

ಮುಂಬೈ: ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಅಂಕಿಅಂಶ ಬಿಡುಗಡೆ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದರಿಂದ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.2ರಷ್ಟು ಕುಸಿದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಿತು.
ಅಮೆರಿಕದಲ್ಲಿ ಆಗಸ್ಟ್ ತಿಂಗಳಲ್ಲಿ ಸೃಷ್ಟಿಯಾಗಿರುವ ಅಂಕಿಅಂಶಗಳು ಶುಕ್ರವಾರ ಸಂಜೆ ನಂತರ ಬಿಡುಗಡೆ ಮಾಡಲಾಯಿತು. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲು ಇದು ಪ್ರಮುಖ ಆಧಾರವಾಗಿ ದೆ. ಈ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು (ಎಫ್ ಐಐ) ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರು.
ಉದ್ಯೋಗ ಸೃಷ್ಟಿ ಅಂಕಿಅಂಶ ಆಶಾದಾಯಕವಾಗಿದ್ದರೆ ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ ಎಂದಾಗಲಿದೆ. ಆಗ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರಲಿದೆ. ಇದರಿಂದ ಭಾರತದಂತಹ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶಗಳ ಹಣಕಾಸು ಸಂಸ್ಥೆಗಳ ಸ್ವತ್ತುಮೌಲ್ಯ ಕುಸಿಯಲಿದೆ. ಈ ಭೀತಿಯಿಂದಾಗಿ ಎಫ್ಐಐಗಳು ಭಾರಿ ಮಾರಾಟ ಮಾಡಿದರು.
ಮುಂಗಾರು ಮಳೆ ಕೊರತೆ ಸೆಪ್ಟೆಂಬರ್ ತಿಂಗಳಲ್ಲಿಯೂ ಮುಂದುವರೆಯುವ ಸಾಧ್ಯತೆಗಳಿರುವುದು ಹೂಡಿಕೆದಾರರಲ್ಲಿ ಮತ್ತಷ್ಟು ಭೀತಿಗೆ ಕಾರಣವಾಯಿತು. ಇದರಿಂದ ಎಲ್ಲ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದವು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸಿದಲ್ಲಿ ಮಾರುಕಟ್ಟೆಗಳು ಮತ್ತಷ್ಟು ಕುಸಿರುಯವ ನೀರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 562.88 ಅಂಕ ಕುಸಿದು 25,201.90ಕ್ಕೆ ತಲುಪಿತು. 2014ರ ಜುಲೈ 15ರ ನಂತರದಲ್ಲಿ ಇದು ಕನಿಷ್ಠ ಮಟ್ಟವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 167.95 ಅಂಕ ಕುಸಿದು 7,655.05ಕ್ಕೆ ಕುಸಿಯಿತು. 2014ರ ಆಗಸ್ಟ್ 11ರ ನಂತರದಲ್ಲಿ ಕನಿಷ್ಠ ಮಟ್ಟವಾಗಿದೆ.
ಸೆನ್ಸೆಕ್ಸ್ ನ ಕ್ಷೇತ್ರವಾರು ಸೂಚ್ಯಂಕಗಳಲ್ಲಿ ರಿಯಾಲ್ಟಿ ಸೂಚ್ಯಂಕ ಅತಿ ಹೆಚ್ಚು ಶೇ.3.32ರಷ್ಟು ಕುಸಿಯಿತು. ನಂತರ ಮೂಲಸೌಕರ್ಯ ಸೂಚ್ಯಂಕ 3.24, ವಿದ್ಯುತ್ 3.04, ಬ್ಯಾಂಕಿಂಗ್ ಸೂಚ್ಯಂಕ ಶೇ.2.65ರಷ್ಟು ಕುಸಿದವು. ವೇದಾಂತ, ಗೇಲ್, ಟಾಟಾ ಸ್ಟೀಲ್, ಹಿಂಡಾಲ್ಕೊ, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಹೆಚ್ಚು ನಷ್ಟಕ್ಕೆ ಗುರಿಯಾದವು.