

-ಬದುಕು ಈಗ ಸುಲಭ!
ಭಾರತದಲ್ಲಿ ಚಿನ್ನ ಯಾವತ್ತಿಗೂ ಆಪ್ಯಾಯಮಾನ ಲೋಹವೇ. ಕಡಿಮೆ ದರಕ್ಕೆ ಸಿಕ್ಕರೆ ಕೊಳ್ಳಬೇಕು ಎನ್ನುವವರ ಸಂಖ್ಯೆ ಈಗಲೂ ಹೆಚ್ಚಾಗಿಯೇ ಇದೆ. ಅಂಥವರಿಗಾಗಿ ಇದೊಂದು ಸಂತೋಷದ ಸುದ್ದಿ ಎನ್ನಬಹುದು.
ಚಿನ್ನದ ಬೆಲೆ ಕಡಿಮೆಯಾಗಿದೆ. ದಾಖಲೆಯ ಮೊತ್ತವಾದ 31 ಸಾವಿರದ ಆಜೂಬಾಜನ್ನು ಬಿಟ್ಟು ಅದು 29 ಸಾವಿರದಲ್ಲಿದೆ. ಬುಲ್ಲಿಯನ್ ಮಾರ್ಕೆಟ್ ಪರಿಣಿತರ ಪ್ರಕಾರ ಈ ಬೆಲೆ ಇನ್ನೂ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಇದರ ಬಗ್ಗೆ ಮಾಹಿತಿ ತಿಳಿಯಲು ಹೋದಲ್ಲಿ ಹಲವು ಸಂಗತಿಗಳು ಹೊರಬೀಳುತ್ತವೆ. ಬೃಹತ್ ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಚಿನ್ನದ ಬಗ್ಗೆ ಋಣಾತ್ಮಕ ಅಂಶ ಹೊಂದಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಅಮೆರಿಕದ ಆರ್ಥಿಕ ಚೇತರಿಕೆ.
ಈ ಹಿಂದೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆ ಕಂಡುಬಂದಾಗ ಷೇರು ಮಾರುಕಟ್ಟೆ ಕುಸಿದು ಬಿದ್ದಿತು. ಹಣವನ್ನು ಹೂಡಿಕೆ ಮಾಡಲು ಚಿನ್ನಕ್ಕೆ ಪರ್ಯಾಯವಾದದ್ದು ಬೇರೆ ಯಾವುದೂ ಇಲ್ಲ ಎನ್ನುವುದು ಹೂಡಿಕೆದಾರರ ಅಭಿಪ್ರಾಯವಾಗಿತ್ತು. ಇದರ ಕಾರಣವೇ ಸತತ 12 ವರ್ಷ ಚಿನ್ನ ಏರಿಕೆಯನ್ನಷ್ಟೇ ಕಂಡಿತು. ಇದು ಈ ಶತಮಾನದ ಬೃಹತ್ ಏರಿಕೆ ಎಂದೆನ್ನಬಹುದು.
ಇದೀಗ ಅಮೆರಿಕ ಸಾಲದ ಸುಳಿಯಿಂದ ಹೊರಬರುತ್ತಿದೆ. ಕಳೆದವಾರ ಅಮೆರಿಕನ್ ಫೆಡರಲ್‌ನ ವೆಚ್ಚ ಕಡಿತಕ್ಕೆ ಒಬಾಮ ಸಹಿ ಹಾಕಿದ್ದಾರೆ. 85 ದಶಕೋಟಿ ಡಾಲರ್‌ಗಳ ಈ ಯೋಜನೆ ಹಲವು ಉದ್ಯೋಗಗಳಿಗೆ ಕತ್ತರಿ ಹಾಕುವುದಷ್ಟೇ ಅಲ್ಲ, ಆರ್ಥಿಕ ಪರಿಸ್ಥಿತಿಯನ್ನೂ ಸುಧಾರಿಸಲಿದೆ. ಯುರೋಪಿಯನ್ ಮಾರುಕಟ್ಟೆಯೂ ತನ್ನ ಸಮಸ್ಯೆಗಳಿಂದ ನಿಧಾನವಾಗಿ ಹೊರಬರುತ್ತಿದೆ.
ದಶಕೋಟಿ ಹೂಡಿಕೆದಾರ ಜಾರ್ಜ್ ಸೋರಸ್ ತನ್ನ ಚಿನ್ನದ ಇಟಿಎಫ್ (ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಗಳ ಶೇ. 55ರಷ್ಟನ್ನು ಕಡಿತಗೊಳಿಸಿದ್ದಾನೆ. 8.5 ದಶಕೋಟಿ ಮೊತ್ತದ ಫಂಡ್ ಚಿನ್ನದಿಂದ ಸಾಕಷ್ಟು ನಗದು ರೂಪಕ್ಕೆ ಪರಿವರ್ತನೆಗೊಂಡಿದೆ. ಚಿನ್ನ ಎಲ್ಲಿದ್ದರೂ ಚಿನ್ನವೇ. ಅದೇ ರೀತಿ ಎಲ್ಲೇ ಚಿನ್ನದ ಮೇಲೆ ಪರಿಣಾಮ ಬೀರಿದರೂ, ಅದರ ಪ್ರಭಾವ ಜಗತ್ತಿನಾದ್ಯಂತ ಹಬ್ಬುತ್ತದೆ. ಭಾರತದಲ್ಲಿಯೂ ಚಿನ್ನದ ದರ ಇಳಿಕೆಯಾಗಲು ಇದು ಸಹ ಕಾರಣವೇ.
ಜಗತ್ತಿನ ಪ್ರಮುಖ ಚಿನ್ನದ ಹೂಡಿಕೆದಾರರಾದ ಜೂಲಿಯನ್ ರಾಬರ್ಟ್‌ಸನ್ ಮತ್ತು ಜಾನ್ ಪೌಲ್‌ಸನ್ ಕೂಡ ತಮ್ಮ ಬಳಿ ಇದ್ದ ಅಪಾರ ಪ್ರಮಾಣದ ಚಿನ್ನದ ಇಟಿಎಫ್‌ಗಳನ್ನು ಕಡಿತಗೊಳಿಸಿದ್ದಾರೆ. ಹಲವು ಹೂಡಿಕೆದಾರರು ಹಣವನ್ನು ಚಿನ್ನದಿಂದ ತೆಗೆದು ಬೇರೆ ಹೂಡಿಕೆ ಯಾವುದು ಎನ್ನುವತ್ತ ಗಮನ ಹರಿಸಿದ್ದಾರೆ. ಇನ್ನು ಚಿನ್ನದ ಗುಳ್ಳೆ ಒಡೆಯಿತು ಎಂದು ಸೋರಸ್ ತಿಳಿಸಿರುವುದೂ ಹೂಡಿಕೆದಾರರು ಪರ್ಯಾಯ ಮಾರ್ಗ ಹುಡುಕಿಕೊಳ್ಳುವುದಕ್ಕೆ ಸೂಚನೆಯಾಗಿದೆ.
ಬ್ಲೂಮ್‌ಬರ್ಗ್ ತನ್ನ ವರದಿಯಲ್ಲಿ, ಚಿನ್ನವನ್ನು ಹೊಂದಿದ್ದ ಹೂಡಿಕೆದಾರರು 106.2 ಮೆಟ್ರಿಕ್ ಟನ್‌ಗಳಷ್ಟು ಚಿನ್ನವನ್ನು ಮಾರಿದ್ದಾರೆ ಎಂದು ತಿಳಿಸಿದ್ದು, ಅದರ ಮೊತ್ತ 5.4 ದಶಕೋಟಿ ಡಾಲರ್‌ಗಳಾಗಿದೆ ಎಂದು ತಿಳಿಸಿದೆ. ಬ್ಲೂಮ್‌ಬರ್ಗ್ ತಾನು ಈ ಮುನ್ನ ತಿಳಿಸಿದ್ದ ಭವಿಷ್ಯದ ಚಿನ್ನದ ದರದ ವಿವರವನ್ನು ಪರಿಷ್ಕರಿಸಿದೆ. ಅದು ಪ್ರತಿ ಔನ್ಸ್‌ಗೆ 1810 ಡಾಲರ್‌ನಿಂದ 1600 ಡಾಲರ್‌ಗೆ ಇಳಿಸಿದೆ.
ಗೋಲ್ಡ್‌ಮನ್ ಸ್ಯಾಕ್‌ನ ಓ ನೀಲ್ ಚಿನ್ನದ ದರ ಇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ಈಕ್ವಿಟಿ ಮಾರುಕಟ್ಟೆ ಇನ್ನೊಂದಿಷ್ಟು ಸುಧಾರಿಸಿದರೆ, ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದಿಂದ ತೆಗೆದು ಸೂಕ್ತ ದಾರಿಯನ್ನೇ ತೋರಿಸಲಿದ್ದಾರೆ ಎಂದು ತಿಳಿಸುತ್ತಾರೆ. ಮುಂಬೈನ ಚಿನ್ನ, ಬೆಳ್ಳಿ ವರ್ತಕರೂ ಈ ಬಗ್ಗೆ ಸಹಮತ ವ್ಯಕ್ತಪಡಿಸುತ್ತಾರೆ. ಪ್ರಪಂಚದಲ್ಲಿ ಆದ ಬದಲಾವಣೆ ಭಾರತದ ಮೇಲೂ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಚಿನ್ನದ ಖರೀದಿಗೆ ಭಾರತದಲ್ಲಿದ್ದಷ್ಟು ಜನ ಬೇರೆ ಯಾವ ದೇಶದಲ್ಲಿದ್ದಾರೆ ಹೇಳಿ ಎನ್ನುವ ಭರವಸೆಯನ್ನು ವ್ಯಕ್ತಪಡಿಸುತ್ತಾರೆ.
-ಕೆ.ಎನ್. ಸತೀಶ ದೊಡ್ಡಬಳ್ಳಾಪುರ