಡ್ಡ ಆನ್ಲೈನ್ ರಿಟೇಲರ್ ಹೌದಾದರೂ ಎಲ್ಲ ದೇಶಗಳಲ್ಲಿ ವೆಬ್ ವಿಭಾಗವನ್ನು ತೆರೆದಿಲ್ಲ. ಕೇವಲ ಮುಂದುವರಿದ ದೇಶಗಳಲ್ಲಷ್ಟೇ ಇದು ವೆಬ್ ಶಾಖೆ ತೆರೆದಿದೆ.
ಕೆನಡಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಬ್ರೆಜಿಲ್, ಜಪಾನ್, ಚೀನಾ ಮತ್ತು ಈಗ ಭಾರತದಲ್ಲಿ ಜಾಲತಾಣ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಪೊಲ್ಯಾಂಡ್, ನೆದರ್ಲೆಂಡ್, ಸ್ವೀಡನ್ಗಳಲ್ಲೂ ತನ್ನ ಸೇವೆ ಪರಿಚಯಿಸುವ ಉತ್ಸಾಹದಲ್ಲಿದೆ.
- ಮಿಲೀ