

ನವದೆಹಲಿ: ಭಾರತೀಯ ಆರ್ಥಿಕತ ಸುಧಾರಣೆಯತ್ತ ಸಾಗಿದ್ದು, 2015–16ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ 7.9ರಷ್ಟು ಮತ್ತು ಒಟ್ಟಾರೆ ಹಣಕಾಸು ವರ್ಷದಲ್ಲಿ ಶೇ 7.6ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿದುಬಂದಿದೆ.
ಪ್ರಸಕ್ತ ಸಾಲಿನ ಅರ್ಥಿಕ ಅಭಿವೃದ್ಧಿ ಕಳೆದ ಐದು ವರ್ಷದಲ್ಲಿಯೇ ಗರಿಷ್ಠ ಮಟ್ಟ ತಲುಪಿದ್ದು, ಭಾರತದ ವಾರ್ಷಿಕ ಜಿಡಿಪಿ ದರ ಶೇ.7.6ರಷ್ಟು ಅಭಿವೃದ್ಧಿ ಸಾಧಿಸಿದೆ. ಭಾರತದ ಈ ಸಾಧೆನೆಗೆ ತಯಾರಿಕೆ ಮತ್ತು ಕೃಷಿ ರಂಗದ ಉತ್ತಮ ಸಾಧನೆಯೇ ಕಾರಣವಾಗಿದೆ ಎಂದು ಕೇಂದ್ರೀಯ ಅಂಕಿ ಅಂಶ ಕಚೇರಿ (ಸಿಎಸ್‌ಒ) ತಿಳಿಸಿದೆ. ಮಂಗಳವಾರ ಸಿಎಸ್ ಒ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2015–16ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಗಣಿ ಮತ್ತು ಕಲ್ಲು ಗಣಿ ವಲಯವು ಶೇ 8.6, ವಿದ್ಯುತ್, ಅನಿಲ, ನೀರು ಪೂರೈಕೆ ಮತ್ತಿತರ ನಾಗರಿಕ ಸೇವೆಗಳು ಶೇ 9.3 ರಷ್ಟು ಬೆಳವಣಿಗೆ ದಾಖಲಿಸಿವೆ.
ದೇಶಿ ತಯಾರಿಕಾ ರಂಗವು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ 9.3 ಮತ್ತು ಕೃಷಿ ವಲಯವು ಶೇ 2.3ರಷ್ಟು ವೃದ್ಧಿ ಸಾಧಿಸಿದ್ದು, ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಏಪ್ರಿಲ್ – ಜೂನ್ ತಿಂಗಳ ತ್ರೈಮಾಸಿಕದಲ್ಲಿ ಶೇ 7.5, ಜುಲೈ-ಸೆಪ್ಟೆಂಬರ್ (ಶೇ 7.6), ಅಕ್ಟೋಬರ್-ನವೆಂಬರ್‌ನಲ್ಲಿ ಶೇ 7.2ರಷ್ಟು ವೃದ್ಧಿ ದಾಖಲಿಸಿತ್ತು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 0.2 ಕುಸಿತ ಕಂಡಿದ್ದ ಕೃಷಿ ವಲಯವು, 2015–16ರಲ್ಲಿ ಶೇ 1.2ರಷ್ಟು ಪ್ರಗತಿ ದಾಖಲಿಸಿದೆ. ಅಂತೆಯೇ ರಾಷ್ಟ್ರೀಯ ತಲಾ ಆದಾಯ ದರ ಕೂಡ 6.2ಕ್ಕೇರುವ ಮೂಲಕ 77, 435 ರುಗಳಿಗೇರಿದೆ ಎಂದು ಸಿಎಸ್ ಒ ತಿಳಿಸಿದೆ.
ಇನ್ನು ಆರ್ ಬಿಐ ಬಿಡುಗಡೆ ಮಾಡಿರುವ ಮಾಹಿತ ಪ್ರಕಾರ ರುಪಾಯಿ ಮೌಲ್ಯದಲ್ಲಿಯೂ ಕೂಡ ಚೇತರಿಕೆ ಕಂಡುಬಂದಿದ್ದು, ಪ್ರಸ್ತುತ ರುಪಾಯಿ ಮೌಲ್ಯ 67.20ಗೇರಿದೆ. ವಾರ್ಷಿಕ ಆರ್ಥಿಕ ಅಭಿವೃದ್ಧಿ ಅಂಕಿಅಂಶಗಳ ಪ್ರಕಾರ 2014-15ರಲ್ಲಿ ಭಾರತದ ಜಿಡಿಪಿ ಶೇ.7.2ರಷ್ಟು ಏರಿಕೆಯಾಗಿತ್ತು. ಕ್ರಮೇಣ ತನ್ನ ಅಭಿವೃದ್ಧಿಯನ್ನು ಮುಂದುವರೆಸಿರುವ ಭಾರತ ಇದೀಗ 2015-16ರಲ್ಲಿ 7.6ಕ್ಕೇರಿಸಿಕೊಂಡಿತ್ತು. ಇದೀಗ ಬಿಡುಗಡೆಯಾಗಿರುವ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ 7.9ಕ್ಕೇರಿಕೆ ಯಾಗಿದೆ ಎಂದು ಹೇಳಲಾಗುತ್ತಿದೆ.
ವಲಯಾಧಾರಿತ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿತ್ತ ಮತ್ತು ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವಾವಲಯದಲ್ಲಿ ಶೇ.10.3ರಷ್ಟು, ತಯಾರಿಕಾ ವಲಯ 9.3ರಷ್ಟು, ವಾಣಿಜ್ಯ, ಹೊಟೆಲ್, ಸಂಚಾರ, ಸಂಹವನ ಮತ್ತು ಇತರೆ ಪ್ರಸಾರ ಸಂಬಂಧಿತ ಸೇವಾವಲಯಗಳಲ್ಲಿ ಶೇ9ರಷ್ಟು ಮತ್ತು ಗಣಿ ಮತ್ತು ಕ್ವಾರಿ ವಲಯದಲ್ಲಿ ಶೇ.1.1ರಷ್ಟು ಅಭಿವೃದ್ಧಿ ಕಂಡುಬಂದಿದೆ ಸಿಎಸ್ ಒ ತಿಳಿಸಿದೆ.
Advertisement