ಬಜಾರಿನ ನಿರೀಕ್ಷೆ ಎಷ್ಟು ಗಟ್ಟಿ?
ವಾಣಿಜ್ಯೋದ್ಯಮ ವಲಯದ, ಅದರಲ್ಲೂ ಷೇರು ಬಜಾರಿನ ಮೂಲಗಳಿಂದ ಹೊರಗೆ ಬರುತ್ತಿರುವ ಹೇಳಿಕೆ, ವದಂತಿ, ಹಾಗೂ ಉದ್ಗಾರಗಳನ್ನು ಗಮನಿಸಿದರೆ, ನಿಸ್ಸಂದೇಹವಾಗಿ ಆ ವಲಯ ಕೇಂದ್ರದಲ್ಲಿ ಸರ್ಕಾರದ ಬದಲಾವಣೆಯನ್ನು ಅಪೇಕ್ಷಿಸಿದೆ ಹಾಗೂ ಬದಲಾವಣೆಯ ಸ್ವರೂಪವನ್ನು ಕುರಿತು ಆಶಾವಾದದಿಂದ ಚಿಂತನೆಯನ್ನು ಆರಂಭಿಸಿದೆ ಎನ್ನುವುದರಲ್ಲಿ ಯಾರೂ ಸಂದೇಹ ಪಡಬೇಕಾಗಿಲ್ಲ.
ಆದರೆ, ಇನ್ನೂ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳೇ ಪ್ರಕಟವಾಗಿಲ್ಲ. ನರೇಂದ್ರ ಮೋದಿ ಅವರ ಭಾಷಣಗಳಲ್ಲಿ ಅವರು ಹಾಗೂ ಬಿಜೆಪಿಯ ಕೂಟ ಅಧಿಕಾರಕ್ಕೆ ಬಂದರೆ ಬಜಾರಿನ ಜನ- ಇತರರು ಏನನ್ನು ನಿರೀಕ್ಷಿಸಬಹುದು ಎನ್ನುವುದೂ ಗೊತ್ತಾಗುತ್ತಿಲ್ಲ. ನರೇಂದ್ರ ಮೋದಿ ಉದ್ಯಮಿಗಳ ಈಗಿನ ಅಚ್ಚುಮೆಚ್ಚಿನ ನಾಯಕ. ರಾಹುಲ್ ಗಾಂಧಿ ಜನ ಸಾಮಾನ್ಯರಿಂದ ದೂರವಿದ್ದರೂ ಆ ವರ್ಗದ ಹಿತ ಚಿಂತಕ ಎನ್ನುವ ಸ್ಥೂಲವಾದ ನಂಬಿಕೆ ಮೂಡಿರುವಂತಿದೆ.
ಈ ಚೌಕಟ್ಟಿಗೇ ಉದ್ಯಮಿಗಳು ತಮ್ಮ ನಿರೀಕ್ಷೆಯನ್ನು ಇತಿ-ಮಿತಿಯಲ್ಲಿಟ್ಟುಕೊಂಡರೆ, ಮುಂದೆ ಹೆಚ್ಚು ನಿರಾಸೆಯಾಗಲಿಕ್ಕಿಲ್ಲ.
ಸೆನ್ಸೆಕ್ಸ್ ಅಬ್ಬರ
ಮುಂಬೈ ಸ್ಟಾಕ್ ಎಕ್ಸ್ಚೇಂಜ್ನ ಸಂವೇದಿ ಸೂಚ್ಯಂಕ ಕಳೆದ ವಾರದಲ್ಲಿ ಒಂದು ದಿನ 22,000 ಗೆರೆಯನ್ನು ದಾಟಿ ಅಚ್ಚರಿ ಮೂಡಿಸಿ, ಮತ್ತೆ 21000ದ ಆಜುಬಾಜು ಗೆರೆಗಳನ್ನು ಆರಿಸಿಕೊಂಡಿತ್ತು.
ಇದು ಪೇಟೆಯ ಇಂದಿನ ಸ್ಥಿತಿ. ಮ್ಯೂಚುಯೆಲ್ ಫಂಡ್ಗಳ ಆಸ್ತಿ (ಅಂದರೆ ಆ ಫಂಡಿನ ವಶದಲ್ಲಿರುವ ಷೇರುಗಳ ಪೇಟೆಯ ಮೌಲ್ಯ) ಕಳೆದ ತಿಂಗಳಲ್ಲಿ 9.16 ಲಕ್ಷ ಕೋಟಿ ರುಪಾಯಿಗಳನ್ನು ಮೀರಿತ್ತು. ಈಕ್ವಿಟಿ (ಷೇರುಗಳು) ಇನ್ಕಂ ಫಂಡ್ಗಳಿಗೆ ಬಂದ ಆದಾಯದ ಆಧಾರದ ಮೇಲೆ ಪೇಟೆಯ ಜನ ಈಗ 'ಸಮೃದ್ಧಿ'ಯನ್ನು ನಿರೀಕ್ಷಿಸಿದ್ದಾರೆ. ಈ ವಲಯದಲ್ಲಿ ಬಡ್ಡಿಯ ದರ ಈಗ ಸರಾಸರಿ ಸಾಲಿಯಾನ ಶೇ.10ರ ಆಜುಬಾಜು ಇದೆ. 'ಈಕ್ವಿಟಿ ಫಂಡ್'ಗಳಿಗೆ ಹಣ ಬರುತ್ತಲೇ ಇದೆ. ಅದು ಗ್ರಾಹಕರ ವಿಶ್ವಾಸದ ಗುರುತು. ಚಿನ್ನದ ಫಂಡ್ಗಳಿಂದ ಹಣದ ಹೊರ ಹರಿವು ಹೆಚ್ಚಾಗಿದೆ.
ಚಿಲ್ಲರೆ ಇನ್ಫ್ಲೇಷನ್
ಗ್ರಾಹಕರ ಬೆಲೆ ಆಧಾರಿತ (ಅದನ್ನೇ ರೀಟೇಲ್ ಇನ್ಫ್ಲೇಷನ್ ಅಥವಾ ಚಿಲ್ಲರೆ ಇನ್ಫ್ಲೇಷನ್ ಲೆಕ್ಕ ಎನ್ನುವುದು) ಇನ್ಫ್ಲೇಷನ್ ಫೆಬ್ರವರಿಯಲ್ಲಿ ಕಡಿಮೆಯಾಗಿತ್ತು. ಸರ್ಕಾರದ ಅಧಿಕೃತ ಅಂಕಿ-ಅಂಶಗಳಂತೆಯೇ ಇನ್ಫ್ಲೇಷನ್ ದರ ಶೇ. 8.1ಕ್ಕೆ ಇಳಿದಿದೆ. ಸಗಟು ವ್ಯಾಪಾರ ಸೂಚ್ಯಂಕ ಇನ್ಫ್ಲೇಷನ್ ದರವು ಫೆಬ್ರವರಿಯಲ್ಲಿ ಕೆಳಗೆ ಬಂದಿತ್ತು. ಇದಕ್ಕೆ ಕಾರಣ ಆಹಾರ ಪದಾರ್ಥಗಳು ಹಾಗೂ ಹಣ್ಣು ತರಕಾರಿಯ ಬೆಲೆ ಇಳಿದಿದ್ದು. ಇದು ತಾತ್ಕಾಲಿಕ ಸಮಾಧಾನ ಅಷ್ಟೇ.
ಬ್ಯಾಂಕ್ ಬಡ್ಡಿದರಗಳ ಇಳಿತಕ್ಕೆ ಇಷ್ಟೇ ಸಾಲದು. ಇನ್ನೂ ಇನ್ಫ್ಲೇಷನ್ ದರ ಕೆಳಗೆ ಬೀಳಬೇಕು. ಇನ್ಫ್ಲೇಷನ್ ಸೂಚ್ಯಂಕದ ಗುರಿ ಎಷ್ಟಿರಬೇಕು ಎನ್ನುವುದನ್ನು ನಿರ್ಧರಿಸುವುದು ಯಾರು? ಸಾಮಾನ್ಯ ನಂಬಿಕೆಯಂತೆ ರಿಸರ್ವ್ ಬ್ಯಾಂಕ್. ಆದರೆ ವಿತ್ತಮಂತ್ರಿ ಚಿದಂಬರಂ, ಅದು ಸರ್ಕಾರದ ಜವಾಬ್ದಾರಿ ಎನ್ನುತ್ತಿದ್ದಾರೆ. ಇದೇನೂ ದೊಡ್ಡ ವಿಚಾರವಲ್ಲ ಆದರೆ ಸಂಪರ್ಕದ ಅಭಾವದ ಸೂಚನೆ ಅಷ್ಟೇ.
ಡಾಟ್ಕಾಮ್ ಗುಳ್ಳೆ ನೆನಪು
ಒಂದು ಕಾಲದಲ್ಲಿ ಡಾಟ್ ಕಾಮ್ (ತಂತ್ರಜ್ಞಾನ ಆಧಾರಿತ ಸೂಕ್ಷ್ಮ ಉದ್ಯಮ ವಲಯ) ಷೇರುಗಳಿಗೆ ಭಾರಿ ಮೌಲ್ಯವಿತ್ತು. ಬೇಡಿಕೆಯೂ ಇತ್ತು. ಆ ವಲಯವೇ ಶ್ರೀಮಂತ ವಲಯ ಎನ್ನುವ ನಂಬಿಕೆಯೂ ಇತ್ತು. ಕೆಲವೇ ವರ್ಷಗಳ ಹಿಂದೆ ಡಾಟ್ಕಾಮ್ ವಲಯ ಇದ್ದಕ್ಕಿದ್ದಂತೆ ಕುಸಿಯಿತು. ಹೇಳದೇ ಕೇಳದೇ ಕಂಪನಿಗಳು ಬೋರ್ಡ್ಗಳನ್ನು ಅಳಿಸಿ ಹಾಕಿದವು. ಹಾಗೂ- ಹೀಗೂ ಆ ವಲಯ ಈಗ ಚೇತರಿಸಿಕೊಂಡಿದೆ. ಈ ಕಾಲದಲ್ಲೇ ಮತ್ತೆ ಕುಸಿತದ ಕರಿನೆರಳಿನ ದರ್ಶನದ ಭೀತಿಯೂ ಮೂಡಿದೆ. ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಈ ಪ್ರವೃತ್ತಿ ಭಾರತಕ್ಕೂ ಬರುವ ಭೀತಿ ಇದೆ. ಇದು ಗ್ರಾಹಕರಿಗೆ ಎಚ್ಚರಿಕೆಯ ಮಾತು.
ಕೊನೆಮಾತು
ಚುನಾವಣೆಯ ಸಂಭವನೀಯ ಫಲಿತಾಂಶ ಹಾಗೂ ನೂತನ ಸರ್ಕಾರದ ಉದಾರ ನೀತಿಯ ವಿಚಾರವನ್ನು ವಿಪರೀತವಾಗಿ ತಲೆಗೆ ಹಚ್ಚಿಕೊಂಡಿರುವ ಸಂಸ್ಥೆಗಳು- ವ್ಯಕ್ತಿಗಳು ಈಗಾಗಲೇ ಅಲ್ಲಲ್ಲಿ ಪಟಾಕಿ ಸಿಡಿಸಿದ ವರದಿಗಳಿವೆ. ಹುಷಾರ್ ಚುನಾವಣೆಯ ಏರಿಳಿತ ನಿಜವಾಗಲೂ ಒಂದು ಮರೀಚಿಕೆ. ಪೇಟೆಯ ಭದ್ರತೆಗೆ ಬೇಕಾದ್ದು ಭದ್ರ ಸರ್ಕಾರ.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

