ಎಚ್ಚರ, ಕುಲಗೆಟ್ಟ ಷೇರುಗಳು ಬರಲಿವೆ

ಎಚ್ಚರ, ಕುಲಗೆಟ್ಟ ಷೇರುಗಳು ಬರಲಿವೆ
Updated on: 

ಕಳೆದ ಹತ್ತು ವರ್ಷಗಳಿಂದಲೂ ನಾಪತ್ತೆಯಾಗಿದ್ದ ಕುಲಗೆಟ್ಟು ಹೋಗಿದ್ದ ಷೇರುಗಳು (ವಾಸ್ತವದಲ್ಲಿ ಅವಕ್ಕೆ ಚಿಕ್ಕಾಸಿನ ಬೆಲೆಯೂ ಇಲ್ಲ) ಈಗ ಮತ್ತೆ ಬಜಾರಿನಲ್ಲಿ ಕಾಣಿಸಿಕೊಂಡಿವೆ ಎಂದು ಹಲವು ಪತ್ರಿಕೆಗಳಲ್ಲಿ ವರದಿಯಾಗಿದೆ.
ಈ ವಿಚಾರವನ್ನು ತಿಳಿಯದೇ ಅನೇಕರು ಅಲ್ಪ ಕಾಲದಲ್ಲೇ ದೊಡ್ಡ ರೀತಿಯ ಪ್ರತಿಫಲವನ್ನು ಪಡೆಯುವ ಅಸೆಯಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಇವೆ. ಈ ಷೇರುಗಳ ಬೆಲೆ ಕಡಿಮೆ.
ಒಂದು ವರದಿಯ ಪ್ರಕಾರ ಕಳೆದ ಹನ್ನೆರಡು ವರ್ಷಗಳಿಂದಲೂ ಪೇಟೆಯಲ್ಲಿ ಹೇಳಲು ಹೆಸರೇ ಇಲ್ಲದಿದ್ದ ಸುಮಾರು 200 ಷೇರುಗಳು ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿವೆ. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕೆಲವು ವ್ಯವಹಾರಸ್ಥರು ಈ ಷೇರುಗಳಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ಷೇರು ಬೆಲೆಗಳಂತೂ ಶೇ.ನೂರು-ಸಾವಿರದ ವರೆಗೂ ಏರಿವೆ (ಲೆಕ್ಕದಲ್ಲಿ ಮಾತ್ರ). ಹಲವು ಪತ್ರಿಕೆಗಳು ಈ ಷೇರುಗಳ ಹೆಸರುಗಳನ್ನೂ ಪ್ರಕಟಿಸಿವೆ.
ಹದಿನಾರು ವರ್ಷಗಳ ಹಿಂದೆ ಎರಡೂವರೆ ರು. ಬೆಲೆ ಕಂಡಿದ್ದ ಷೇರಿನ ಈಗಿನ ಬೆಲೆ 37.
ಇನ್ನೊಂದು ಷೇರಿನ ಬೆಲೆ ಶೇ.1000ದಷ್ಟು ಹೆಚ್ಚಾಗಿದೆ. ತುಂಬಾ ಹಿಂದೆ ಈ ಷೇರುಗಳು ಐವತ್ತು ಪೈಸೆ, ಒಂದು ರು.ಗೂ ಮಾರಾಟವಾಗಿತ್ತು. ಇಂತಹ ಷೇರುಗಳ ತಂಟೆಗೇ ಗ್ರಾಹಕರು ಹೋಗಬಾರದು. ಇದೆಲ್ಲ ನೀರಿನ ಮೇಲಿನ ಗುಳ್ಳೆಯ ವ್ಯವಹಾರ. ಹಿಂದೆಯೂ ಇಂತಹ ಬೋಗಸ್ ವ್ಯವಹಾರ ಕುರಿತು ಎಚ್ಚರಿಕೆ ನೀಡಲಾಗಿತ್ತು. ಈಗ ಮತ್ತೆ ಈ ಕೆಟ್ಟ ವ್ಯವಹಾರ ತಲೆ ಎತ್ತಿರುವುದನ್ನು ಗಮನಿಸಬೇಕು. ಪೇಟೆಯಲ್ಲಿ ಅಲ್ಪ ಕಾಲದಲ್ಲಿ ಯಾವ ಷೇರಿಗೂ ಇಷ್ಟೊಂದು ಬೆಲೆ ಏರಲಿಲ್ಲ. ಎಚ್ಚರದಿಂದಿರಿ.

ಸಣ್ಣ ಕಂಪನಿಗಳ ಷೇರು ಇಳಿಮುಖ
ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಣ್ಣ ಪ್ರಮಾಣದ ಹಾಗೂ ಮಧ್ಯಮ ದರ್ಜೆಯ ಷೇರುಗಳ ವ್ಯವಹಾರ ತೃಪ್ತಿಕರವಾಗಿಲ್ಲ. ಒಟ್ಟಾರೆ ಲೆಕ್ಕದಲ್ಲಿ ಈ ಷೇರುಗಳ ಬೆಲೆ ಶೇ.14 ರಷ್ಟು ಕಡಿಮೆಯಾಗಿದೆ. ವಾಸ್ತವದಲ್ಲಿ ಈಗಿನ ಸ್ಥಿತಿಯಲ್ಲಿ ಇದು ವಿಚಿತ್ರವಾದ ವರ್ತನೆ.
ಚಿದಂಬರಂ ಬಜೆಟ್ ಅನಂತರ ಈ ಷೇರುಗಳಲ್ಲಿ ಉತ್ತಮ ರೀತಿಯ ವ್ಯವಹಾರವನ್ನು ನಿರೀಕ್ಷಿಸುವುದಕ್ಕೆ ಅವಕಾಶವಿದೆ. ಈಗಿನ ಅನಗತ್ಯ ಬೆಲೆ ಇಳಿತದ ಪ್ರಕ್ರಿಯೆಯನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗಮನಿಸಿ, ಒಂದೆರಡು ಪ್ರಕರಣಗಳಲ್ಲಿ ತನಿಖೆಯೂ ನಡೆದಿದೆ. ಕೆಲವು ವಲಯಗಳಲ್ಲಿ ಪ್ರಚಲಿತದಲ್ಲಿರುವ ವರದಿಗಳಂತೆ, ಅನೇಕ ಸಣ್ಣಪುಟ್ಟ ಸಂಸ್ಥೆಗಳಿಗೆ ಈಗ ಸಾಲದ ಬಡ್ಡಿ ಕಟ್ಟುವುದು ಕಷ್ಟವಾಗಿದೆಯಂತೆ. ಅದರ ಪರಿಣಾಮ ಕಂಪನಿಯ ಕೆಲಸದ ಮೇಲೂ ಕೆಟ್ಟ ರೀತಿಯಲ್ಲೇ ಆಗಿದೆ. ಇಂತಹ ಸಂಸ್ಥೆಗಳಿಗೆ ಈಗ ಹೊಸ ಸಾಲವೂ ಹುಟ್ಟುತ್ತಿಲ್ಲ.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com