

ತಕ್ಷಣ ಹಣ ಬೇಕಾದರೆ ಈಗ ಎಟಿಎಂಗೆ ಹೋಗುವುದು ಸಾಮಾನ್ಯ. ಯಾವ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಹೊಂದಿರುತ್ತೇವೆಯೋ ಅದರಿಂದ ನಮ್ಮ ಖಾತೆಯ ಅಥವಾ ಕಾರ್ಡ್‌ಗೆ ಇರುವ ಮಿತಿಯ ಆಧಾರದಲ್ಲಿ ಹಣ ಪಡೆಯಲು ಅವಕಾಶ ಉಂಟು. ಇತ್ತೀಚೆಗೆ ಆರ್‌ಬಿಐ, ಖಾಸಗಿ ಹಣಕಾಸು ಸಂಸ್ಥೆಗಳಿಗೂ ಎಟಿಎಂ ತೆರೆಯಲು ಅನುಮತಿ ನೀಡಿದೆ.
ಈ ಪೈಕಿ ಟಾಟಾ ಕಮ್ಯುನಿಕೇಷನ್ಸ್ ಪೇಮೆಂಟ್ ಸೊಲ್ಯುಷನ್ಸ್ ಲಿಮಿಟೆಡ್ (ಟಿಸಿಪಿಎಸ್‌ಎಲ್), ಮುತ್ತೂಟ್ ಫೈನಾನ್ಸ್ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಗೆ ಅನುಮತಿ ನೀಡಿದೆ. ಹೊಸ ಮಾದರಿಯ ಎಟಿಎಂಗಳಿಗೆ ಇರಿಸಲಾಗಿರುವ ಹೆಸರು 'ವೈಟ್‌ಲೇಬಲ್ ಎಟಿಎಂ' (ಡಬ್ಲ್ಯೂಎಲ್‌ಎ).
ಏನಿದರ ವಿಶೇಷ?
ಸದ್ಯ ನಮ್ಮ ದೇಶದಲ್ಲಿರುವ ಹೆಚ್ಚಿನ ಎಟಿಎಂಗಳು ಆಯಾ ಬ್ಯಾಂಕ್‌ಗಳ ಒಡೆತನದಲ್ಲಿವೆ. ಅವುಗಳ ನಿರ್ವಹಣೆಯನ್ನೂ ಬ್ಯಾಂಕ್‌ಗಳೇ ಮಾಡುತ್ತವೆ. ಆದರೆ, ಈಗ ಅವುಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗುತ್ತಿದೆ. ವೈಟ್‌ಲೇಬಲ್ ಎಟಿಎಂ ಎಂದರೆ ಅವುಗಳ ಮಾಲೀಕತ್ವ ಮತ್ತು ನಿರ್ವಹಣೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನಿರ್ವಹಿಸುತ್ತವೆ. ಬ್ಯಾಂಕ್‌ಗಳು ಹೊಂದಿರುವ ಎಟಿಎಂಗಳಂತೆಯೇ ಅವು ಕಾರ್ಯನಿರ್ವಹಿಸುತ್ತವೆ. ಈ ಬಗ್ಗೆ 2012ರ ಜೂನ್‌ನಲ್ಲಿ ನಿಯಮಾವಳಿಗಳನ್ನು ಬಿಡುಗಡೆ ಮಾಡಿತ್ತು.
ಆರ್‌ಬಿಐ ಅನುಮತಿ ನೀಡಿದ್ದೇಕೆ?
ಬ್ಯಾಂಕ್‌ಗಳು ಹೊಂದಿರುವ ಎಟಿಎಂ ಸಂಪರ್ಕ ವ್ಯವಸ್ಥೆ 87 ಸಾವಿರ ಮಾತ್ರ. ಅವುಗಳಿಗೆ ದೇಶದ ಯಾವುದೇ ಭಾಗದಲ್ಲಾದರೂ ಎಟಿಎಂ ಸ್ಥಾಪಿಸುವ ಸೌಕರ್ಯ, ಸ್ವಾತಂತ್ರ್ಯವಿದ್ದರೂ ಹೊಸ ಎಟಿಎಂಗಳ ಸ್ಥಾಪನೆಗೆ ಬೇಡಿಕೆ ಹೆಚ್ಚುತ್ತಿದೆ. ವಿಶೇಷವಾಗಿ 2 ಮತ್ತು ಮೂರನೇ ಹಂತದ ನಗರಗಳಲ್ಲಿ (ನಾನ್-ಮೆಟ್ರೋ) ಈ ಬಗ್ಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಇದೊಂದು ಉದ್ದಿಮೆಯಾಗಿ ಮಾರ್ಪಾಡಾಯಿತು. ಜತೆಗೆ ಎನ್‌ಬಿಎಫ್‌ಸಿಗಳಿಗೂ ಈ ನಿಟ್ಟಿನಲ್ಲಿ ಅವಕಾಶ ನೀಡಲು ನಿರ್ಧರಿಸಲಾಯಿತು.
ಯಾರೆಲ್ಲ ಇದ್ದಾರೆ?
ಎಟಿಎಂ ತೆರೆಯುವ ಬಗ್ಗೆ ಆರ್‌ಬಿಐ ಅನುಮತಿ ನೀಡುತ್ತದೆ ಎಂದು ಘೋಷಣೆ ಮಾಡಿದ್ದೇ ತಡ ಹಲವು ಎನ್‌ಬಿಎಫ್‌ಸಿಗಳು ತಾಮುಂದು, ನಾಮುಂದು ಎಂದು ಅರ್ಜಿ ಸಲ್ಲಿಸಿವೆ. ಅವುಗಳ ಪೈಕಿ ಮುತ್ತೂಟ್ ಫೈನಾನ್ಸ್, ಪ್ರಿಜ್ಮ್ ಪೇಮೆಂಟ್, ಟಾಟಾ ಕಮ್ಯುನಿಕೇಷನ್ಸ್ ಪೇಮೆಂಟ್ ಸೊಲ್ಯುಷನ್ಸ್ ಲಿಮಿಟೆಡ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿ, ಅವರಿಗೆ ಹೊಸ ಉದ್ದಿಮೆ ಸ್ಥಾಪನೆಗೆ ಅನುಮತಿಯೂ ಸಿಕ್ಕಿದೆ. ಸಲ್ಲಿಕೆಯಾಗಿರುವ ಒಟ್ಟು 19 ಸಂಸ್ಥೆಗಳ ಪೈಕಿ 17ಕ್ಕೆ ಅನುಮತಿ ಸಿಕ್ಕಿದೆ.
ವೆಚ್ಚ ಎಷ್ಟಾಗುತ್ತದೆ?
ಆರ್‌ಬಿಐನ ನಿರ್ಧಾರ ಬ್ಯಾಂಕ್‌ಗಳಿಗೆ ಉಳಿತಾಯವಾಗಲಿದೆ. ಸಾಮಾನ್ಯವಾಗಿ ಒಂದು ಎಟಿಎಂ ಸ್ಥಾಪನೆ ಎಂದರೆ ಬ್ಯಾಂಕ್‌ಗೆ ರು. 3-4 ಲಕ್ಷ ವೆಚ್ಚವಾಗುತ್ತದೆ. ಜತೆಗೆ ಅದರ ನಿರ್ವಹಣೆ ವೆಚ್ಚವೆಂದು ಪ್ರತಿ ತಿಂಗಳು ರು. 40- 50 ಸಾವಿರ ಬೇಕಾಗುತ್ತದೆ. ಸ್ಥಳಕ್ಕೆ ನಿಗದಿಯಾಗಿರುವ ಬಾಡಿಗೆ, ಭದ್ರತೆ ಮತ್ತು ವಿದ್ಯುತ್ ಇದರ ಆಧಾರದ ಮೇಲೆ ವೆಚ್ಚ ನಿಗದಿಯಾಗುತ್ತದೆ. ಐರೋಪ್ಯ ದೇಶಗಳಲ್ಲಿ, ಕೆನಡಾ ಮತ್ತು ಆಫ್ರಿಕ ದೇಶಗಳಲ್ಲಿ 'ವೈಟ್ ಲೇಬಲ್' ಎಟಿಎಂಗಳು ಜನಪ್ರಿಯ.
ಟಾಟಾ ಎಟಿಎಂ
ಸೂಜಿಯಿಂದ ವಿಮಾನದ ವರೆಗೆ ಉದ್ದಿಮೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಟಾಟಾ ಈಗ ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆ ಕ್ಷೇತ್ರಕ್ಕೂ ಕಾಲಿಟ್ಟಿದೆ. ಆರ್‌ಬಿಐನ ಹೊಸ ನಿರ್ಧಾರದ ಲಾಭ ಪಡೆದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕೆನ್ನುವ ನಿರ್ಧಾರ ಸಂಸ್ಥೆಯದ್ದು. ಇತ್ತೀಚೆಗಷ್ಟೇ 'ಇಂಡಿಕ್ಯಾಶ್' ಎಂಬ ಹೆಸರಿನ ಎಟಿಎಂಗಳು ಮುಂಬೈ, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಆರಂಭವಾಗಿವೆ. ಸಂಸ್ಥೆಯ ಮುಂದಿನ ಯೋಜನೆಗಳು ಮತ್ತು ಇತರ ವಿಚಾರಗಳ ಬಗ್ಗೆ ಟಾಟಾ ಕಮ್ಯುನಿಕೇಷನ್ಸ್ ಪೇಮೆಂಟ್ ಸೊಲ್ಯುಷನ್ಸ್ ಲಿಮಿಟೆಡ್ (ಟಿಸಿಪಿಎಸ್‌ಎಲ್)ನ ಸಿಇಒ ಸಂಜೀವ್ ಪಟೇಲ್ 'ಬೈಟು ಕಾಫಿ'ಯೊಂದಿಗೆ ಹಂಚಿಕೊಂಡಿದ್ದಾರೆ.
ಎಟಿಎಂ ಸ್ಥಾಪನೆ ಉದ್ದಿಮೆಯತ್ತ ಗಮನ ಹರಿಸಲು ಕಾರಣವೇನು?
ಇಂಡಿ ಕ್ಯಾಶ್ ಹೆಸರಲ್ಲಿ ಸಂಸ್ಥೆ ಗ್ರಾಹಕರಿಗಾಗಿ ಎಟಿಎಂ ಸೇವೆ ನೀಡಲು ನಿರ್ಧರಿಸಿದೆ. ಯಾವತ್ತೂ ಹೊಸತನ ನೀಡಬೇಕೆಂಬ ತುಡಿತ ನಮ್ಮದು. ನಮ್ಮ ಸಂಸ್ಥೆ ದೇಶದಲ್ಲಿ ಅತ್ಯಂತ ದೊಡ್ಡದಾದ ಎಟಿಎಂ ಸೇವಾ ಸಂಸ್ಥೆಯಾಗಿದೆ. ವಿವಿಧ ಬ್ಯಾಂಕ್‌ಗಳ ಜತೆಗೂಡಿ 27 ಸಾವಿರ ಎಟಿಎಂಗಳನ್ನು ನಿರ್ವಹಿಸುತ್ತೇವೆ. 2016ರ ಒಳಗಾಗಿ ದೇಶಾದ್ಯಂತ 50 ಸಾವಿರ ವೈಟ್‌ಲೇಬಲ್ ಎಟಿಎಂಗಳನ್ನು ಸ್ಥಾಪಿಸಲು ನಿರ್ಧರಿಸುತ್ತೇವೆ.
ಎಟಿಎಂ ಸ್ಥಾಪನೆಯಿಂದ ಕಂಪನಿಗೇನು ಲಾಭ?
ಸದ್ಯದ ನಿಯಮ ಪ್ರಕಾರ, ಒಂದು ಬಾರಿ ನಗದು ಪಡೆದುಕೊಂಡರೆ ರು. 15 ಶುಲ್ಕ ವಿಧಿಸಲಾಗುತ್ತದೆ. ನಗದೇತರ (ನಾನ್-ಕ್ಯಾಶ್) ವ್ಯವಹಾರಕ್ಕೆ ರು. 5 ಶುಲ್ಕ ವಿಧಿಸಲಾಗುತ್ತದೆ. ಇದರ ಜತೆಗೆ ಆರ್‌ಬಿಐ ಮೌಲ್ಯ ವರ್ಧಿತ ಸೇವೆ (ವಾಲ್ಯೂ ಆಡೆಡ್ ಸರ್ವಿಸಸ್)ಗಳನ್ನು ನೀಡಲು ಅನುಮತಿ ನೀಡಿದೆ. ಜತೆಗೆ ಥರ್ಡ್ ಪಾಟಿ ಅಡ್ವರ್ಟೈಸ್‌ಮೆಂಟ್‌ಗೂ ಪರವಾನಗಿ ಉಂಟು. ಸದ್ಯ ನಾವು ಫೆಡರಲ್ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಣಕಾಸಿನ ಪೂರೈಕೆ ಮತ್ತು ಇತರ ವಿಚಾರಗಳಿಗಾಗಿ ಬ್ಯಾಂಕ್ ಜತೆ ಸಹಭಾಗಿತ್ವವಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಂಸ್ಥೆ ಎಷ್ಟು ವೈಟ್‌ಲೇಬಲ್ ಎಟಿಎಂಗಳನ್ನು ಸ್ಥಾಪಿಸಲಿದೆ?
ಮುಂದಿನ 3 ವರ್ಷಗಳಲ್ಲಿ ಸಂಸ್ಥೆ 15 ಸಾವಿರ ಡಬ್ಲ್ಯೂಎಲ್‌ಎಗಳನ್ನು ಆರಂಭಿಸಲಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಜನರು ಇರುವ ಪ್ರಮಾಣಕ್ಕೆ ತಕ್ಕಂತೆ ಎಟಿಎಂಗಳು ಆರಂಭವಾದದ್ದು ಏನೂ ಸಾಲದು. ಗ್ರಾಮೀಣ ಪ್ರದೇಶಗಳಲ್ಲೂ ಎಟಿಎಂಗಳನ್ನು ಆರಂಭಿಸಿ ಅಲ್ಲಿ ಸುಸೂತ್ರವಾಗಿ ಹಣಕಾಸು ಸಿಗುವಂತೆ ಮಾಡಿ, ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯ ನೀಡುವುದು ಗುರಿ.
ಬೆಂಗಳೂರು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಸದ್ಯ ಎಷ್ಟು ವೈಟ್‌ಲೇಬಲ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ?
ಸದ್ಯದ ಹಬ್ಬದ ಸಾಲುಗಳು ಮುಕ್ತಾಯವಾಗುತ್ತಿದ್ದಂತೆ ನಮ್ಮ ಸಂಸ್ಥೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ 150 'ಇಂಡಿ ಕ್ಯಾಶ್'ಗಳನ್ನು ಆರಂಭಿಸಲಿದ್ದೇವೆ. ಬೆಂಗಳೂರಿನಲ್ಲಿ ಮಡಿವಾಳ, ಚಂದ್ರಾಲೇಔಟ್, ಯಶವಂತಪುರ, ಇಂದಿರಾನಗರ, ಹೆಸರಘಟ್ಟ, ಕುಂಡಲಹಳ್ಳಿ, ಸಿ.ಎನ್.ಹಳ್ಳಿ, ರಾಜಾಜಿನಗರ ಸೇರಿದಂತೆ 15 ಸ್ಥಳಗಳಲ್ಲಿವೆ.
ಗ್ರಾಹಕರಿಗೆ ಏನು ಲಾಭ?
ಎಲ್ಲ ಪ್ರದೇಶಗಳ ಗ್ರಾಹಕರಿಗೆ ಅನುಕೂಲವಾಗುವಂತೆ 'ಇಂಡಿಕ್ಯಾಶ್' ಆರಂಭಿಸುತ್ತಿದ್ದೇವೆ. ನಮ್ಮ ಎಟಿಎಂಗಳಲ್ಲಿ ಇತರ ಎಟಿಎಂಗಳಲ್ಲಿ ಕಾರ್ಡ್ ಒಳಗೆ ಸಿಕ್ಕಿಹಾಕಿಕೊಳ್ಳದಂತೆ ವ್ಯವಸ್ಥೆ ಇದೆ. ಸ್ಥಳೀಯ ಭಾಷೆಯಲ್ಲೂ ಮಾಹಿತಿ ನೀಡುವ ವ್ಯವಸ್ಥೆ ಉಂಟು. ಪ್ರೈವೇಟ್ ಸ್ಕ್ರೀನ್ ಫಿಲ್ಟರ್, ಕೀ ಪ್ಯಾಡ್ ಶೀಲ್ಡ್ ವ್ಯವಸ್ಥೆ ಇದೆ. ಸಣ್ಣ ಪ್ರಮಾಣದ ಸಹಕಾರಿ ಮತ್ತು ಇತರ ಬ್ಯಾಂಕ್‌ಗಳ ಗ್ರಾಹಕರೂ ನಮ್ಮ ಎಟಿಎಂ ಬಳಸಬಹುದು.
ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ವೈಟ್‌ಲೇಬಲ್ ಎಟಿಎಂ ಉದ್ದಿಮೆ ಹೇಗಿರಬಹುದು?
ದೇಶದಲ್ಲಿನ ಜನಸಂಖ್ಯೆಯ ಶೇ.35 ಮಂದಿಗೆ ಮಾತ್ರ ಎಟಿಎಂ ಸೌಲಭ್ಯವಿದೆ. ಹೆಚ್ಚಿನ ಅರೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಈ ಸೇವೆ ಇಲ್ಲ. ಆರ್‌ಬಿಐ ನಿಯಮ ಪ್ರಕಾರ, ಎಲ್ಲ ಪ್ರದೇಶಗಳಿಗೂ ಕನಿಷ್ಠ ಬ್ಯಾಂಕಿಂಗ್ ಸೌಲಭ್ಯ ನೀಡಬೇಕು. ಅದರಂತೆಯೇ ನಡೆದುಕೊಳ್ಳುತ್ತಿದ್ದೇವೆ. ಮುಂದಿನ 3-4 ವರ್ಷಗಳಲ್ಲಿ 50-60 ಸಾವಿರ ಡಬ್ಲ್ಯೂಎಲ್‌ಎಗಳನ್ನು ಶುರುಮಾಡಲಿದ್ದೇವೆ. ಈ ಮೂಲಕ ಎಟಿಎಂ ಇಲ್ಲದ ಸ್ಥಳಗಳಿಗೆ ನಾವು ಪ್ರವೇಶಿಸಲಿದ್ದೇವೆ. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿನ ಎಟಿಎಂಗಳ ಸಂಖ್ಯೆ 2 ಲಕ್ಷ ತಲುಪುವ ಸಾಧ್ಯತೆ ಇದೆ.
ಇತರ ಖಾಸಗಿ ಸಂಸ್ಥೆಗಳ ಎಟಿಎಂಗಳಿಗಿಂತ 'ಇಂಡಿ ಕ್ಯಾಶ್' ಹೇಗೆ ಭಿನ್ನ?
ಜನರ ಅನುಕೂಲ ನೋಡಿಕೊಂಡು ನಾವು ನಮ್ಮ ಎಟಿಎಂ ಸ್ಥಾಪನೆ ಮಾಡುತ್ತೇವೆ. ಇತರ ಸ್ಥಳಗಳಲ್ಲಿ ಎಲ್ಲಿ ಎಟಿಎಂ ಸ್ಥಾಪನೆಗೆ ಅವಕಾಶ ಉಂಟು ಎನ್ನುವುದನ್ನು ಕಂಡುಕೊಂಡು ಅಲ್ಲಿ ಸೇವೆ ನೀಡುತ್ತೇವೆ. ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ನಾವು ನೀಡಿದ ಮೊದಲ ಹಂತದ ಸೇವೆಯಿಂದ ನಮಗೆ ಉತ್ತಮ ಅನುಭವವಾಗಿದೆ.
- ಸದಾಶಿವ ಕೆ.
khandige29@gmail.com