ವಿಜಯಾ ಬ್ಯಾಂಕ್ಗೆ 136 ಕೋಟಿ ಲಾಭ
ಕನ್ನಡಪ್ರಭ ವಾರ್ತೆ ಬೆಂಗಳೂರು ನ.11-
ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಿಜಯಾಬ್ಯಾಂಕ್ 136 ಕೋಟಿ ನಿವ್ವಳ ಲಾಭಗಳಿಸಿದೆ. ಲಾಭ ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಾಗಿದ್ದು, ಕಳೆದ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕಕ್ಕಿಂತ 13 ಕೋಟಿ ಹೆಚ್ಚಿನ ಲಾಭಗಳಿಸಿದೆ ಎಂದು ವಿಜಯಾ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರಕಾಮತ್ ತಿಳಿಸಿದ್ದಾರೆ. ಬ್ಯಾಂಕ್ನ ನಗರದ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಟ್ಟಾರೆ ವ್ಯವಹಾರ 1.75 ಲಕ್ಷ ಕೋಟಿ: ಬ್ಯಾಂಕ್ನ ಒಟ್ಟಾರೆ ವ್ಯವಹಾರವು 1.75 ಲಕ್ಷ ಕೋಟಿ ಗಡಿ ದಾಟಿದೆ. ವರ್ಷಾಂತ್ಯಕ್ಕೆ 2 ಲಕ್ಷ ಕೋಟಿ ವ್ಯವಹಾರದ ದಾಖಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ ಬ್ಯಾಂಕ್ನಲ್ಲಿನ ಒಟ್ಟು ಠೇವಣಿ ಮೊತ್ತ 1.07 ಲಕ್ಷ ಕೋಟಿಯಷ್ಟಾಗಿದೆ. ಇದೇ ಮೊದಲ ಬಾರಿಗೆ ಬ್ಯಾಂಕ್ನ ಠೇವಣಿ ಮೊತ್ತವು ಒಂದು ಲಕ್ಷ ಕೋಟಿ ದಾಟಿದೆ ಎಂದು ಅವರು ಹೇಳಿದರು.
71 ಸಾವಿರ ಕೋಟಿ ಸಾಲ: ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿರುವ ಸಂದರ್ಭದಲ್ಲಿಯೂ ಲಾಭ ಗಳಿಸಿದ ಬೆರಳೆಣಿಕೆಯ ಸಾರ್ವಜನಿಕ ಉದ್ದಿಮೆಯ ಕೆಲವೇ ಬ್ಯಾಂಕ್ಗಳಲ್ಲಿ ವಿಜಯಾ ಬ್ಯಾಂಕ್ ಕೂಡ ಒಂದಾಗಿದೆ. ವಿಜಯಾ ಬ್ಯಾಂಕ್ನ ಠೇವಣಿಯಲ್ಲಿ ಶೇ.27ರಷ್ಟು ವೃದ್ಧಿಯಾಗಿದ್ದರೆ, ಸಾಲ ಪ್ರಮಾಣದಲ್ಲಿ ಶೇ.19ರಷ್ಟು ಹೆಚ್ಚಾಗಿದೆ. ಬ್ಯಾಂಕ್ನ ಒಟ್ಟು ಸಾಲವು 71 ಸಾವಿರ ಕೋಟಿಗೆ ಏರಿದೆ ಎಂದು ಕಾಮತ್ ತಿಳಿಸಿದರು.
ಈ ಹಿಂದೆ ಹೇಳಿರುವಂತೆ ಪ್ರಾಮುಖ್ಯತಾ ವಲಯಕ್ಕೆ ನೀಡಿದ್ದ ಒತ್ತನ್ನು ವಿಜಯಾ ಬ್ಯಾಂಕ್ ಮುಂದುವರೆಸಿದೆ. ಸೆಪ್ಟೆಂಬರ್ 30ಕ್ಕೆ ಅಂತ್ಯವಾದ ತ್ರೈಮಾಸಿಕಕ್ಕೆ ಒಟ್ಟು 21 ಸಾವಿರ ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಕೃಷಿ ಕ್ಷೇತ್ರಕ್ಕೆ 6713 ಕೋಟಿ ಹಾಗೂ ಸಣ್ಣ ಉದ್ದಿಮೆಗಳಿಗೆ 9357 ಕೋಟಿ ಸಾಲ ಒದಗಿಸಲಾಗಿದೆ. ಆದರೆ ಶೈಕ್ಷಣಿಕ ಸಾಲವನ್ನು ನಿರೀಕ್ಷೆಗೆ ತಕ್ಕಂತೆ ನೀಡಲಾಗಿಲ್ಲ. ಈ ವರ್ಷಾಂತ್ಯದೊಳಗೆ 1 ಸಾವಿರ ಕೋಟಿ ದಾಟುವ ಅಂದಾಜಿದೆ ಎಂದು ಅವರು ಹೇಳಿದರು.
ಡಿಸೆಂಬರ್ ಅಂತ್ಯದೊಳಗೆ ಬ್ಯಾಂಕ್ನ ಶಾಖೆಗಳ ಸಂಖ್ಯೆಯನ್ನು 1500ಕ್ಕೆ ಏರಿಸುವ ಗುರಿ ಹೊಂದಲಾಗಿತ್ತು. ಗುರಿ ಸಾಧನೆಗೆ ಇನ್ನು 37 ಶಾಖೆಗಳನ್ನು ಪ್ರಾರಂಭಿಸುವ ಅವಶ್ಯಕತೆಯಿದೆ. ಇನ್ನು ಪ್ರತಿ ಬ್ರಾಂಚ್ಗೂ ಒಂದು ಎಟಿಎಂ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ 499 ಎಟಿಎಂ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದೇಶಿ ಬ್ಯಾಂಕ್ ಸ್ಥಾಪನೆಗೆ ವಿರೋಧವಿಲ್ಲ: ಭಾರತದ ಹಣಕಾಸು ವಲಯಕ್ಕೆ ಖಾಸಗಿ ಬ್ಯಾಂಕ್ಗಳು ಲಗ್ಗೆ ಇಟ್ಟಾಗ ಯಾವುದೆ ಸಾರ್ವಜನಿಕ ಉದ್ದಿಮೆ ಬ್ಯಾಂಕ್ಗಳು ಕಂಪ್ಯೂಟರೀಕರಣಗೊಂಡಿರಲಿಲ್ಲ. ಇಂದು ಖಾಸಗಿ ಬ್ಯಾಂಕ್ಗಳಿಗೆ ಸಡ್ಡು ಹೊಡೆಯುವ ಮಟ್ಟಿಗೆ ಬೆಳೆದಿವೆ. ಇದೇ ರೀತಿಯ ಗುಣಾತ್ಮಕ ಸ್ಪರ್ಧೆಗಳಿಗೆ ವಿದೇಶಿ ಬ್ಯಾಂಕ್ ಕೂಡ ಕಾರಣವಾದರೆ ಅಂತಹ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಉಪೇಂದ್ರ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

