ಕೇವಲ 6 ಸೆಕೆಂಡ್ಸ್ ನಲ್ಲೇ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹ್ಯಾಕ್!

ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ನಗದು ರಹಿತ ದೇಶವಾಗಿಸುವ ಕನಸು ಕಾಣುತ್ತಿದ್ದರೆ ಅತ್ತ ಆರ್ಥಿಕ ತಜ್ಞರು ಕೇವಲ 6 ಸೆಕೆಂಡುಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹ್ಯಾಕ್ ಮಾಡಬಹುದು ಎಂದು ಹೇಳುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇವಲ 6 ಸೆಕೆಂಡುಗಳಲ್ಲಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹ್ಯಾಕ್ ಮಾಡಬಹುದಂತೆ!

ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ನಗದು ರಹಿತ ದೇಶವಾಗಿಸುವ ಕನಸು ಕಾಣುತ್ತಿದ್ದರೆ ಅತ್ತ ಅಮೆರಿಕದ ಆರ್ಥಿಕ ತಜ್ಞರು ನಗದು ರಹಿತ ಪ್ಲಾಸ್ಟಿಕ್ ಮನಿಗೆ ಸೂಕ್ತ ಭದ್ರತೆಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಕೇವಲ ಆರು ಸೆಕೆಂಡುಗಳಲ್ಲಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹ್ಯಾಕ್ ಮಾಡಬಹುದು. ಹೌದು..ಇಂತಹುದೊಂದು ಸ್ಫೋಟಕ ಮಾಹಿತಿ ನೀಡಿರುವುದು ಅಮೆರಿಕದ ಆರ್ಥಿಕ ತಂತ್ರಜ್ಞಾನ ತಜ್ಞರು. ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನಗದು ಹಣವನ್ನು ಬಳಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಪ್ರಮುಖ ದೇಶವಾಗಿರುವ ಅಮೆರಿಕದ ಆರ್ಥಿಕ ತಜ್ಞರೇ ಇಂತಹುದೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ವಿಶ್ವದ ಆರ್ಥಿಕ ವಿವಿಧ ತಂತ್ರಜ್ಞಾನಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಂತಹ ಪ್ಲಾಸ್ಟಿಕ್ ಮನಿ ಅತ್ಯಂತ ದುರ್ಬಲ ಭದ್ರತೆ ಹೊಂದಿದೆ ಎಂದು ಅವರು ಅಭ್ರಿಪ್ರಾಯಪಟ್ಟಿದ್ದಾರೆ.

ಹೇಗಾಗುತ್ತೆ ಹ್ಯಾಕ್?
ಸಾಮಾನ್ಯವಾಗಿ ನಾವು ಯಾವುದಾದರೊಂದು ವಸ್ತುವನ್ನು ಆನ್ ಲೈನ್ ನಲ್ಲಿ ಖರೀದಿ ಮಾಡಲು, ಬಿಲ್ ಪಾವತಿ ಮಾಡಲು ಕಾರ್ಡ್ ಬಳಕೆ ಮಾಡುವಾಗ ಸಣ್ಣ ಎಡವಟ್ಟುಗಳೇ ಹ್ಯಾಕರ್ ಗಳ ಪಾಲಿಗೆ ನೆರವಾಗುತ್ತದೆಯಂತೆ. ಅದು ಹೇಗೆ ಎಂದರೆ ಆನ್ ಲೈನ್ ನಲ್ಲಿ ನಾವು ಕಾರ್ಡ್ ನಂಬರ್ ಹಾಕಿ ಎರಡು-ಮೂರು ಬಾರಿ ಪಾಸ್ವರ್ಡ್ ತಪ್ಪಾಗಿ ನಮೂದಿಸಿದರೆ ಸಾಕು, ಆಗ ಹ್ಯಾಕರ್ ಗಳು ನಿರಾಯಾಸವಾಗಿ ಪಾಸ್ವರ್ಡ್ ಗೆಸ್ಸಿಂಗ್ ಆಧಾರದಲ್ಲಿ ಕಾರ್ಡ್ ಹ್ಯಾಕ್ ಮಾಡುತ್ತಾರೆ. ಇದಕ್ಕೆಂದೇ ಹ್ಯಾಕರ್ ಗಳು ಸಾಕಷ್ಟು ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದು, ಇದು ಕೆಲವೇ ಸೆಕೆಂಡ್ ಗಳಲ್ಲಿ ಪಾಸ್ವರ್ಡ್ ಕಂಡುಹಿಡಿದು ಹ್ಯಾಕರ್ ಗಳಿಗೆ ನೀಡುತ್ತದೆ. ಅದರ ಮೂಲಕವಾಗಿ ಹ್ಯಾಕರ್ ಗಳು ಕೆಲವೇ ಸೆಕೆಂಡ್ ಗಳಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ತಮ್ಮ ಖಾತೆಗೆ ಇಳಿಸಿ ಬಿಡುತ್ತಾರೆ.

ತಜ್ಞರು ಸಂಶೋಧನೆ ನಡೆಸಿರುವಂತೆ ಡಿಸ್ಟ್ರಿಬ್ಯೂಟೆಡ್ ಗೆಸ್ಸಿಂಗ್ ಅಟ್ಯಾಕ್ ನ ಮೂಲಕ ಕೇವಲ 6 ಸೆಕೆಂಡ್ ಗಳಲ್ಲಿ ನಿಮ್ಮ ಕಾರ್ಡ್ ನ ನಂಬರ್, ಎಕ್ಸ್ ಪೈರಿ ದಿನಾಂಕ, ಸೆಕ್ಯೂರಿಟಿ ಕೋಡ್ ಹಾಗೂ ಸಿವಿವಿ ಸಂಖ್ಯೆಯನ್ನು ಹ್ಯಾಕ್ ಮಾಡಬಹುದಂತೆ. ಅಮೆರಿಕದಲ್ಲಿ ದಿನಂಪ್ರತಿ ಇಂತಹ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಹ್ಯಾಕರ್ ಗಳ ಮಾಹಿತಿ ಮಾತ್ರ ದೊರೆಯುತ್ತಿಲ್ಲ. ಪ್ರಸ್ತುತ ವಿಶ್ವದಲ್ಲಿರುವ ಅತ್ಯಂತ ಮುಂದುವರೆದ ದೇಶದ ಬಳಿಯೂ ಕಾರ್ಡ್ ಹ್ಯಾಕಿಂಗ್ ಅನ್ನು ತಡೆಯುವಷ್ಟು ಸಾಮರ್ಥ್ಯವಿರುವ ತಂತ್ರಜ್ಞಾನವೇ ಇಲ್ಲವಂತೆ!

ಯಾವ ಸಂಸ್ಥೆಯ ಕಾರ್ಡ್ ನಲ್ಲಿ ಹ್ಯಾಕಿಂಗ್ ಹೆಚ್ಚು?
ತಜ್ಞರು ಅಭಿಪ್ರಾಯಪಟ್ಟಿರುವಂತೆ ಎಲ್ಲ ಸಂಸ್ಥೆಗಳ ಕಾರ್ಡ್ ಗಳು ಹ್ಯಾಕಿಂಗ್ ತುತ್ತಾಗಿವೆಯಾದರೂ, ವಿಸಾ ಸಂಸ್ಥೆ ಕಾರ್ಡ್ ಗಳ ಮೇಲೆ ಹ್ಯಾಕರ್ಸ್ ಗಳ ದಾಳಿ ಹೆಚ್ಚು ಎಂದು ಬ್ರಿಟನ್ ನ ನ್ಯೂಕ್ಯಾಸ್ಟಲ್ ವಿಶ್ವವಿಧ್ಯಾಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಆರೋಪವನ್ನು ವಿಸಾ ನಿರಾಕರಿಸಿದ್ದು, ಗ್ರಾಹಕರ ರಕ್ಷಣೆ ಸಂಸ್ಥೆಯ ಹೊಣೆಗಾರಿಕೆಯಾಗಿದ್ದು, ಅದನ್ನು ಸಂಸ್ಥೆ ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದೆ. ಹೆಚ್ಚು ರಕ್ಷಣೆ ಇರುವ ಕಾರ್ಡ್ ಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com