

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 100 ರೂಪಾಯಿ ವರೆಗಿನ ತೆರಿಗೆ ಬಾಕಿಯನ್ನು ವಜಾ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಶುಕ್ರವಾರ ಈ ಬಗ್ಗೆ ಲೋಕಸಭೆ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು, 100 ರು.ವರೆಗಿನ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 21.54 ಲಕ್ಷ ತೆರಿಗೆ ಪಾವತಿದಾರರ ಬಾಕಿಯನ್ನು ಕೇಂದ್ರ ಸರ್ಕಾರ ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದರು. ಈ ಖಾತೆಗಳ ನಿರ್ವಹಣೆ ದುಬಾರಿ ಮತ್ತು ಕಷ್ಟಸಾಧ್ಯವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ಈ ರೀತಿ ತೆರಿಗೆ ವಜಾ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬೃಹತ್ ನಷ್ಟವೇನೂ ಆಗುವದಿಲ್ಲ. ಕೇವಲ 6.4 ಕೋಟಿ ಹಣ ಖೋತಾ ಆಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.
ಈ ಖಾತೆಗಳ ತೆರಿಗೆ ಬಾಕಿ ವಜಾ ಮಾಡುಪುದರಿಂದ ಹೆಚ್ಚಿನ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾತೆದಾರರ ಮೇಲೆ ನಿಗಾ ವಹಿಸಲು ನೆರವಾಗುತ್ತದೆ ಮತ್ತು ತೆರೆಗಿ ವಸೂಲಾತಿ ಕಾರ್ಯಕ್ಕೂ ಉತ್ತೇಜನ ಸಿಗುತ್ತದೆ ಎಂದು ಸಂತೋಷ್ ಗಂಗ್ವಾರ್ ಅಭಿಪ್ರಾಯಪಟ್ಟಿದ್ದಾರೆ.