ಷೇರುಮಾರುಕಟ್ಟೆಯಲ್ಲಿ ಮುಂದುವರೆದ ಗೂಳಿ ಓಟ: 9 ತಿಂಗಳ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್

ಬ್ರೆಕ್ಸಿಟ್ ಪತನಾನಂತರ ಸತತ ಏರಿಕೆ ಕಾಣುತ್ತಿರುವ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ವಹಿವಾಟಿನ ದಿನದಲ್ಲೇ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಹರ್ಷ ಮೂಡಿಸಿದೆ.
ಸೆನ್ಸೆಕ್ಸ್ ಏರಿಕೆ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ ಏರಿಕೆ (ಸಂಗ್ರಹ ಚಿತ್ರ)
Updated on: 

ಮುಂಬೈ: ಬ್ರೆಕ್ಸಿಟ್ ಪತನಾನಂತರ ಸತತ ಏರಿಕೆ ಕಾಣುತ್ತಿರುವ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ವಹಿವಾಟಿನ ದಿನದಲ್ಲೇ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಹರ್ಷ  ಮೂಡಿಸಿದೆ.

ಕಳೆದ ವಾರಾಂತ್ಯದ ಮಾರುಕಟ್ಟೆ ಏರಿಕೆ ಮತ್ತು ಏಷ್ಯನ್ ಮಾರುಕಟ್ಟೆಯಲ್ಲಿ ಮುಂದುವರೆದ ಸಕಾರಾತ್ಮಕ ವಹಿವಾಟು ಇಂದಿನ ಮಾರುಕಟ್ಟೆ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸೆನ್ಸೆಕ್ಸ್ 464  ಅಂಕಗಳ ಏರಿಕೆಯೊಂದಿಗೆ 27,591 ಅಂಕಕ್ಕೆ ಏರಿಕೆಯಾಗಿದೆ. ಇದು ಕಳೆದ 9 ತಿಂಗಳಲ್ಲಿನ ಗರಿಷ್ಟ ಮಟ್ಟದ ಏರಿಕೆ ಎಂದು ಹೇಳಲಾಗುತ್ತಿದೆ. ಇನ್ನು ನಿಫ್ಟಿ ಕೂಡ 8400 ಅಂಕಗಳ ಗಡಿ ದಾಟಿದ್ದು, 127  ಅಂಕಗಳಷ್ಟು ಏರಿಕೆ ಕಂಡಿದೆ.

ಪ್ರಮುಖವಾಗಿ ಜಪಾನ್ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಶಿಂಜೋ ಅಬೆ ಅವರ ಗೆಲುವು ಕಳೆದ ವಾರಾಂತ್ಯದ ಏರಿಕೆಗೆ ಕಾರಣವಾಗಿತ್ತು. ಅಂತೆಯೇ ಅಮೆರಿಕ ಇದೇ ಜೂನ್ ನಲ್ಲಿ ವ್ಯಾಪಕ  ಉದ್ಯೋಗಾವಕಾಶ ನೀಡುವ ಕುರಿತು ತೆಗೆದುಕೊಂಡ ಕೆಲ ನಿರ್ಣಯಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಪ್ರಮುಖವಾಗಿ ಬಂಡವಾಳ ಸರಕು, ಬ್ಯಾಂಕಿಂಗ್, ಲೋಹಗಳು ಮತ್ತು  ರಿಯಾಲಿಟಿ ವಲಯಗಳ ಷೇರುಗಳು ಹೆಚ್ಚಿನ ಗಳಿಕೆ ಕಂಡಿದ್ದು, ಶೇ. 1.71ರಷ್ಟು ಮೌಲ್ಯ ಏರಿಕೆ ಕಂಡಿವೆ.  ಇನ್ನು ಜಪಾನ್ ನಿಕ್ಕೆ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಅತೀ ಹೆಚ್ಚು ಅಂದರೆ 3.55ರಷ್ಟು  ಮತ್ತು ಹಾಂಗ್ ಕಾಂಗ್ ನ ಹಾಂಗ್ ಸೆಂಗ್ ಷೇರು ಮೌಲ್ಯದಲ್ಲಿ 1.78ರಷ್ಟು ಏರಿಕೆ ಕಂಡುಬಂದಿದೆ.

ಚೀನಾದ ಶಾಂಘೈ ಮಾರುಕಟ್ಟೆಯಲ್ಲೂ ಇದರ ಸಕಾರಾತ್ಮಕ ಪರಿಣಾಮವಾಗಿದ್ದು, ಶಾಂಘೈ ಷೇರುಗಳ ಮೌಲ್ಯದಲ್ಲಿ 0.71ರಷ್ಟು ಏರಿಕೆ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com