ವಾಣಿಜ್ಯ

ಉಚಿತ ಸೌಲಭ್ಯಕ್ಕೆ ಕತ್ತರಿ: ಬ್ಯಾಂಕ್‌ಗಳ ಪ್ರಯತ್ನ

ಉಚಿತ ಸೌಲಭ್ಯಕ್ಕೆ ಕತ್ತರಿ: ಬ್ಯಾಂಕ್‌ಗಳ ಪ್ರಯತ್ನ
Published On :

'ಬಿಟ್ಟಿ ಊಟ ಇಲ್ಲ'. ಅದು ಒಂದು ನುಡಿಗಟ್ಟು. ನಮಗೆ ಏನಾದರೂ ಉಚಿತವಾಗಿ ಸಿಕ್ಕರೆ, ಅದಕ್ಕೆ ಹಣವನ್ನು ಎಲ್ಲೋ, ಯಾರೋ ಪರೋಕ್ಷವಾಗಿ ಕೊಟ್ಟಿರುತ್ತಾರೆ. ಇಂತಹ ಉಚಿತ ಕೊಡುಗೆಗಳನ್ನು ನಿಭಾಯಿಸುವುದು ಕಷ್ಟವೆಂದು ಕಂಡುಬಂದಾಗ, ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ಗ್ರಾಹಕರ ಹೆಗಲಿಗೇರಿಸಲು ಸಿದ್ಧವಾಗುತ್ತವೆ. ಈಗ ಬ್ಯಾಂಕ್‌ಗಳು ಅಂತಹ ಸ್ಥಿತಿ ಮುಟ್ಟಿರುವಂತಿದೆ.

ಅಧಿಕ ಸಂಖ್ಯೆಯ ಚೆಕ್ ಬುಕ್‌ಗಳು, ಬ್ಯಾಂಕ್‌ಗಳು ಒದಗಿಸುವ ದಾಖಲೆಗಳು ಇವೆಲ್ಲಾ ಉಚಿತ ಎಂದು ಭಾವಿಸಲಾಗಿತ್ತು. ಈಗ ಅವೆಲ್ಲಕ್ಕೂ ಗ್ರಾಹಕರೇ ಹಣ ಕೊಡಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿ ಈ ಪ್ರವೃತ್ತಿ ದೊಡ್ಡ ರೀತಿಯಲ್ಲೇ ಕಾಣಿಸಿಕೊಳ್ಳಲಿದೆ. ಇದೆಲ್ಲಕ್ಕೂ ರಿಸರ್ವ್ ಬ್ಯಾಂಕಿನ ನಿಯಮಗಳಲ್ಲಿ ಅವಕಾಶವಿದೆ.
ಈ ಪ್ರವೃತ್ತಿ ಇನ್ನಷ್ಟು ಚುರುಕಾಗಲಿದೆ. ಹೊಸ ಆಧುನಿಕ ಬ್ಯಾಂಕ್‌ಗಳಿಗೆ ಲೈಸೆನ್ಸ್ ನೀಡಿದಾಗ ಸ್ಪರ್ಧೆಯೂ ಹೆಚ್ಚಾಗಲಿದೆ. ಆಗ ಎಲ್ಲ ಬ್ಯಾಂಕ್‌ಗಳೂ ಅಧಿಕ ಆದಾಯದ ಮಾರ್ಗಗಳನ್ನು ಹುಡುಕಲೇಬೇಕು.

ಅಗ್ಗದ ಸಾಲ ಬೇಕೆ?
ಈಚಿನ ದಿನಗಳಲ್ಲಿ ಅನೇಕರಿಗೆ ಬ್ಯಾಂಕ್‌ಗಳ ಪರವಾಗಿ, ಅಗ್ಗದ ಸಾಲ ಬೇಕಾ ಎನ್ನುವ ಫೋನ್ ಕರೆಗಳು ಬರುವುದು ಹೆಚ್ಚಾಗಿದೆ. ಯಾಕೆ? ಬ್ಯಾಂಕ್‌ಗಳಲ್ಲಿ ಹಣ ಹೆಚ್ಚಾಗಿದೆಯಾ? ಖಂಡಿತ ಇಲ್ಲ. ಆದರೆ ಇಂತಹ 'ಆಹ್ವಾನಿತರಿಗೆ ಮಾತ್ರ' ಅಗ್ಗದ ಸಾಲದ ಯೋಜನೆಯ ಹಿಂದೆ, ಇಂತಹ ಸಾಲಗಳಿಂದಲೇ ಲಾಭ ಹೆಚ್ಚು ಎನ್ನುವ ಕಲ್ಪನೆ ಇದೆ. ಸಾಲದ್ದಕ್ಕೆ ಈಗ ಆರ್ಥಿಕ ವ್ಯವಸ್ಥೆಯೇ ಕುಂಟುತ್ತಿರುವಾಗ, ಬ್ಯಾಂಕ್‌ಗಳಿಗೆ ಭಾರಿ ಗಿರಾಕಿಗಳಿಂದ ಸಾಲದ ಬೇಡಿಕೆ ಕಡಿಮೆಯಾಗಿರುವುದೂ ಒಂದು ದೊಡ್ಡ ಕಾರಣ.

ಹಿಂದೆ ಬ್ಯಾಂಕ್‌ಗಳು ವ್ಯಕ್ತಿಗಳಿಗೆ ಸಾಲ ಕೊಡಲು ಹಿಂತೆಗೆಯುತ್ತಿದ್ದವು. ಈಗ ಆ ಪರಿಸ್ಥಿತಿ ಇಲ್ಲ. ವ್ಯಕ್ತಿಗಳ ಹಣಕಾಸಿನ ಸ್ಥಿತಿಗತಿಯನ್ನು, ಅಂದಾಜು ಮಾಡಲು ಬೇಕಾದಷ್ಟು ಮಾರ್ಗಗಳಿವೆ. ಆದ್ದರಿಂದ 'ಅರ್ಹರನ್ನು' ಬ್ಯಾಂಕ್‌ಗಳೇ ಪತ್ತೆ ಹಚ್ಚಿ 'ಆಹ್ವಾನಿತರ ಪಟ್ಟಿಯಲ್ಲಿ' ಹೆಸರನ್ನು ಸೇರಿಸುತ್ತವೆ. ಆದರೆ ನೆನಪಿನಲ್ಲಿದೆ: ಈ ಅಗ್ಗದ ಬಡ್ಡಿ ದರಗಳು ನಿಜವಾಗಲೂ ಅಗ್ಗವಲ್ಲ. ಅಗತ್ಯವಿದ್ದರೆ ಮಾತ್ರ ಅದನ್ನು ಪಡೆಯುವುದು ಜಾಣತನ.

ಬ್ಯಾಂಕ್‌ಗಳಿಗೆ ಮೋಸ
ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್‌ಗಳಲ್ಲಿ ದೊಡ್ಡ ಪ್ರಮಾಣದ (50 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು) ಮೋಸಗಳ ಸಂಖ್ಯೆ ಕಡಿಮೆಯಾದರೂ, ಅವುಗಳಲ್ಲಿ ತೊಡಗಿರುವ ಹಣದ ಮೊತ್ತ ಹೆಚ್ಚಾಗಿದೆ.

2012-13ರಲ್ಲಿ 45 ಇಂತಹ ಪ್ರಕರಣಗಳು ವರದಿಯಾಗಿವೆ. 2009-10ರಲ್ಲಿ ವರದಿಯಾಗಿದ್ದು ಮೂರೇ ಪ್ರಕರಣಗಳು. 'ಮಹಾಮೋಸ' ಎನ್ನಬಹುದಾದ ಪ್ರಕರಣಗಳು ಸಾಮಾನ್ಯವಾಗಿ ಲಾಟರಿ, ಎಸ್‌ಎಮ್‌ಎಸ್ ಮೂಲಕ ನಡೆಯುವುದೇ ಹೆಚ್ಚು. ಕ್ರೆಡಿಟ್ ಕಾರ್ಡ್‌ಗಳ ವಿಭಾಗದಲ್ಲೂ ಅವ್ಯವಹಾರ ಸಾಧ್ಯ ಕ್ರೆಡಿಟ್ ಕಾರ್ಡ್ ವ್ಯವಹಾರ, ಮೂಲತಃ ಬ್ಯಾಂಕ್ ಹಾಗೂ ಗ್ರಾಹಕರ ನಡುವಣ ವಿಶ್ವಾಸದ ವ್ಯವಹಾರ. ಈಚಿನ ದಿನಗಳಲ್ಲಿ 'ವಿಶ್ವಾಸ' ಕುಗ್ಗುತ್ತಿದೆ ಎನ್ನುವುದು ರೀಸರ್ವ್ ಬ್ಯಾಂಕಿನ ವರದಿಯಲ್ಲಿದೆ.

ಇಂತಹ ವಿಚಾರದಲ್ಲಿ ಖಚಿತವಾದ ಅಂಕಿ-ಅಂಶಗಳು ಲಭ್ಯವಾಗುವುದಿಲ್ಲ. ಕ್ರೆಡಿಟ್ ಕಾರ್ಡ್‌ಗಳಲ್ಲಂತೂ ಕಂಪೆನಿಗಳು ಗ್ರಾಹಕರಿಗೆ 'ಮಾಡುವ ಮೋಸ' ಕುರಿತ ದೂರುಗಳು ಮಣಗಟ್ಟಲೆ ಇವೆ. ಅದನ್ನೆಲ್ಲ ನೋಡುವವರು ಯಾರು?

2013ರ ಪೇಟೆ ವರದಿ
2013 ಷೇರು ಬಜಾರಿಗೆ ಹೆಚ್ಚು ಅನುಕೂಲವಾಗಿರಲಿಲ್ಲ. ನಗದು ವಲಯದಲ್ಲಿ ವ್ಯವಹಾರವೇ ಕಡಿಮೆಯಾಗಿತ್ತು. ಮುಂಬೈ ಸ್ಟಾಕ್ ಎಕ್ಸ್‌ಛೇಂಜ್- ನ್ಯಾಷನಲ್ ಸ್ಟಾಕ್ ಎಕ್ಸ್‌ಛೇಂಜ್‌ಗಳೆರಡೂ ಕುಗ್ಗಿದ್ದವು. ದಿನದ ವ್ಯವಹಾರದ ಪ್ರಮಾಣ 13,300 ಕೋಟಿ ರುಪಾಯಿಗಳಿಗೆ ಇಳಿದಿತ್ತು. ಸಾಮಾನ್ಯ ವರಮಾನದ ವೈಯಕ್ತಿಕ ವ್ಯವಹಾರಸ್ಥರು ಪೇಟೆಗೆ ಇನ್ನೂ ಹಿಂತಿರುಗಿಲ್ಲ. ವ್ಯವಹಾರದ ಪ್ರಮಾಣ ಕುಗ್ಗಿರುವುದು ಅದಕ್ಕೇ.

ಈಗ ನಗದು ವ್ಯವಹಾರ ವಿಭಾಗದಲ್ಲಿ ಹಲವು ಸಂಸ್ಥೆಗಳು ಹಾಗೂ ಭಾರಿ ಶ್ರೀಮಂತರಷ್ಟೇ ಗಮನಾರ್ಹವಾದ ರೀತಿಯಲ್ಲಿ ತೊಡಗಿರುವುದು. ಷೇರುಗಳನ್ನು ಕೊಳ್ಳುತ್ತಿರುವುದು ವಿದೇಶೀ ಸಂಸ್ಥೆಗಳಷ್ಟೇ. ಸ್ವದೇಶೀ ಸಂಸ್ಥೆಗಳೂ ಪೇಟೆಯಲ್ಲಿ ಷೇರುಗಳನ್ನು ಕೊಂಡಾಗಲೇ ಪೇಟೆಯ ಚೇತರಿಕೆ ಸಾಧ್ಯ.

ಕೊನೆ ಮಾತು
2014ರಲ್ಲಿ ಈ ಪ್ರವೃತ್ತಿ ಬದಲಾಗಬಹುದಾ? ಆ ಪ್ರಶ್ನೆಗೆ ಖಚಿತ ಉತ್ತರ ನೀಡಲು ಎಂಟೆದೆ ಬೇಕು.
-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.