ವಾಣಿಜ್ಯ

ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ..!

ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ..!
Published On :

ನವದೆಹಲಿ: ಗಗನದತ್ತ ಮುಖ ಮಾಡಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ ಕನಿಷ್ಟ 360ರು.ಗಳ ಇಳಿಕೆಯಾಗಿದೆ.

ರಷ್ಯಾ, ಉಕ್ರೇನ್ ಮತ್ತು ಸಿರಿಯಾ ದೇಶಗಳಲ್ಲಿನ ಆಂತರಿಕ ಸಮರದ ನಡುವೆಯೂ ಚಿನ್ನದ ದರ ಇಳಿಕೆಯಾಗುವ ಮೂಲಕ ಹೂಡಿಕೆದಾರರಲ್ಲಿ ಅಚ್ಚರಿ ಮೂಡಿಸಿದೆ. ಮೂಲಗಳ ಪ್ರಕಾರ ಚಿನ್ನದ ದರದಲ್ಲಿ ಕನಿಷ್ಟ 360 ರುಪಾಯಿ ಇಳಿಕೆಯಾಗಿದ್ದು, ಇದು ಕಳೆದ 15 ತಿಂಗಳಲ್ಲೇ ಚಿನ್ನದ ಅತ್ಯಂತ ಕೆಳ ಮಟ್ಟದ ದರ ಎಂದು ಗುರುತಿಸಲಾಗಿದೆ. ಕಳೆದ 2013ರ ಜೂನ್ ತಿಂಗಳಲ್ಲಿ ಇಳಿಕೆಯತ್ತ ಮುಖ ಮಾಡಿದ್ದ ಹಳದಿ ಲೋಹ, ತದ ನಂತರ ಏರಿಕೆಯತ್ತ ಮುಖ ಮಾಡಿತ್ತು. ಇದೀಗ ಮತ್ತೆ ದಿಢೀರ್ ಕುಸಿತ ಕಂಡುಬಂದಿದ್ದು, ಗ್ರಾಹಕರಲ್ಲಿ ಹರ್ಷ ಮನೆ ಮಾಡುವಂತೆ ಮಾಡಿದೆ.

ಅಂತಾರಾಷ್ಟ್ರೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಇದಕ್ಕೆ ಮುಖ್ಯವಾಗಿ ಅಮೆರಿಕನ್ ಡಾಲರ್‌ನ ಮೌಲ್ಯ ಏರಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಡಾಲರ್ ಮೌಲ್ಯ ಏರಿಕೆಗಾಗಿ ಶ್ವೇತಭವನದ ಆರ್ಥಿಕ ಇಲಾಖೆ ಕೈಗೊಂಡಿದ್ದ ಕೆಲ ಕಠಿಣ ನಿರ್ಧಾರಗಳು ಡಾಲರ್ ಮೌಲ್ಯ ಹೆಚ್ಚಳಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯವು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸರಕು ಬೆಲೆಗಳಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕುಗಳನ್ನು ಡಾಲರ್ ಮೂಲಕ ವಹಿವಾಟು ಮಾಡಲಾಗುತ್ತದೆ. ಇದೀಗ ಡಾಲರ್‌ನ ಮೌಲ್ಯ ಏರಿಕೆಯಿಂದಾಗಿ ಸಾಮಾನ್ಯವಾಗಿಯೇ ಸರಕು ಬೆಲೆಗಳಲ್ಲಿ ಕುಸಿತ ಕಾಣುತ್ತದೆ. ಅಂತೆಯೇ ಚಿನ್ನದ ದರ ಕೂಡ ಕಡಿಮೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿಯೂ ಇದರ ಪರಿಣಾಮ ಬೀರಿದ್ದು, ಚಿನಿವಾರಪೇಟೆಯಲ್ಲಿ ಚಿನ್ನದ ದರದಲ್ಲಿ ಕುಸಿತ ಕಂಡು ಬಂದಿದೆ. ಮೂಲಗಳ ಪ್ರಕಾರ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್‌ನ ಪ್ರತೀ 10 ಗ್ರಾಂ ಚಿನ್ನದ ದರ 25,180 ಆಗಿದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 26,950ರು. ಎಂದು ತಿಳಿದುಬಂದಿದೆ. ಬೆಳ್ಳಿ ಮತ್ತು ಪ್ಲಾಟಿನಂ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿಯ ದರ 37, 628 ರುಪಾಯಿಗೆ ಕುಸಿದಿದೆ. 22 ಕ್ಯಾರೆಟ್‌ನ 10ಗ್ರಾಂ ಪ್ಲಾಟಿನಂ ದರ 25, 180 ರುಪಾಯಿಗೆ ಕುಸಿದಿದ್ದು, 24 ಕ್ಯಾರೆಟ್‌ನ 10 ಗ್ರಾಂ ಪ್ಲಾಟಿನಂ ದರ 26,950ಕ್ಕೆ ಇಳಿದಿದೆ.

ಅಮೆರಿಕನ್ ಡಾಲರ್ ಮೌಲ್ಯ ಹೆಚ್ಚಳ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆ ಮತ್ತು ತಗ್ಗಿದ ಚಿನ್ನದ ಬೇಡಿಕೆಯಿಂದಾಗಿ ಚಿನ್ನದ ದರ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೀಪಾವಳಿ ವೇಳೆಗೆ ಮತ್ತಷ್ಟು ತಗ್ಗಲಿದೆ ಚಿನ್ನದ ದರ

ಇನ್ನು ವಿತ್ತ ತಜ್ಞರು ಅಭಿಪ್ರಾಯಪಟ್ಟಿರುವಂತೆ ಹಳದಿ ಲೋಹದ ದರ ದೀಪಾವಳಿ ವೇಳೆಗೆ ಮತ್ತಷ್ಟು ಕುಸಿಯಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರುಪಾಯಿ ಮೌಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಮತ್ತಷ್ಟು ಕುಸಿಯಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.