ಕೈಗಾರಿಕೆ ಉತ್ಪಾದನೆ ಚೇತರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಅಂದಾಜಿಗಿಂತಲೂ ಸ್ವಲ್ಪ ಕಡಿಮೆಯಾಗಿದ್ದರಿಂದ ದೇಶದ ಆರ್ಥಿಕ ಪ್ರಗತಿ ಕುರಿತು ಹಲವು ಅನುಮಾನಗಳನ್ನು ಸೃಷ್ಟಿಸಿತ್ತು.
ಆದರೆ ಶುಕ್ರವಾರ ಬಿಡುಗಡೆಯಾಗಿರುವ ಕೈಗಾರಿಕಾ ಉತ್ಪಾದನೆ ಪ್ರಗತಿ ಸ್ವಲ್ಪ ನಿರಾಳ ತಂದಿದ್ದು ಆಶಾಭಾವ ಮೂಡಿಸಿದೆ. ನಿರ್ಮಾಣ, ಯಂತ್ರಗಳ ಉತ್ಪಾದನೆ ಮತ್ತಿತರ ತಯಾರಿಕೆಗೆ ಬಳಸುವ ಬಂಡವಾಳ ಸರಕು ಮತ್ತು ಕೈಗಾರಿಕಾ ತಯಾರಿಕಾ ಕ್ಷೇತ್ರದ ಉತ್ತಮ ಸಾಧನೆಯಿಂದಾಗಿ ಕಳೆದ ಜುಲೈನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಶೇ.4.2ರಷ್ಟು ಪ್ರಗತಿ ಸಾಧಿಸಿದೆ. ಆದರೂ ಇದರ ಹಿಂದಿನ ತಿಂಗಳ ಪರಿಷ್ಕೃತ ಸೂಚ್ಯಂಕ ಶೇ.4.36ಕ್ಕೆ ಹೋಲಿಸಿದರೆ ತುಸು ಇಳಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಗತಿ ಶೇ.0.9ರಷ್ಟು ಮಾತ್ರ ಇತ್ತು. ಜುಲೈ ತಿಂಗಳಲ್ಲಿ ಐಐಪಿ ಸುಸ್ಥಿರ ಪ್ರಮಾಣದಲ್ಲಿ ಮುಂದುವರೆದಿರುವುದು ಜಿಡಿಪಿ ಪ್ರಗತಿ ಏರಿಕೆಗೆ ಕಾರಣವಾಗಲಿದೆ.
ಬಂಡವಾಳ ಸರಕು ಮತ್ತು ತಯಾರಿಕಾ ಕ್ಷೇತ್ರದ ಅಂಕಿಅಂಶಗಳು ಅತ್ಯಂತ ಪ್ರಮುಖ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠದತ್ತ ದಾಸ್ ಹೇಳಿದ್ದಾರೆ. ಐಐಪಿ ಸೂಚ್ಯಂಕದಲ್ಲಿ ತಯಾರಿಕಾ ಕ್ಷೇತ್ರದ ಪಾಲು ಶೇ.75ರಷ್ಟಿದ್ದು ಜುಲೈ ತಿಂಗಳಲ್ಲಿ ಶೇ.4.7ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಈ ಪ್ರಗತಿ ಶೇ.0.3ರಷ್ಟು ಮಾತ್ರ ಇತ್ತು. ಹೂಡಿಕೆಯನ್ನು ಪ್ರಮುಖವಾಗಿ ಬಿಂಬಿಸುವ ಬಂಡವಾಳ ಸರಕು ಕ್ಷೇತ್ರ ಉತ್ತೇಜನಕಾರಿಯಾದ ಶೇ.10.6ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷದ ಜುಲೈನಲ್ಲಿದ್ದ ಶೇ.3ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಏರಿಕೆ ದಾಖಲಿಸಿದೆ. ವಿವಿಧ ತಯಾರಿಕಾ ವಲಯಗಳಿಗೆ ಸಂಬಂಧಿಸಿ ಹೇಳುವುದಾದರೆ 22 ವಲಯಗಳಲ್ಲಿ 12 ಗಣನೀಯ ಪ್ರಗತಿ ಕಂಡಿವೆ.
ಐಐಪಿ ಅಂಕಿಅಂಶಗಳ ಕುರಿತು ಪ್ರತಿಕ್ರಿಯಿಸಿರುವ ಅಸೋಚಾಮ್ ಅಧ್ಯಕ್ಷ ರಾಣಾ ಕಪೂರ್, ಪ್ರಸಕ್ತ ಸಂದರ್ಭದಲ್ಲಿ ಹಣದುಬ್ಬರವೂ ನಿಯಂತ್ರಣದಲ್ಲಿದೆ. ಹೀಗಾಗಿ ಆರ್ ಬಿಐ ಈ ತಿಂಗಳು ನಡೆಯಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆಯಲ್ಲಿ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ಕನಿಷ್ಠ 25 ಮೂಲ ಅಂಶಗಳಷ್ಟು ಕಡಿತಗೊಳಿಸುವತ್ತ ಪರಿಶೀಲಿಸಬೇಕೆಂದು ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


