ಮಗಳಿಗೊಂದಿಷ್ಟು ಆರ್ಥಿಕ ಕೊಡುಗೆ

ಮಗಳು ಹುಟ್ಟಿದಾಗ ಹೆತ್ತವರು ಆಕೆಯ ಭವಿಷ್ಯದ ಬಗ್ಗೆ ಯೋಚಿಸುವುದು ಸಾಮಾನ್ಯ. ಅವಳ ಶಿಕ್ಷಣ, ಮದುವೆ ಬಗ್ಗೆ ಆಗಲೇ...
ಮಗಳಿಗೊಂದಿಷ್ಟು ಆರ್ಥಿಕ ಕೊಡುಗೆ
Updated on: 

ಮಗಳು ಹುಟ್ಟಿದಾಗ ಹೆತ್ತವರು ಆಕೆಯ ಭವಿಷ್ಯದ ಬಗ್ಗೆ ಯೋಚಿಸುವುದು ಸಾಮಾನ್ಯ. ಅವಳ ಶಿಕ್ಷಣ, ಮದುವೆ ಬಗ್ಗೆ ಆಗಲೇ ಚಿಂತಿಸಲು ಆರಂಭಿಸುತ್ತಾರೆ. ಆದರೆ, ನಿಮ್ಮ ಮುದ್ದು ಮಗಳಿಗೆ ಹಣಕಾಸಿನ ವಿಚಾರದ ಬಗ್ಗೆ ಹೇಳಿಕೊಡುವುದು ನೀವು ಆಕೆಗೆ ನೀಡುವ ಎಲ್ಲಕ್ಕಿಂತಲೂ ದೊಡ್ಡ ಗಿಫ್ಟ್.

ಹಣದ ಬಗ್ಗೆ ಮಾತಾಡಿ
ನಿಮ್ಮ ಅಜ್ಜ-ಅಜ್ಜಿ, ಹೆತ್ತವರು ನಿಮ್ಮೊಂದಿಗೆ ಹಣಕಾಸಿನ ವಿಚಾರ ಮಾತಾಡಿರಲಿಕ್ಕಿಲ್ಲ. ಹಾಗೆಂದು ಅದೇ ಸಂಪ್ರದಾಯವನ್ನು ನೀವೂ ಮುಂದುವರಿಸಬೇಡಿ. ಮಗಳೊಂದಿಗೆ ಸುಮ್ಮನೇ ಹಣಕಾಸಿನ ವಿಚಾರದ ಬಗ್ಗೆ ಮಾತನಾಡುತ್ತಾ, ಆ ಬಗ್ಗೆ ಆಸಕ್ತಿ ಮೂಡಿಸಿ, ಜ್ಞಾನವನ್ನು ಹೆಚ್ಚಿಸಿ. ಈ ಮೂಲಕ ಜೀವನದ ಪ್ರಮುಖ ಅಂಗದ ಬಗ್ಗೆ ಆಕೆಗೂ ಆಸಕ್ತಿ ಬೆಳೆಯುವಂತೆ ಮಾಡಿ.

ಪ್ರಾಥಮಿಕ ಅವಶ್ಯಕತೆಗಳು
ದೈನಂದಿನ ಬದುಕಿನಲ್ಲಿ ಕೆಲವೊಂದು ಆರ್ಥಿಕ ಅವಶ್ಯಕತೆಗಳಿರುತ್ತವೆ. ಅಂತಹ ಪ್ರಾಥಮಿಕ ವಿಚಾರಗಳ ಬಗ್ಗೆ ನಿಮ್ಮ ಮಗಳಿಗೆ ಮಾಹಿತಿ ನೀಡಿ. ಬ್ಯಾಂಕ್ ಚೆಕ್ ಬರೆಯುವುದು, ಹಣ ಪಡೆಯುವುದು, ಬಡ್ಡಿ ಪಾವತಿಸುವುದು ಮುಂತಾದ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹೇಳಿಕೊಡಿ. ನೀವು ಬ್ಯಾಂಕಿಗೆ ಹೋಗುವಾಗ ಮಗಳಿಗೆ ಲಾಲಿಪಾಪ್ ಕೊಟ್ಟು ಹೊರಗೆ ನಿಲ್ಲಿಸದಿರಿ. ಒಳಗೆ ಕರೆದೊಯ್ದು ನೀವೇನು ಮಾಡುತ್ತಿದ್ದೀರೆ ಎಂಬುದನ್ನು ತಿಳಿಸಿ.

ಆಕೆಗೂ ಹಣ ನೀಡಿ
ಮಗಳಿಗೆ ಸ್ವಲ್ಪ ಹಣ ನೀಡಿ, ಹೇಗೆ ಖರ್ಚು ಮಾಡಬೇಕೆಂದು ನಿರ್ಧರಿಸುವಂತೆ ಹೇಳಿ. ಆಕೆ ಸ್ವತಃ ಕೆಲವೊಂದು ಖರೀದಿ ನಿರ್ಧಾರ ಕೈಗೊಳ್ಳುತ್ತಾಳೆ. ಬಳಿಕ ಅವಳಿಗೆ ಹಣದ ಮೌಲ್ಯ ಗೊತ್ತಾಗುತ್ತದೆ. ತನ್ನ ಖರೀದಿ ಸಾಮರ್ಥ್ಯದ ಮಿತಿ ಅರಿವಾಗುತ್ತದೆ. ತನಗಿಷ್ಟವಾದ ಹೆಚ್ಚು ಬೆಲೆಯ ವಸ್ತು ಕೊಳ್ಳಬೇಕೆಂದರೆ ಉಳಿತಾಯ ಮಾಡಬೇಕಾದ ಅವಶ್ಯಕತೆಯಿದೆ ಎಂಬುದೂ ಗೊತ್ತಾಗುತ್ತದೆ.

ಉಳಿತಾಯದ ಸಂಸ್ಕೃತಿ
ಮಗಳ ಹೆಸರಲ್ಲಿ ಉಳಿತಾಯ ಖಾತೆಯೊಂದನ್ನು ತೆರೆಯಿರಿ. ಹಣ ನಿರ್ವಹಣೆ ಕಲಿಸಿಕೊಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ಖಾತೆಯಲ್ಲಿ ಹಣ ಉಳಿತಾಯವಾಗುತ್ತಿದೆ ಎಂಬುದು ಆಕೆಯ ಸಂತೋಷಕ್ಕೂ ಕಾರಣವಾಗುತ್ತದೆ.

ಹೂಡಿಕೆಗೂ ಪ್ರೋತ್ಸಾಹ
ವೆಚ್ಚ, ಉಳಿತಾಯ, ಬಡ್ಡಿ ಮುಂತಾದ ಸಂಗತಿಗಳ ಬಳಿಕ ಹೂಡಿಕೆ ಬಗ್ಗೆ ಕಲಿಸಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹೇಳಿಕೊಡಿ. ನಂತರ ಪ್ರತಿ ಷೇರುಗಳ ಏರಿಳಿತವನ್ನು ಫಾಲೋ ಮಾಡಲೂ ಕಲಿಸಿ. ಇದು ಆಕೆಗೆ ನೈಜ ಬದುಕಿನ ಪಾಠ ಹೇಳಿಕೊಡುತ್ತದೆ. ಷೇರು ಖರೀದಿ, ಮಾರಾಟದ ಪ್ರಕ್ರಿಯೆ ಬಗ್ಗೆ ಅನುಭವವೂ ಸಿಗುತ್ತದೆ.

ಭವಿಷ್ಯದ ಬಗ್ಗೆ
ಮಗಳು ದೊಡ್ಡವಳಾದಂತೆ, ಆಕೆಗೆ ಸ್ವಲ್ಪ ವಿಸ್ತಾರವಾದ ವಿಚಾರಗಳ ಬಗ್ಗೆ ತಿಳಿಹೇಳಿ. ಬ್ಯುಸಿನೆಸ್ ಮಾಲೀಕ ಮತ್ತು ಉದ್ಯೋಗಿಯ ನಡುವಿನ ವ್ಯತ್ಯಾಸ, ಕೆಲಸಗಾರ ಮತ್ತು ಮ್ಯಾನೇಜರ್, ನೀಲಿ ಕಾಲರ್ ಕೆಲಸ ಮತ್ತು ಬಿಳಿ ಕಾಲರ್ ಕೆಲಸಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಚರ್ಚಿಸಿ. ಇದನ್ನೇ ಮುಂದುವರಿಸುತ್ತಾ ಶಿಕ್ಷಣ, ಅದರ ಮಹತ್ವದ ಬಗ್ಗೆಯೂ ಹೇಳಿ. ಆರ್ಥಿಕವಾಗಿ ಸ್ವಾವಲಂಬಿಯಾಗುವ ದಾರಿ ಹೇಳಿಕೊಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com