ಷೇರುಮಾರುಕಟ್ಟೆಯಲ್ಲಿ ಹೇಗೆ ವ್ಯವಹಾರ ಮಾಡಬೇಕು? ಹೇಗೆ ಲಾಭ ಮಾಡಿಕೊಳ್ಳಬಹುದು? ಹೂಡಿಕೆ ಮಾಡುವಾಗ ಅನುಸರಿಸಬಹುದಾದ ಎಚ್ಚರಿಕೆಯ ಕ್ರಮಗಳೇನು? ಹೂಡಿಕೆದಾರರಿಗೆ ಇಲ್ಲಿದೆ ಒಂದಷ್ಟು ಟಿಪ್ಸ್ ಗಳು...
ನಷ್ಟದ ವಿಚಾರದಲ್ಲಿ ಕಠಿಣ
ಷೇರುಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತೀರಿ. ಅನಿರೀಕ್ಷಿತವಾಗಿ ನಷ್ಟ ಅನುಭವಿಸುತ್ತೀರಿ. ನಷ್ಟ ಆದ ಕೂಡಲೇ ಮತ್ತೊಮ್ಮೆ ಪ್ರಯತ್ನಿಸುವ ಸಾಹಸ ಬೇಡ. ಈ ಮೂಲಕ ನಿಮಗೆ ಮುಂದೆ ಆಗಬಹುದಾದ ನಷ್ಟವನ್ನು ಕಡಿತಗೊಳಿಸಿ. ಇದೇ ನಿಯಮ ಗೆಲುವಿನ ಉಮೇದಿನಲ್ಲಿರುವಾಗಲೂ ಪಾಲಿಸಿ. ಮಾರುಕಟ್ಟೆ ಕೈಹಿಡಿಯುತ್ತಿರುವಾಗ ಒಂದಷ್ಟು ಹಣ ಮಾಡಿಕೊಂಡಿರುತ್ತೀರಿ. ಆದರೆ, ಷೇರುಮಾರುಕಟ್ಟೆ ದಿಢೀರ್ ಕುಸಿಯಲು ಆರಂಭಿಸಿದರೆ ಲಾಭದಲ್ಲಿ ಸ್ವಲ್ಪ ಕಳೆದುಕೊಳ್ಳುತ್ತೀರಿ ಅಂತಿಟ್ಟುಕೊಳ್ಳಿ. ಕೂಡಲೇ ವ್ಯವಹಾರ ನಿಲ್ಲಿಸಿ. ನಿಮ್ಮ ಈ ನಡೆ ಲಾಭವನ್ನು ನಿಮ್ಮ ಬಳಿಯೇ ಉಳಿಸುತ್ತದೆ.
ನಷ್ಟದಿಂದ ಪಾಠ ಕಲಿಯಿರಿ
ನಮ್ಮ ತಪ್ಪು ನಡೆಯಿಂದಾಗಿ ಅನೇಕ ಬಾರಿ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿರುತ್ತೇವೆ. ಇಂಥ ಸಂದರ್ಭದಲ್ಲಿ ಎಲ್ಲಿ ಎಡವಿದ್ದೀರಿ ಎನ್ನುವುದನ್ನು ಅರಿತುಕೊಳ್ಳಿ. ಅಂತಹ ತಪ್ಪುಗಳನ್ನು ಪುನರಾವರ್ತಿಸಬೇಡಿ.
ಅತಿ ಆಸೆ ಬೇಡ
ನಂಬಿಕೆ ರಹಿತ ಷೇರೊಂದರಲ್ಲಿ ಹಣ ಹೂಡುವುದು ಸುಲಭ. ನಿಮ್ಮ ಗೃಹ ಸಾಲ ಅಥವಾ ಕಾರಿನ ಸಾಲದ ಡೌನ್ಪೇಮೆಂಟ್ಗಾಗಿ ತುರ್ತು ಹಣದ ಅಗತ್ಯ ಇದ್ದಾಗ ಕೆಲವರು ಇಂಥ ಸಾಹಸಕ್ಕೆ ಕೈಹಾಕುತ್ತಾರೆ. ಈ ರೀತಿಯ ದಿಢೀರ್ ಏರಿಕೆ ಮಾರುಕಟ್ಟೆಯೊಳಗೆ ನಡೆಯುತ್ತಿರುವ ಆಟದಿಂದಾಗಿ ಆಗುತ್ತದೆಯೇ ಹೊರತು ಕಂಪನಿಯಲ್ಲಿನ ಹಣಕಾಸು ಪರಿಸ್ಥಿತಿಯಲ್ಲಿನ ಬದಲಾವಣೆಯಿಂದಲ್ಲ ಎನ್ನುವುದು ನೆನಪಿರಲಿ. ಹೂಡಿದ ಬಂಡವಾಳದಿಂದ ಉತ್ತಮ ಲಾಭ ಪಡೆಯಬೇಕಾದರೆ ನೀವು ದೀರ್ಘಾವಧಿಯಲ್ಲಿ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಹೊರಗಿನಿಂದ ಹಣ ತರಬೇಡಿ
ಅನೇಕ ವ್ಯಕ್ತಿಗಳು ಹೊರಗಿನಿಂದ ಸಾಲ ಪಡೆದುಕೊಂಡು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಕೆಲ ವೇಳೆ ಕೈ ಹಿಡಿಯಬಹುದು. ಆದರೆ, ಎಲ್ಲಾ ಸಮಯದಲ್ಲೂ ಇದರಲ್ಲಿ ಯಶಸ್ಸು ಸಿಗಬೇಕೆಂದೇನೂ ಇಲ್ಲ. ಮಾರುಕಟ್ಟೆ ಬದಲಾವಣೆಯಿಂದಾಗುವ ದೊಡ್ಡಮಟ್ಟದ ನಷ್ಟಗಳು ಹಣಕಾಸು ಅಷ್ಟೇ ಅಲ್ಲ ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ. ಇದು ಕುಟುಂಬದಲ್ಲೂ ಸಮಸ್ಯೆ ತಂದೊಡ್ಡಬಹುದು.
ಸುಮ್ಮನಿರಿ
ಷೇರು ಮಾರುಕಟ್ಟೆ ಯಾವ ರೀತಿ ಪ್ರತಿಕ್ರಿಯೆ ತೋರಬಹುದು ಎನ್ನುವ ಕುರಿತು ಗೊಂದಲಗಳಿದ್ದರೆ ಸುಮ್ಮನಿರಿ. ಯಾವುದೇ ಕಾರಣಕ್ಕೂ ಷೇರುಪೇಟೆಯಲ್ಲಿ ಹಣ ಹೂಡಲು ಹೋಗಬೇಡಿ. ಯಾಕೆಂದರೆ ಈ ಸಂದರ್ಭದಲ್ಲಿ ಅಂದಾಜಿನಲ್ಲಿ ಗುಂಡು ಹೊಡೆಯಲು ಹೋಗಿ ಲಾಭಕ್ಕಿಂತ ನಷ್ಟವೇ ಜಾಸ್ತಿ.
ಪುಸ್ತಕಗಳನ್ನು ಓದಿ
ಹೂಡಿಕೆ ಕುರಿತು ಸಾಕಷ್ಟು ಪುಸ್ತಕಗಳಿವೆ. ಅವುಗಳನ್ನು ಓದಿ. ಜ್ಞಾನವೃದ್ಧಿಸಿಕೊಳ್ಳಿ. ವಾರೆನ್ ಬಫೆಟ್, ರಾಕೇಶ್ ಜುಂಜುನ್ವಾಲಾ ಮತ್ತಿತರ ಖ್ಯಾತ ಹೂಡಿಕೆದಾರರ ಸಲಹೆಗಳನ್ನು ಪಾಲಿಸಿ. ಇದು ನಿಮ್ಮ ಜ್ಞಾನವೃದ್ಧಿಸುತ್ತದೆ. ಮಾರುಕಟ್ಟೆಯಲ್ಲಿ ಎದುರಾಗುವ ಕೆಟ್ಟ ಪರಿಸ್ಥಿತಿ ಎದುರಿಸಲು ಇದು ನೆರವು ನೀಡಲಿದೆ.
ಷೇರಿಗೆ ಮಿತಿ ಇರಲಿ
ನಿಮ್ಮ ಕೈಯಲ್ಲಿ 20ಕ್ಕಿಂತ ಹೆಚ್ಚಿನ ಕಂಪನಿಗಳ ಷೇರುಗಳನ್ನು ಇಟ್ಟುಕೊಳ್ಳಬೇಡಿ. ಈ ಷೇರು ಒಂದೇ ಕ್ಷೇತ್ರದ ಕಂಪನಿಗಳದ್ದಾಗಿರುವುದೂ ಬೇಡ. ಏಕೆಂದರೆ ಒಂದು ಕ್ಷೇತ್ರದ ಷೇರು ನಷ್ಟ ಅನುಭವಿಸಿದರೆ ಇನ್ನೊಂದು ಕೈ ಹಿಡಿಯಬಹುದು.