ವಿಶ್ವ ಬ್ಯಾಂಕ್‌ ಪಟ್ಟಿಯಲ್ಲಿ ಭಾರತಕ್ಕೆ 130ನೇ ಸ್ಥಾನ

ವಿಶ್ವ ಬ್ಯಾಂಕ್ ಪಟ್ಟಿಯಲ್ಲಿ ಭಾರತದ ಸ್ಥಾನ 12ರಷ್ಟು ಜಿಗಿದು 130ನೇ ಸ್ಥಾನದಲ್ಲಿದೆ. ಇದರಿಂದ ಭಾರತವನ್ನು ವಿಶ್ವದ ಅತ್ಯುನ್ನತ ವಿದೇಶೀ ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 

ನವದೆಹಲಿ: ವಿಶ್ವ ಬ್ಯಾಂಕ್ ಪಟ್ಟಿಯಲ್ಲಿ ಭಾರತದ ಸ್ಥಾನ 12ರಷ್ಟು ಜಿಗಿದು 130ನೇ ಸ್ಥಾನದಲ್ಲಿದೆ. ಇದರಿಂದ ಭಾರತವನ್ನು ವಿಶ್ವದ ಅತ್ಯುನ್ನತ ವಿದೇಶೀ ಹೂಡಿಕೆಯ ತಾಣವನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಗೆ ಉತ್ತೇಜನ ಸಿಕ್ಕಿದೆ. ಈ ಸ್ಥಾನ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ವ್ಯಾಪಾರ, ವ್ಯವಹಾರಗಳ ಹೂಡಿಕೆಗೆ ಭಾರತ ಉತ್ತಮ ತಾಣವಾಗಿದೆ ಎಂಬುದನ್ನು ವಿಶ್ವ ಬ್ಯಾಂಕ್ ಗುರುತಿಸಿರುವುದು ನಮ್ಮ ದೇಶಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ಒದಗಿಸಲಿದೆ.ಭಾರತ ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಆದಾಯ ತೆರಿಗೆ ಕಾಯ್ದೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕಾಗಿದೆ ಎಂದು ಹೇಳಿದರು.

ಭಾರತದ ಈ ಸಾಧನೆ ಗಮನಾರ್ಹವಾದುದು ಎಂದು ವಿಶ್ವ ಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞ ಮತ್ತು ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ತಿಳಿಸಿದ್ದಾರೆ.

ವಿಶ್ವದಲ್ಲಿ ಸುಲಭವಾಗಿ ವ್ಯಾಪಾರೋದ್ಯಮವನ್ನು ಕೈಗೊಳ್ಳಬಹುದಾದ 189 ದೇಶಗಳ ವಿಶ್ವ ಬ್ಯಾಂಕ್‌ ಪಟ್ಟಿಯಲ್ಲಿ ಭಾರತದ ಸ್ಥಾನ ಈ ವರೆಗೆ 142ರಲ್ಲಿತ್ತು. ನಂತರ ಭಾರತದ ಸ್ಥಾನ 134ಕ್ಕೆ ಪರಿಷ್ಕರಿಸಲ್ಪಟ್ಟು, ಇದೀಗ ಅಲ್ಲಿಂದ ಅದು ನೇರವಾಗಿ 130ಕ್ಕೆ ಜಿಗಿದಿದೆ.

ವಿಶ್ವ ಬ್ಯಾಂಕಿನ ಈ ಬಾರಿಯ  ಪಟ್ಟಿಯಲ್ಲಿ ಚೀನ 84ನೇ ಸ್ಥಾನದಲ್ಲಿದೆ. ಈ ವರ್ಷ ಅದು ಆರು ಸ್ಥಾನಗಳಷ್ಟು ಏರಿಕೆಯಾಗಿದೆ. ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಅನುಕ್ರಮವಾಗಿ ಸಿಂಗಾಪುರ, ನ್ಯೂಝೀಲಂಡ್‌ ಮತ್ತು ಡೆನ್ಮಾರ್ಕ್‌ ದೇಶಗಳಿವೆ. ಕೊನೆ ಮೂರು ಸ್ಥಾನಗಳಲ್ಲಿ ದಕ್ಷಿಣ ಸುಡಾನ್‌, ಲಿಬಿಯಾ ಮತ್ತು ಎರಿಟ್ರಿಯಾ ದೇಶಗಳಿವೆ.

 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com