ವಿತ್ತಲೋಕದ ಸುತ್ತಮುತ್ತ

Updated on: 

ಡೊಕೊಮೊದಿಂದ ಡಬಲ್ ಡಾಟಾ ಸೇವೆ
ಬೆಂಗಳೂರು: ಟಾಟಾ ಡೊಕೊಮೊ ರಾಜ್ಯದ ಜಿಎಸ್‌ಎಂ ಪ್ರಿಪೇಯ್ಡ್ ಗ್ರಾಹಕರಿಗೆ 2ಜಿ ದರಕ್ಕೆ ಸಮನಾಗಿ 3ಜಿ ಡಾಟಾ ಸೌಲಭ್ಯ ಪಡೆಯುವಂತಹ 'ಡಬಲ್ ಡಾಟಾ' ಸೇವೆ ಪರಿಚಯಿಸಿದೆ.
ಈ ನೂತನ ಸೇವೆ ಮೂಲಕ ಗ್ರಾಹಕರು ಕಡಿಮೆ ದರದಲ್ಲಿ ಹೆಚ್ಚಿನ ದತ್ತಾಂಶ ಸೇವೆ ಪಡೆಯಬಹುದು. ಪ್ರಿಪೇಯ್ಡ್ ಗ್ರಾಹಕರು 4 ಬಗೆಯ 3ಜಿ ಡಾಟಾ ಸೇವೆಗಳಲ್ಲಿ ತಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. 3 ದಿನಕ್ಕೆ ರು. 22, 7 ದಿನಕ್ಕೆ ರು. 30(300 ಎಂಬಿ), 30 ದಿನಕ್ಕೆ ರು. 99(600 ಎಂಬಿ) ಮತ್ತು 30 ದಿನಕ್ಕೆ ರು. 255(2ಜಿಬಿ ಡಾಟಾ) ಲಭ್ಯ. ನಾಲ್ಕು ಬಗೆಯ ಆಯ್ಕೆಗಳಿರುವ ದತ್ತಾಂಶ ಸೇವೆಗಳು ಬಹಳ ಕಡಿಮೆ ವೆಚ್ಚ ಹಾಗೂ ಸರಳ ಸ್ವರೂಪದವಾಗಿವೆ. ಈ ನಾಲ್ಕೂ ಸೇವೆಗಳು ಸೇರಿದಂತೆ ಎಲ್ಲ ರೀತಿಯ ಡಾಟಾ ಸೇವೆಗಳು 'ಇವಿಡಿ', 'ಎಸ್‌ಎಂಎಸ್‌', 'ಯುಎಸ್‌ಎಸ್‌ಡಿ', 'ಡಬ್ಲ್ಯುವಿ', 'ಒಬಿಡಿ' ಮತ್ತು 'ಟಿಐಪಿಪಿಎಸ್‌' ಮೂಲಕ ಗ್ರಾಹಕರು ಪಡೆಯಬಹುದಾಗಿದೆ. 121 ಸಂಖ್ಯೆಗೆ 'ಬಿಎಎಲ್‌' ಎಂಬ ಸಂದೇಶದ ಮೂಲಕ ಉಳಿಕೆ ಮೊತ್ತ ತಿಳಿಯಬಹುದು. ಅದರಲ್ಲೂ 2ಜಿ ಬೆಲೆಯಲ್ಲಿ 3ಜಿ ಡಾಟಾ ಸೇವೆ ನೀಡುವುದೆಂದರೆ ಎಲ್ಲ ರೀತಿಯ ದರಪಟ್ಟಿಗಳ ತಡೆಗೋಡೆ ಮುರಿದಂತೆ ಎಂದಿರುವ ಟಾಟಾ ಡೊಕೊಮೊ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ ಹಣಕ್ಕೆ ತಕ್ಕ ಸೇವೆ ನೀಡುವುದರಲ್ಲಿ ತಮ್ಮ ಸಂಸ್ಥೆ ಸದಾ ಮುಂದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೈವಿಕ ತಂತ್ರಜ್ಞಾನ ಕೃಷಿ ನೂರು ಪಟ್ಟು ಅಧಿಕ
ಬೆಂಗಳೂರು: ಜೈವಿಕ ತಂತ್ರಜ್ಞಾನ (ಜಿಎಂ) ಅಂದರೆ ವಂಶವಾಹಿ ಸುಧಾರಿತ ತಳಿಯ ಕೃಷಿ ಕಳೆದ 16 ವರ್ಷಗಳಲ್ಲೇ ನೂರು ಪಟ್ಟು ಅಧಿಕವಾಗಿದೆ. ಜತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಜೈವಿಕ ತಂತ್ರಜ್ಞಾನ ಪ್ರಾಬಲ್ಯ ಹೆಚ್ಚು ಎಂಬುದನ್ನು ಇಂಟರ್‌ನ್ಯಾಷನಲ್ ಸರ್ವಿಸ್ ಫಾರ್ ದಿ ಅಕ್ವಿಸಿಷನ್ ಆಫ್ ಅಗ್ರಿ ಬಯೋಟೆಕ್ ಅಪ್ಲಿಕೇಷನ್ಸ್ (ಐಎಸ್‌ಎಎಎ) ವರದಿ ತಿಳಿಸಿದೆ.
ಐಎಸ್‌ಎಎಎ ಸಂಸ್ಥಾಪಕ ಅಧ್ಯಕ್ಷ ಕ್ಲೈವ್ ಜೇಮ್ಸ್ ಅವರು ಇತ್ತೀಚೆಗೆ ವರದಿ ಬಿಡುಗಡೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಜಿಎಂ ಕೃಷಿ ವಾಣಿಜ್ಯೀಕರಣಗೊಳಿಸಿ ಬೆಳೆಯಲಾರಂಭಿಸಿದಾಗ ಅಂದರೆ 1996ರಲ್ಲಿ ಕೇವಲ 17 ಲಕ್ಷ ಹೆಕ್ಟೇರ್‌ನಲ್ಲಿದ್ದ ಜಿಎಂ ಬೆಳೆ ಪ್ರಮಾಣ 2012ರಲ್ಲಿ 17 ಕೋಟಿ ಹೆಕ್ಟೇರ್‌ಗೆ ವಿಸ್ತರಿಸಿದೆ. 16 ವರ್ಷಗಳ ಅಂತರದಲ್ಲಿ ಈ ಬೆಳವಣಿಗೆ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇಷ್ಟು ಕ್ಷಿಪ್ರಗತಿಯಲ್ಲಿ ಬೇರೆ ಯಾವುದೇ ರೀತಿಯ ಕೃಷಿ ಪದ್ಧತಿ ಬೆಳವಣಿಗೆ ಕಂಡಿಲ್ಲ ಎಂದು ಹೇಳಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜಿಎಂ ಕೃಷಿ 2011ರಲ್ಲಿ ಶೇ. 50ರಷ್ಟಿದ್ದರೆ, 2012ರಲ್ಲಿ ಅದು ಶೇ. 52 ತಲುಪಿದೆ. ಆದರೆ ಕೈಗಾರಿಕಾ ಪ್ರಧಾನ ದೇಶಗಳಲ್ಲಿ ಜಿಎಂ ಕೃಷಿ 2011ರಲ್ಲಿ ಶೇ. 48ರಷ್ಟಾಗಿದೆ. ಜತೆಗೆ ಜಿಎಂ ಕೃಷಿಯಿಂದಾಗಿ ವಿಶ್ವದ ಆಹಾರ ಭದ್ರತೆ ಹಾಗೂ ಸುಸ್ಥಿರತೆಗೆ ಮಹತ್ವದ ಕೊಡುಗೆ ಲಭಿಸಿದೆ. ಅಲ್ಲದೆ 1996-2011ರ ಅವಧಿಯಲ್ಲಿನ ಜಿಎಂ ಕೃಷಿಯಿಂದಾಗಿ ರು. 9820 ಕೋಟಿ ಡಾಲರ್ ಮೌಲ್ಯದ ಧಾನ್ಯ ಬೆಳೆಯಲಾಗಿದ್ದು, 47.3 ಕೋಟಿ ಕೆ.ಜಿ.ಯಷ್ಟು ಕ್ರಿಮಿನಾಶಕ ಬಳಕೆ ತಪ್ಪಿದೆ. ಇದರಿಂದ ಭೂಮಿಯ ವಾತಾವರಣದಲ್ಲೂ ಉತ್ತಮ ಬೆಳವಣಿಗೆ ಆಗಿದೆ ಎಂಬುದು ವರದಿಯಿಂದ ದೃಢಪಟ್ಟಿದೆ ಎಂದಿದ್ದಾರೆ.

'ವೆಕ್ಟೊ ಮೋಟರ್ಸ್‌' ಆರಂಭ
ಬೆಂಗಳೂರು: ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ ಪ್ರೈ.ಲಿ. 'ವೆಕ್ಟೊ ಮೋಟರ್ಸ್‌' ಹೆಸರಿನಲ್ಲಿ ಹೊಸೂರು ಮುಖ್ಯರಸ್ತೆಯ ಸಿಂಗಸಂದ್ರದಲ್ಲಿ ಡೀಲರ್‌ಷಿಪ್ ಕೇಂದ್ರ ತೆರೆದಿದೆ.
ನಗರದಲ್ಲಿ ಇದು ಫಿಯೆಟ್ ಸಂಸ್ಥೆಯ ಸ್ವತಂತ್ರ ಹಾಗೂ ಪ್ರತ್ಯೇಕ ಡೀಲರ್‌ಷಿಪ್ ಕೇಂದ್ರವಾಗಿದ್ದು, ಫಿಯೆಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ರಿಕೊ ಅಟನಾಸಿಯೊ ಇತ್ತೀಚೆಗೆ ಈ ಕೇಂದ್ರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಂಸ್ಥೆ ನಗರವನ್ನು ಒಂದು ಪ್ರಮುಖ ಮಾರುಕಟ್ಟೆಯಾಗಿ ಪರಿಗಣಿಸಿದ್ದು, ಯೋಜನೆಗೆ ಅನುಗುಣವಾಗಿ ಈ ನೂತನ ಡೀಲರ್‌ಷಿಪ್ ಆರಂಭಿಸಲಾಗಿದೆ. ನಗರದಲ್ಲಿ ಸಮರ್ಥ ಗ್ರಾಹಕ ನೆಲೆ ಕಂಡುಕೊಂಡು, ಅವರ ಅನುಭೂತಿಯನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ವೆಕ್ಟೊ ಮೋಟರ್ಸ್ ಜತೆಗಿನ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಪ್ರಕಟಣೆ ತಿಳಿಸಿದೆ.

ವಿಶ್ವ ಸ್ವರ್ಣ ಪರಿಷತ್ತಿಗೆಸೋಮ್ ನೇಮಕ
ಬೆಂಗಳೂರು: ಚಿನ್ನ ಉದ್ದಿಮೆ ಮಾರುಕಟ್ಟೆ ಅಭಿವೃದ್ಧಿ ಸಂಸ್ಥೆ 'ವಿಶ್ವ ಸ್ವರ್ಣ ಪರಿಷತ್ತು' ಪಿ.ಆರ್.ಸೋಮಸುಂದರಂ(ಸೋಮ್) ಅವರನ್ನು ಭಾರತದ ನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ. ಸೋಮ್ ಅವರು ಮುಂದೆ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವ ಸ್ವರ್ಣ ಪರಿಷತ್ತಿನ ಚಟುವಟಿಕೆ ಮುನ್ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ.
ವಿವಿಧ ಔದ್ಯಮಿಕ ಕ್ಷೇತ್ರಗಳಲ್ಲಿ 27 ವರ್ಷಗಳಷ್ಟು ಅನುಭವ ಇರುವ ಸೋಮ್ ಅವರು ವಿಶ್ವ ಸ್ವರ್ಣ ಪರಿಷತ್ತು ಸೇರುವ ಮುನ್ನ ಲಕ್ಷ್ಮೀ ವಿಲಾಸ್ ಬ್ಯಾಂಕ್‌ನ ಪ್ರಧಾನ ಕಾರ್ಯಕಾರಿ ಅಧಿಕಾರಿಯಾಗಿದ್ದರು. ಅಲ್ಲದೆ ಅದಕ್ಕೂ ಮುನ್ನ ಭಾರತೀಯ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಭದ್ರತಾ ವಿಭಾಗ ಎಸ್‌ಟಿಸಿಐ ಕ್ಯಾಪಿಟಲ್ ಮಾರ್ಕೆಟ್‌ನ ನಿರ್ವಾಹಕ ನಿರ್ದೇಶಕ ಹುದ್ದೆ ಒಳಗೊಂಡಂತೆ 8 ವರ್ಷ ಹಿರಿಯ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು. ಹಿಂದೂಸ್ತಾನ್ ಯುನಿಲಿವರ್‌ನಲ್ಲಿ 13 ವರ್ಷ ಸೇವೆ ಜತೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಮಾನ್ಯತೆ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ಎನಿಸಿಕೊಂಡಿದ್ದಾರೆ.
ಪರಿಷತ್ತಿನ ಪ್ರಧಾನ ಕಾರ್ಯಕಾರಿ ಅಧಿಕಾರಿ ಅರಮ್ ಶೀಶ್ಮಣಿಯನ್ ಅವರು ಮಾತನಾಡಿ, ಜಗತ್ತಿನಲ್ಲಿ ಚಿನ್ನ ಮಾರುಕಟ್ಟೆಗಳ ಪೈಕಿ ಭಾರತ ಪ್ರಮುಖವಾಗಿದೆ. ಹೊಸ ಮಾರುಕಟ್ಟೆ ಅಭಿವೃದ್ಧಿ ಮತ್ತು ಪ್ರಬಲ ಪಾಲುದಾರಿಕೆ ಹೊಂದಲು ಈ ನೇಮಕ ಸಹಾಯವಾಗಲಿದೆ.

'ಜುವ್‌ಡೆರ್ಮ್ ರಿಫೈನ್‌' ಮಾರುಕಟ್ಟೆಗೆ ಬಿಡುಗಡೆ
ಬೆಂಗಳೂರು: ಮುಖಂದ ಸೌಂದರ್ಯ ಹೆಚ್ಚಿಸುವ 'ಜುವ್‌ಡೆರ್ಮ್ ರಿಫೈನ್‌' ಎಂಬ ಉತ್ಪನ್ನವನ್ನು ಅಲೆರ್ಗಾನ್ ಇಂಡಿಯಾ ಪ್ರೈ.ಲಿ. ಬಿಡುಗಡೆ ಮಾಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಪೂಜಾಗಾಂಧಿ ಅವರು 'ಜುವ್‌ಡೆರ್ಮ್ ರಿಫೈನ್‌' ಬಿಡುಗಡೆ ಮಾಡಿದರು. ಇದು ಮುಖದ ಮೇಲಿನ ಸುಕ್ಕನ್ನು ಮೃದುಗೊಳಿಸುತ್ತದೆ. ಜತೆಗೆ, ತ್ವಚೆಯ ತೇವಾಂಶ ಹಿಡಿದಿಟ್ಟುಕೊಳ್ಳಲು ಹಾಗೂ ಮುಖದ ಅಂದ ಹೆಚ್ಚಿಸಲು ಸಹಕಾರಿ ಎಂದು ಅಲೆರ್ಗಾನ್ ಹೆಲ್ತ್‌ಕೇರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಘು ಕುಮಾರ್ ತಿಳಿಸಿದ್ದಾರೆ.
ಡಾ.ವಂದನಾ ಚಾಟ್ರಾತ್, ಡಾ.ಪ್ರೀತಿ, ಡಾ.ಮಾನಸಿ ಸುಮನ್‌ಮುಖರ್ಜಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com