ಮನಿ ಸಂಸಾರ

ದಂಪತಿ ಮುಂದೆ ಮಿನಿ ಬಜೆಟ್
ಕೆಲವರು ಮದುವೆಯ ನಂತರ ಸಂಗಾತಿ ಜತೆಗೆ ಹಣಕಾಸಿನ ವಿಷಯ ಮಾತನಾಡಲು ಇಷ್ಟಪಡುವುದಿಲ್ಲ. ಇನ್ನೂ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಣ ಪ್ರತಿಷ್ಠೆ ತೋರ್ಪಡಿಸುವ ಸಲುವಾಗಿ ಇಲ್ಲದ್ದನ್ನೆಲ್ಲ ಇದೆ ಎಂದು ಹೇಳಿ ತಮ್ಮ ಆದಾಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ...
ಮದುವೆಗೆ ಮುನ್ನ ಹಣಕಾಸು ಕುರಿತಂತೆ ನಿಮಗೆ ಯಾವುದೇ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ. ಹಣದ ಖರ್ಚು-ವೆಚ್ಚ ಕುರಿತು ಹೆಚ್ಚು ಸ್ವಾತಂತ್ರ್ಯ ಇರುತ್ತದೆ. ಆದರೆ ಒಮ್ಮೆ ಮದುವೆಯಾಗುತ್ತಿದ್ದಂತೆಯೇ ಹಣಕಾಸಿಗೆ ಸಂಬಂಧಪಟ್ಟಂತೆ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಕೆಲವರು ಮದುವೆಯ ನಂತರ ಸಂಗಾತಿ ಜತೆಗೆ ಹಣಕಾಸಿನ ವಿಷಯ ಮಾತನಾಡಲು ಇಷ್ಟಪಡುವುದಿಲ್ಲ.
ಇನ್ನೂ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಣ ಪ್ರತಿಷ್ಠೆ ತೋರ್ಪಡಿಸುವ ಸಲುವಾಗಿ ಇಲ್ಲದ್ದನ್ನೆಲ್ಲ ಇದೆ ಎಂದು ಹೇಳಿ ತಮ್ಮ ಆದಾಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಈ ಎರಡೂ ಸಂಗತಿಗಳು ತಪ್ಪು. ಮದುವೆಯ ನಂತರ ನೀವು ಸಂಗಾತಿ ಜತೆಗೆ ಹಣಕಾಸಿನ ಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಅಷ್ಟೇ ಅಲ್ಲ, ಇಬ್ಬರೂ ಕಲೆತು ಭವಿಷ್ಯದ ಯೋಜನೆ ರೂಪಿಸಬೇಕು.
ನಿಮ್ಮ ಮದುವೆಯ ಬುನಾದಿ ಭದ್ರವಾಗಿರಬೇಕಾದರೆ ಹಣಕಾಸಿನ ಪ್ರಾಮಾಣಿಕತೆ ಬಹಳ ಮುಖ್ಯವೆನ್ನುತ್ತಾರೆ ಆರ್ಥಿಕ ತಜ್ಞರು. ನಿಮ್ಮ ಆದಾಯವನ್ನು ಕಡಿಮೆಯಾಗಿ ತೋರಿಸಬೇಡಿ. ಹೆಚ್ಚಾಗಿಯೂ ಬಿಂಬಿಸಬೇಡಿ. ಸಂಕಾತಿಗೆ ನಿಮ್ಮ ಆರ್ಥಿಕ ಸ್ಥಿತಿಯ ನೈಜ ಚಿತ್ರಣ ನೀಡಿ. ಇದರ ಜತೆಗೆ ನಿಮ್ಮ ಸಾಲಗಳ ಬಗ್ಗೆಯೂ ತಿಳಿಸಿ. ನಿಮ್ಮ ಖರ್ಚುಗಳು ಮತ್ತು ಅಭ್ಯಾಸಗಳ ಬಗ್ಗೆಯೂ ವಿವರಿಸಿ.
ಮದುವೆ ನಂತರ ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ಅಧಿಕ ವೆಚ್ಚಗಳ ಬಗ್ಗೆ ಪರಸ್ಪರ ಚರ್ಚಿಸಬೇಕು. ದುಂದುವೆಚ್ಚ ಮಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ಮರೆಮಾಚದೆ ಅದನ್ನು ಸಂಗಾತಿಗೆ ತಿಳಿಸಿ. ನಿಮ್ಮ ಇಂಥ ಅಭ್ಯಾಸಗಳನ್ನು ಮುಚ್ಚಿಡುವುದರಿಂದ ಖರ್ಚುಗಳು ಕಡಿಮೆಯಾಗಲಾರವು ಎಂಬುದು ನೆನಪಿರಲಿ. ಹಾಗಾಗಿ ಪ್ರಾಮಾಣಿಕತೆಯಿಂದ ನಿಮ್ಮೆಲ್ಲ ಅಭ್ಯಾಸಗಳನ್ನು ಹಂಚಿಕೊಳ್ಳಿ. ಇದರಿಂದಾಗಿ ಈ ಜೋಡಿಗೆ ತಮ್ಮ ಖರ್ಚಿನ ಅಂದಾಜು ದೊರೆಯುತ್ತದೆ. ನಿಮ್ಮದೇ ಒಂದು ಬಜೆಟ್ ರೂಪುಗೊಳ್ಳಲಿ.
ಮುಂದಿನ ಕೆಲವು ವರ್ಷಗಳಲ್ಲಿ ನೀವು ಏನೇನು ಖರೀದಿ ಮಾಡಬೇಕು ಎಂದಿರುವಿರಿ ಎಂಬುದನ್ನು ಸಂಗಾತಿಗೆ ತಿಳಿಸಿ. ಸಂಗಾತಿಯ ಯೋಜನೆಗೂ ಕಿವಿಗೊಡಿ. ಪರಸ್ಪರರ ಕನಸುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶ್ರಮ ಹಾಕಿ. ಮದುವೆ ನಂತರ ಹೆಸರು ಅಥವಾ ಉಪನಾಮ (ಸರ್‌ನೇಮ್) ಬದಲಾಯಿಸುವುದು ಕಾಮನ್. ಮದುವೆ ನಂತರ ನೀವು ಅಥವಾ ಸಂಗಾತಿ ಈ ರೀತಿ ಹೆಸರು ಬದಲಿಸಿಕೊಂಡಿದ್ದರೆ ಸಂಬಂಧಪಟ್ಟ ಎಲ್ಲ ಆರ್ಥಿಕ ಸಂಸ್ಥೆಗಳ ದಾಖಲೆಗಳಲ್ಲಿ ಈ ಬದಲಾವಣೆ ಜಾರಿಗೆ ಬರುವಂತೆ ಎಚ್ಚರ ವಹಿಸಿ.
ಹೀಗೆ ಮಾಡುವ ಮೂಲಕ ಮುಂದೆ ಯಾವುದೇ ಸಮಸ್ಯೆಯಾಗದಂತೆ ತಡೆಯಬಹುದು. ಮದುವೆ ನಂತರ ಹೆಸರು ಅಥವಾ ಉಪನಾಮ ಬದಲಾಯಿಸದಿರುವುದೇ ಉತ್ತಮ ಎಂದು ಕೆಲವು ಆರ್ಥಿಕ ತಜ್ಞರು ಹೇಳುತ್ತಾರೆ. ಇದರಿಂದಾಗಿ, ಪದೇಪದೆ ಎಲ್ಲ ಕಡೆಗಳಲ್ಲಿ ಹೆಸರು ಬದಲಾಯಿಸಬೇಕಾದ ಕಿರಿಕಿರಿಯಿಂದ ಪಾರಾಗಬಹುದು.
ಮದುವೆ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಜೀವವಿಮೆ ಮೊತ್ತವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ಬಹಳ ಇರುತ್ತದೆ. ನೀವು ಇನ್ನೂ ವಿಮೆ ಮಾಡಿಸಿಲ್ಲ ಎಂದರೆ ಒಂದು ಸೂಕ್ತ ಮೊತ್ತಕ್ಕೆ ವಿಮೆ ಮಾಡಿಸುವುದು ಒಳಿತು. ಇನ್ನೂ ಆರೋಗ್ಯ ವಿಮೆ ವಿಚಾರಕ್ಕೆ ಬಂದರೆ ನಿಮ್ಮ ಸಂಗಾತಿಯನ್ನೂ ಜತೆಗೆ ಸೇರಿಸಿಕೊಳ್ಳುವುದು ಉತ್ತಮ.
ಮದುವೆ ಮುಂಚಿನ ಬದುಕು ಬೇರೆ, ಮದುವೆ ನಂತರದ್ದೇ ಬೇರೆ. ಪರಸ್ಪರ ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ ಬಹಳ ಮುಖ್ಯ. ವಿಶೇಷವಾಗಿ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮುಚ್ಚುಮರೆ ಬೇಡ. ಮುಂದಿನ ಭವಿಷ್ಯಕ್ಕೆ ಸುಭದ್ರ ಅಡಿಪಾಯ ಬೇಕಿದ್ದರೆ ಇದು ಬಹಳ ಮುಖ್ಯ.
-ಪ್ರೇಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


