ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡುಬಂದಿದ್ದು, 698.86 ಅಂಕಗಳ ಭಾರೀ ನಷ್ಟದೊಂದಿಗೆ 27,344.85 ಅಂಕಗಳಲ್ಲಿ ಮುಕ್ತಾಯಗೊಂಡಿದೆ. ಸೆನ್ಸೆಕ್ಸ್ ಮಟ್ಟಿಗೆ ಇದು ಈ ವರ್ಷ ಜೂನ್ 29ರ ಬಳಿಕ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ.
ಇನ್ನು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 229.45 ಅಂಕಗಳ ನಷ್ಟದೊಂದಿಗೆ(ಶೇ.2.69) ದಿನದ ವಹಿವಾಟನ್ನು 8,296.30 ಅಂಕಗಳೊಂದಿಗೆ ಅಂತ್ಯಗೊಂಡಿದೆ.
ಸೆನ್ಸೆಕ್ಸ್ ಇಂದು ದಿನದ ವಹಿವಾಟಿನ ನಡುವಿನ ಕನಿಷ್ಠ ಮಟ್ಟವಾಗಿ 740.50 ಅಂಕಗಳ ನಷ್ಟದೊಂದಿಗೆ 26,777.18 ಅಂಕಗಳ ಮಟ್ಟಕ್ಕೆ ಕುಸಿದಿದ್ದರೆ, ನಿಫ್ಟಿ ಸೂಚ್ಯಂಕ ಕಂಡ ತಳಮಟ್ಟ 8,284.95 (ನಷ್ಟ 240.80 ಅಂಕ).
ಇಂದು ವಹಿವಾಟು ನಡೆಸಿದ ಷೇರುಗಳ ಪೈಕಿ 2,223 ಷೇರುಗಳು ಹಿನ್ನಡೆಗೆ ಗುರಿಯಾದವು; ಕೇವಲ 460 ಷೇರುಗಳು ಮಾತ್ರವೇ ಮುನ್ನಡೆ ಕಂಡವು. 147 ಷೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. ಪ್ರತೀ ಒಂದು ಷೇರು ಮುನ್ನಡೆಗೆ ವಿರುದ್ಧವಾಗಿ ನಾಲ್ಕು ಷೇರುಗಳು ಬಿದ್ದದ್ದು ಇಂದಿನ ವಿಶೇಷ.
ಬಿಎಸ್‌ಇ ಯಲ್ಲಿ ಇಂದು ನಡೆದ ವಹಿವಾಟಿನ ಪ್ರಮಾಣ 3,450.15 ಕೋಟಿ ರು. ನಿನ್ನೆಯ ದಿನ ನಡೆದಿದ್ದ ವಹಿವಾಟು 3,737.42 ಕೋಟಿ ರು.