

ನವದೆಹಲಿ: ಭಾರತದ ಅತಿ ವೇಗವಾದ ಕಾರನ್ನು ಮುಂಬಯಿ ಐಐಟಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಕಳೆದ ಭಾನುವಾರ ಟಾಟಾ ಮೋಟಾರ್ಸ್, ಸಿಯೆಟ್ ಟೈರ್ ಸೇರಿದಂತೆ ಹಲವು ಕಂಪನಿಗಳ ಸಹಯೋಗದೊಂದಿಗೆ ಕಾರನ್ನು ಪ್ರದರ್ಶಿಸಲಾಯಿತು.
ಫಾರ್ಮುಲಾ-1 ಮಾದರಿಯ ಕಾರನ್ನು ಅಭಿವೃದ್ದಿಪಡಿಸಿರುವ ವಿದ್ಯಾರ್ಥಿಗಳು ಯುಕೆ ಯಲ್ಲಿ ನಡೆಯಲಿರುವ ನೂತನ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕಾರಿಗೆ ‘ಒರ್ಕಾ’ ಎಂದು ಹೆಸರಿಟ್ಟಿದ್ದು ಇದನ್ನು ತಯಾರಿಸಲು ಬರೊಬ್ಬರಿ 9 ತಿಂಗಳು ಅವಧಿ ತೆಗೆದುಕೊಂಡಿದ್ದಾರೆ.
ಗಂಟೆಗೆ 0-100 ಕಿ ಮೀ ವೇಗವನ್ನು ಕೇವಲ 3.47 ಸೆಕೆಂಡುಗಳಲ್ಲಿ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ಒರ್ಕಾ ಪ್ರತಿಷ್ಠಿತ ಕಾರು ಕಂಪನಿಗಳಾದ ಮರ್ಸಿಡಿಸ್, ಟೆಲ್ಸಾ, ಆಡಿ ಮಾದರಿಯ ಕಾರುಗಳಿಗೆ ಸೆಡ್ಡು ಹೊಡೆದಿದೆ. ಇದಲ್ಲದೆ ಸಂಪೂರ್ಣ ಸ್ಟೀಲ್ ಚಾಸ್ಸಿಸ್ ಜತೆಗೆ ಕಾರ್ಬನ್ ಫೈಬರ್ ಮೈಕಟ್ಟು ನೀಡಲಾಗಿದ್ದು ಇದು ವಾಹನದ ಕ್ಷಮತೆ ಮತ್ತು ವೇಗಕ್ಕೆ ಪೂರಕವಾಗಿದೆ ಎಂದು 4 ನೇ ವರ್ಷದ ವಿದ್ಯಾರ್ಥಿ ಒರ್ಕಾದ ತಯಾರಕ ತಂಡದ ರಿಶಬ್ ಕಪಾಸಿಯ ಹೇಳಿದ್ದಾರೆ.
ಯುಕೆ ಯಲ್ಲಿ ವಾರ್ಷಿಕವಾಗಿ ನಡೆಯುವ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ಭಾಗಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ವಿನ್ಯಾಸಗಳೊಂದಿಗೆ ಭಾಗವಹಿಸುತ್ತಾರೆ. ಕಳೆದ ಐದು ವರ್ಷಗಳಿಂದ ಐಐಟಿ ಮುಂಬೈ ತನ್ನ ಉತ್ಕ್ರಷ್ಟ ವಿನ್ಯಾಸಕ್ಕಾಗಿ ಪ್ರಶಸ್ತಿ ಗಳಿಸುತ್ತಾ ಬಂದಿದೆ.