ಇದೊಳ್ಳೆ ಕಾಲ!

ಆರಂಭದಲ್ಲಿ ಕಠಿಣ ದಿನಗಳು ಎದುರಾದರೂ ಮುಂದಿನ ವರ್ಷಗಳನ್ನು ಗಮನಿಸಿದಾಗ ಮೋದಿ ಪ್ರಚಾರದ ವೇಳೆ ಹೇಳಿಕೊಂಡಿದ್ದಂತೆ ಉತ್ತಮ ದಿನಗಳು ಬರಲಿವೆ.
ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವು ಬಾರಿ ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಏರಿದ ನಂತರದ ಪರಿಸ್ಥಿತಿಗಳು ಅದಕ್ಕೆ ಪೂರಕವಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಅದಕ್ಕೆ ಮೊತ್ತ ಮೊದಲ ಉದಾಹರಣೆ ರೇಲ್ವೆ ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಳ ಮಾಡಿರುವುದು. ಗಮನಾರ್ಹ ಅಂಶವೆಂದರೆ ಅಷ್ಟು ಪ್ರಮಾಣದ ದರ ಹೆಚ್ಚಳ ಮಾಡಿರದೇ ಇರುತ್ತಿದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ರೇಲ್ವೆಯ ಪರಿಸ್ಥಿತಿ ಹರೋಹರವಾಗಿರುತ್ತಿತ್ತು. ಅಷ್ಟಾದರೂ ಕೆಲವೊಂದು ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣ ಮಾಡಿದರೆ ಆರಾಮ ಮತ್ತು ವೆಚ್ಚವೂ ಕಡಿಮೆಯೇ ಆಗುತ್ತದೆ. ಈಗ ಪ್ರಮುಖ ವಿಚಾರಕ್ಕೆ ಬರೋಣ. ಮುಂಗಡ ಪತ್ರದಲ್ಲಿ ಹಿಂದಿನ ಸರ್ಕಾರಕ್ಕಿಂತ ಕಠಿಣವಾಗಿರುವ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ತೈಲೋತ್ಪನ್ನ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಬ್ಸಿಡಿಯನ್ನು ಹಿಂಪಡೆಯುವ ಬಗ್ಗೆಯೂ ಈಗ ಚರ್ಚೆ ನಡೆದಿದೆ.
ಒಳ್ಳೆಯ ಕಾಲ ಬರುವುದಿಲ್ಲವೇ?
ಹಾಗಿದ್ದರೆ ಯುಪಿಎ ಸರ್ಕಾರದಲ್ಲಿದ್ದಂತೆ ಪ್ರತಿಯೊಂದು ಹಂತದಲ್ಲೂ ಮೋದಿ ಸರ್ಕಾರದ ಅವಧಿಯಲ್ಲಿಯೂ ದರ ಏರಿಕೆ ಆಗಲಿದೆಯೇ ಎಂಬ ಪ್ರಶ್ನೆ ಮೂಡದೇ ಇರದು. ಆರಂಭದಲ್ಲಿ ಕಠಿಣ ದಿನಗಳು ಎದುರಾದರೂ ಮುಂದಿನ ವರ್ಷಗಳನ್ನು ಗಮನಿಸಿದಾಗ ಮೋದಿ ಪ್ರಚಾರದ ವೇಳೆ ಹೇಳಿಕೊಂಡಿದ್ದಂತೆ ಉತ್ತಮ ದಿನಗಳು ಬರಲಿವೆ.
ಉದಾಹರಣೆಗೆ ಗುಜರಾತ್ನ ವಿದ್ಯುತ್ ಪರಿಸ್ಥಿತಿ ತೆಗೆದುಕೊಳ್ಳೋಣ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸಂದರ್ಭ ಪರಿಸ್ಥಿತಿ ಬಿಗಡಾಯಿಸಿತ್ತು. ಇತರ ಎಲ್ಲ ರಾಜ್ಯಗಳಂತೆ ಅಲ್ಲಿನ ವಿದ್ಯುಚ್ಛಕ್ತಿ ಮಂಡಳಿ ಕೂಡ ನಷ್ಟದ ಸಂಸ್ಥೆಯಾಗಿತ್ತು. ಆದರೆ ಸತತ ಸುಧಾರಣಾ ಕ್ರಮದ ಬಳಿಕ ಗುಜರಾತ್ ವಿದ್ಯುಚ್ಛಕ್ತಿ ಮಂಡಳಿ ಪ್ರತಿ ವರ್ಷ # 500 ಕೋಟಿ ಲಾಭ ಗಳಿಸುವಂತಾಗಿದೆ. ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸಂದರ್ಭ ಅದರ ನಷ್ಟ 2 ಸಾವಿರ ಕೋಟಿ ಆಗಿತ್ತು. ಅಂದರೆ ಉತ್ತಮ ವ್ಯವಸ್ಥೆ ಬೇಕೆಂದರೆ ಅದಕ್ಕೆ ತಕ್ಕ ದರ ಪಾವತಿ ಮಾಡಿ. ಹೀಗಾಗಿ ಅಲ್ಲಿ ಈಗ ರೈತರಿಗೆ ಮತ್ತು ಉದ್ದಿಮೆ ವಲಯಕ್ಕೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ದೊರೆಯುತ್ತಿದೆ.
ನೋ ಫ್ರೀ ಫೆಸಿಲಿಟಿ
ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯಲ್ ಹೇಳಿಕೆಯೂ ಅದೇ ಆಗಿದೆ. ದೇಶಾದ್ಯಂತ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲೇಬೇಕೆಂದಾದರೆ 'ಉಚಿತ' ಎಂಬ ವ್ಯವಸ್ಥೆಗೆ ಪೂರ್ಣ ವಿರಾಮ ಹಾಕಲೇಬೇಕು.
ಬೆದರಿಕೆಯೊಡ್ಡಿದೆ ಇರಾಕ್ ಗಲಾಟೆ
ಹಲವು ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕು ಎನ್ನುವುದು ಸರ್ಕಾರದ ಇರಾದೆಯಾದರೂ ಇರಾಕ್ನಲ್ಲಿಯ ಬಿಕ್ಕಟ್ಟು ಕರಿ ನೆರಳು ಬೀರುತ್ತಲೇ ಇದೆ. ಹೇಳಿ ಕೇಳಿ ಜಗತ್ತಿನ ಅರ್ಧ ಭಾಗಕ್ಕೆ ಇರಾಕ್ನಿಂದಲೇ ಕಚ್ಚಾ ತೈಲ ಪೂರೈಕೆಯಾಗುತ್ತಿದೆ. ಒಂದು ವೇಳೆ ಗಲಭೆ ತೈಲೋತ್ಪಾದನೆಯಾಗುವ ಕ್ಷೇತ್ರಗಳಿಗೆ ಲಗ್ಗೆ ಹಾಕಿದರೆ ಭಾರತವೂ ಸೇರಿದಂತೆ ಪ್ರಮುಖ ರಾಷ್ಟ್ರಗಳ ಅರ್ಥ ವ್ಯವಸ್ಥೆಗೆ ಅಕ್ಷರಶಃ ಬರೆ ಎಳೆದಂತೆಯೇ ಸರಿ.
ವಿಶ್ವದ ಯಾವುದೇ ಸರ್ಕಾರ ಪರ್ಯಾಯ ವ್ಯವಸ್ಥೆ ಜಾರಿ ಮಾಡಿದರೂ ಅದರ ವ್ಯಾಪ್ತಿ ಸೀಮಿತ. ಹೀಗಾಗಿ, ಅಲ್ಲಿನ ಬೆಳವಣಿಗೆ ಕೈಮೀರಿ ಹೋದರೆ ತೈಲೋತ್ಪನ್ನ ಕ್ಷೇತ್ರದಲ್ಲಿ ಮೋದಿ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಸುಧಾರಣೆಗಳು ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆಯೇ ಆದೀತು.
ಬರ ಛಾಯೆ
ಹಾಲಿ ಮುಂಗಾರು ಹಂಗಾಮು ನಿರೀಕ್ಷೆಯಂತಿಲ್ಲ. ಸರಿಯಾದ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಬೆಳೆಯೂ ಬೆಳೆಯಲಾರದು. ಅದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳ. ತತ್ಪರಿಣಾಮ ಹಣದುಬ್ಬರ ದರದಲ್ಲಿ ಏರಿಕೆ ಕಟ್ಟಿಟ್ಟ ಬುತ್ತಿ. ಅಂತಿಮವಾಗಿ ಜೀವನ ದುಸ್ತರ. ಹೀಗಾಗಿ, ಮಳೆ ಇಲ್ಲದಿದ್ದರೂ ದೈನಂದಿನ ಜೀವನ ಕುಸಿಯದಂತೆ ಮಾಡುವ ಭಾರಿ ಹೊಣೆಗಾರಿಕೆ ಹೊಸ ಸರ್ಕಾರದ ಮೇಲಿದೆ.
ಚಿನ್ನ ಮತ್ತಷ್ಟು ಚಿನ್ನ
ಮೋದಿ ಸರ್ಕಾರ ಬರುತ್ತದೆ ಎಂದು ಸೂಚನೆ ಸಿಕ್ಕಿದ್ದೇ ತಡ ಎರಡು ತಿಂಗಳ ಹಿಂದೆ ಷೇರು ಪೇಟೆ ನಭಕ್ಕೆ ನೆಗೆದಿತ್ತು. ಸರ್ಕಾರ ಬಂದ ಬಳಿಕ ಚಿನ್ನದ ಬೆಲೆ ಕೂಡ ಗಣನೀಯವಾಗಿ ತಗ್ಗಿತ್ತು. ಏಕೆಂದರೆ ಯುಪಿಎ ಸರ್ಕಾರ ಚಿನ್ನ ಆಮದಿನ ಮೇಲೆ ವಿಧಿಸಲಾಗಿದ್ದ ಸುಂಕ ತಗ್ಗಿಸಿತ್ತು. ಒಟ್ಟಿನಲ್ಲಿ ಮೋದಿ ಸರ್ಕಾರಕ್ಕೆ ಪ್ರಸಕ್ತ ಹಣಕಾಸು ವರ್ಷ ಗರಿಷ್ಠ ಪರೀಕ್ಷೆಯ ಕಾಲವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಚಿನ್ನದ ಆಮದು ಲೆಕ್ಕಾಚಾರ
2012-13 845 ಟನ್
2013-14 600 ಟನ್
-ಸದಾಶಿವ ಕೆ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


