ಡೊಕೊಮೊದಿಂದ 'ಅಂತ್ಯವಿಲ್ಲದ ಸಂಗೀತ'

ಟಾಟಾ ಡೊಕೊಮೊ ಮತ್ತೊಂದು ಭಿನ್ನ ಸ್ವರೂಪದ ಮೌಲ್ಯವರ್ಧಿತ ಸೇವೆ ತನ್ನ ಪ್ರಿಪೇಯ್ಡ್ ಚಂದಾದಾರರಿಗಾಗಿ ಪರಿಚಯಿಸಿದೆ. ಎಂಡ್ಲೆಸ್ ಮ್ಯೂಸಿಕ್ ಹೆಸರಿನಲ್ಲಿ ಆರಂಭಿಸಲಾಗಿರುವ ಈ ಮೌಲ್ಯವರ್ಧಿತ ಸೇವೆ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿಯೇ ಪ್ರಥಮವಾಗಿದೆ. ಭಿನ್ನ ಸ್ವರೂಪದ ಈ 'ಅಂತ್ಯವಿಲ್ಲದ ಸಂಗೀತ' ಸೇವೆಯನ್ನು ಟಾಟಾ ಡೊಕೊಮೊದ ಪ್ರಿಪೇಯ್ಡ್ ಜಿಎಸ್ಎಂ ಚಂದಾದಾರರು ಎಲೆಕ್ಟ್ರಾನಿಕ್ ವೋಚರ್ ವಿತರಕರಿಂದ ಸುಲಭದಲ್ಲಿ ಪಡೆದುಕೊಳ್ಳಬಹುದು. ಈ ಅಂತ್ಯವಿಲ್ಲದ ಸಂಗೀತದ ಸೇವೆಯನ್ನು ಸಾಧಾರಣವಾದ ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ಸ್ಮಾರ್ಟ್ಫೋನ್ಗಳಿಗೂ ಲಭ್ಯವಿದೆ. ನೂತನ ಮೌಲ್ಯವರ್ಧಿತ ಸೇವೆಗೆ ಚಾಲನೆ ನೀಡಿದ ಟಾಟಾ ಡೊಕೊಮೊದ 'ವಿಎಎಸ್ ಮಾರುಕಟ್ಟೆ' ವಿಭಾಗದ ಮುಖ್ಯಸ್ಥ ರಿಷಿಮೋಹನ್ ಮಲ್ಹೋತ್ರ, ನಮ್ಮ ಚಂದಾದಾರರಿಗೆ ಇಷ್ಟವಾಗುವಂತಹ ಹತ್ತಾರು ಮೌಲ್ಯವರ್ಧಿತ ಸೇವೆಗಳನ್ನು ಅಭಿವೃದ್ಧಿಪಡಿಸಲು, ವಿನ್ಯಾಸಗೊಳಿಸಲೆಂದೇ ಕಂಪೆನಿ ಸಾಕಷ್ಟು ಹಣ ವಿನಿಯೋಜಿಸಿದೆ ಎಂದರು.
ರ್ಯಾನ್ಬಾಕ್ಸಿ 20ನೇ ವಾರ್ಷಿಕೋತ್ಸವ
ರ್ಯಾನ್ಬಾಕ್ಸಿ ಲ್ಯಾಬೋರೇಟರಿಸ್ ಲಿಮಿಟೆಡ್ ಭಾರತದ ಅತಿದೊಡ್ಡ ಔಷಧ ಕಂಪನಿ, ಉಕ್ರೇನ್ನಲ್ಲಿ ತನ್ನ 20ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಕಂಪನಿ ತನ್ನ ಉತ್ತಮ ಮಾರುಕಟ್ಟೆಯಿಂದಾಗಿ ಕೇಟೊನೊವ್, ಸಿಫ್ರನ್ ಹಾಗೂ ಫಾರಿಂಗೊಸ್ಪೇಟ್ಗಾಗಿ ಪ್ರತಿಷ್ಠಿತ ಪೆನೆಸಿಯಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ, ಕಂಪನಿಯ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ ಸಹಾನಿ ಮಾತನಾಡಿ, 'ರ್ಯಾನ್ಬಾಕ್ಸಿ, ಕಳೆದ ಎರಡು ದಶಕಗಳಿಂದ ಉಕ್ರೇನ್ ನಾಗರಿಕರಿಗೆ ಉತ್ತಮ ಗುಣಮಟ್ಟದ ಕೈಗೆಟುಕುವ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತಿದೆ. ಇದರಿಂದಾಗಿ, ಆರೋಗ್ಯರಕ್ಷಣೆ ವೆಚ್ಚಗಳನ್ನು ಕಡಿಮೆಗೊಳಿಸಲು ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ. ನಾವು ಉಕ್ರೇನ್ ಮಾರುಕಟ್ಟೆ ಮತ್ತು ಅದರ ಜನರಿಗೆ ಆದ್ಯತೆ ಮತ್ತು ಗುಣಮಟ್ಟದ ಕಾರ್ಯಾಚರಣೆ ಮುಂದುವರಿಸಲು ಬದ್ದರಾಗಿದ್ದೇವೆ' ಎಂದರು.
ಎಮಿರೇಟ್ಸ್ ಸದೃಢ ಅಭಿವೃದ್ಧಿ
ಎಮಿರೇಟ್ಸ್ ಸಮೂಹ ತನ್ನ ಅರ್ಧ-ವಾರ್ಷಿಕ ಫಲಿತಾಂಶ ಘೋಷಿಸಿದೆ. ಜಾಗತಿಕ ಆರ್ಥಿಕ ಒತ್ತಡ ಮತ್ತು ಇಂಧನ ದರಗಳಲ್ಲಿ ಬಹಳ ಏರಿಕೆ ಇದ್ದರೂ, ಸದೃಢ ಅಭಿವೃದ್ಧಿ ತೋರಿದೆ. ಎಮಿರೇಟ್ಸ್ ಸಮೂಹ 2013 ವಿತ್ತೀಯ ವರ್ಷದ ಮೊದಲ 6 ತಿಂಗಳಲ್ಲಿ 42.3 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ವ್ಯವಹಾರ ದಾಖಲಿಸಿದೆ. 2012 ಸೆಪ್ಟೆಂಬರ್ 30ಕ್ಕೆ ಇದು 37.5 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸಮೂಹದ ನಿವ್ವಳ ಲಾಭ ಶೇ.4ರಷ್ಟು ಹೆಚ್ಚಳವಾಗಿದೆ. 2.2 ಶತಕೋಟಿ ಆಸ್ಟ್ರೇಲಿಯಾ ಡಾಲರ್ ಅಥವಾ 60 ಕೋಟಿ ಅಮೆರಿಕನ್ ಡಾಲರ್. ಜಾಗತಿಕ ವ್ಯಾಪಾರದ ವಾತಾವರಣ ಇನ್ನೂ ಬಹಳ ಸವಾಲುಗಳನ್ನು ಎದುರಿಸುತ್ತಿವೆ. ನಾವು ಬೆಳೆಯುತ್ತಿದ್ದಂತೆ ಚುರುಕುತನವನ್ನು ಉಳಿಸಿಕೊಂಡಿದರ ಫಲವಾಗಿ ಲಾಭವೂ ಅಧಿಕಗೊಂಡಿದೆ ಎಂದು ಎಮಿರೇಟ್ಸ್ ಏರ್ಲೈನ್ ಮತ್ತು ಸಮೂಹದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ರಾಜಕುಮಾರ ಶೇಖ್ ಅಹಮದ್ ಬಿ ಸಯೀದ್ ಅಲ್ ಮಕ್ತುಂ ತಿಳಿಸಿದರು.
ಸಾನಿ ಇಂಡಿಯಾದಿಂದ ಹೊಸ ಯಂತ್ರಗಳು ಮಾರುಕಟ್ಟೆಗೆ
ಸಾನಿ ಇಂಡಿಯಾ, ಜಾಗತಿಕ ಮಟ್ಟದಲ್ಲಿ ತಯಾರಿಕೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಿರುವ ಯಂತ್ರಗಳನ್ನು ತಯಾರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಇದು ಎಕ್ಸ್ಕಾನ್-2013ರ ಪ್ರದರ್ಶನದಲ್ಲಿ 5 ಸರಣಿ ನಿರ್ಮಾಣ ಯಂತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.
ಬಿಡುಗಡೆ ಬಗ್ಗೆ ಪ್ರತಿಕ್ರಯಿಸಿದ ಸಾನಿ ಗ್ರೂಪ್ನ ಅಧ್ಯಕ್ಷ ಟ್ಯಾಂಗ್ ಕ್ಸಿಗೊ 'ತಾಂತ್ರಿಕವಾಗಿ ಮುಂದುವರಿದ ವಿಶ್ವದರ್ಜೆ ಉತ್ಪನ್ನಗಳನ್ನು ಆರಂಭಿಸಲು ಮತ್ತು ನಮ್ಮ ಗ್ರಾಹಕರ ಬೇಡಿಕೆ ಜತೆಗೆ ದೇಶದ ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸಲು ಎಕ್ಸ್ಕಾನ್ ಉತ್ತಮ ವೇದಿಕೆಯಾಗಿದೆ' ಎಂದರು. ಎಕ್ಸ್ಕಾನ್ 2013 ನಲ್ಲಿ ಬಿಡುಗಡೆಗೊಂಡ ಹೊಸ ಉತ್ಪನ್ನಗಳು ಸಾಟಿಯಿಲ್ಲದ ಇಂಧನ ಕ್ಷಮತೆ, ಕಡಿಮೆ ನಿರ್ವಹಣಾ ವೆಚ್ಚ, ನಿರ್ವಾಹಕರ ಹಿತ ಮತ್ತು ಸುರಕ್ಷತೆ, ದಕ್ಷತಾ ವಿನ್ಯಾಸ, ವಿಶ್ವಾಸಾರ್ಹತೆ, ಸ್ಥಿರತೆ ಮತ್ತಿತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಎಸ್ಇಎಫ್ಸಿಯಿಂದ ಹೊಸ ಕಾರ್ಯಕ್ರಮ
ಶ್ರೀರಾಮ್ ಈಕ್ವಿಪ್ಮೆಂಟ್ ಫೈನಾನ್ಸ್ ಕಂಪನಿ ಲಿಮಿಟೆಡ್ ದೇಶದ ಅತಿದೊಡ್ಡ ಎನ್ಬಿಎಫ್ಸಿ ಆದ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷಕ್ಕಾಗಿ ವಿವಿಧ ಆಶಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಎಸ್ಇಎಫ್ಸಿ ಅಕ್ಟೋಬರ್ 2011ರಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಕನ್ಸ್ಸ್ಟ್ರಕ್ಷನ್ ಇಕ್ವಿಪ್ಮೆಂಟ್ ಫೈನಾನ್ಸ್ ಕ್ಷೇತ್ರದ ಮೂಲಕ ಆರಂಭಿಸಿದ್ದು, ಮುಂದಿನ 3-6 ತಿಂಗಳ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ವಿತರಣೆ ದುಪ್ಪಟ್ಟುಗೊಳಿಸಲು ಉದ್ದೇಶಿಸಿದೆ. ಎಸ್ಇಎಫ್ಸಿ ಈಗಾಗಲೇ 3,400 ಕೋಟಿ ವಹಿವಾಟು ಹೊಂದಿದ್ದು, ಈ ಕ್ಷೇತ್ರದಲ್ಲಿ ಅತಿದೊಡ್ಡ ಮತ್ತು ಲಾಭದಾಯಕವಾದ ಎನ್ಬಿಎಫ್ಸಿ ಆಗಿದೆ. ಈ ಬಗ್ಗೆ ಮಾತನಾಡಿದ ಶ್ರೀರಾಮ್ ಇಕ್ವಿಪ್ಮೆಂಟ್ ಫೈನಾನ್ಸ್ ಕಂಪನಿ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೂರ್ಣಪ್ರಮಾಣದ ನಿರ್ದೇಶಕ ಪ್ರತಾಪ್ ಪಾವೊಡೆ 'ಕನ್ಸ್ಸ್ಟ್ರಕ್ಷನ್ ಇಕ್ವಿಪ್ಮೆಂಟ್ ಫೈನಾನ್ಸ್ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿವೆ. ನಾವು ಈ ಅವಕಾಶವನ್ನು ಮುಂದಿನ ವರ್ಷಗಳಲ್ಲಿ ಸದ್ಭಳಕೆ ಮಾಡಿಕೊಳ್ಳಲು ಒತ್ತು ನೀಡುತ್ತಿದ್ದೇವೆ' ಎಂದರು.
'ಕೆರಿಯರ್ ಉತ್ಸವ್ 2013'
ವಾಣಿಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ2 ಲರ್ನಿಂಗ್ ಆಯೋಜಿಸಿರುವ 'ಕೆರಿಯರ್ ಉತ್ಸವ್ 2013' ಶೈಕ್ಷಣಿಕ ಕಾರ್ಯಕ್ರಮ ಆರಂಭವಾಗಲು ಇನ್ನು ಎರಡು ವಾರಗಳಷ್ಟೇ ಬಾಕಿ. ಕೆ2 ಲರ್ನಿಂಗ್ ಮತ್ತು ಸಮಗ್ರ ಈವೆಂಟ್ ಆಯೋಜಕರಾದ ಫ್ಯೂಯೆಲ್ ಇಂಡಿಯಾ ಜಂಟಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಉತ್ಸವದಲ್ಲಿ 12 ಆಸಕ್ತಿದಾಯಕವಾದ ಕಾರ್ಯಾಗಾರ, ವಿಚಾರ ಸಂಕಿರಣಗಳು ನಡೆಯಲಿದ್ದು, ಎನಿಮೇಷನ್, ವೈದ್ಯಕೀಯ, ಅಧ್ಯಯನ, ವಿದೇಶ, ಷೇರು ಮಾರುಕಟ್ಟೆ ತರಬೇತಿ, ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸುವುದು ಹೇಗೆ?, ಸರ್ಕಾರಿ, ಖಾಸಗಿ ಫ್ಯಾಷನ್ ಡಿಸೈನ್, ಆತಿಥ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಕುರಿತು ಬೆಳಕು ಚೆಲ್ಲಲಿದೆ. ಈ ಬಗ್ಗೆ ಮಾತನಾಡಿದ ಕೆ2 ಲರ್ನಿಗ್ ಸ್ಥಾಪಕ ಶ್ರೀಪಾಲ್ ಜೈನ್, ಕಾರ್ಯಕ್ರಮ ಬಹುಶಃ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಶೈಕ್ಷಣಿಕ ಮೇಳವಾಗಿ ಹೊರಹೊಮ್ಮುವಂತೆ ಸಿದ್ಧತೆ ಮಾಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


