ಲಂಡನ್: ನಕಲಿ ಸುದ್ದಿ ಪ್ರಕಟಿಸುವ ಮತ್ತು ದ್ವೇಷಪೂರಿತ ಮಾತುಗಳನ್ನು ಹರಡುವ ಸುದ್ದಿ ತಾಣಗಳಲ್ಲಿ ತಮ್ಮ ಸಂಸ್ಥೆಯ ಜಾಹಿರಾತು ಮೂಡುವುದನ್ನು ತಡೆಯಲು ವೊಡಾಫೋನ್ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.
ಬುಧವಾರ ದ ಟೈಮ್ಸ್ ನಲ್ಲಿ ಮೂಡಿರುವ ವರದಿಯ ಪ್ರಕಾರ, ದ್ವೇಷಪೂರಿತ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಪ್ರಕಟಿಸುವ ಜಾಲತಾಣಗಳಿಗೆ ತಮ್ಮ ಜಾಹಿರಾತು ಹೋಗದಂತೆ ತಡೆಯಲು ವೊಡಾಫೋನ್ ಹೊಸ ನಿಯಮಗಳನ್ನು ಹಾಕಿಕೊಂಡಿದೆ.
"ದ್ವೇಷಪೂರಿತ ಭಾಷಣ ಮತ್ತು ನಕಲಿ ಸುದ್ದಿಗಳು, ಸಮುದಾಯಗಳನ್ನು ಬೆಸೆಯುವ ಗೌರವ ಮತ್ತು ನಂಬಿಕೆಯ ತತ್ವಗಳಿಗೆ ವಿರುದ್ಧ" ಎಂದು ವೊಡಾಫೋನ್ ಸಿಇಒ ವಿಟ್ಟೋರಿಯೋ ಕೊಲವೊ ಹೇಳಿದ್ದಾರೆ.
"ನಮ್ಮ ಸಂಸ್ಥೆಯ ಜಾಹಿರಾತು ಅಂತಹ ನಿಂದನಾತ್ಮಕ ನಕಲಿ ಸುದ್ದಿಗಳನ್ನು ಹೊತ್ತ ಜಾಲತಾಣಗಳೊಂದಿಗೆ ಸಹಯೋಗ ಹೊಂದುವುದನ್ನು ನಾವು ಸಹಿಸುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
ವೊಡಾಫೋನ್ ವರ್ಷಕ್ಕೆ ಸುಮಾರು ೭೫೦ಮಿಲಿಯನ್ ಪೌಂಡ್ ಗಳನ್ನು ಜಾಹಿರಾತಿಗೆಂದೇ ವ್ಯಯಿಸುತ್ತದೆ.