'ಹೀಗಾದರೆ, ಶೇ.99ರಷ್ಟು ಭಾರತೀಯರು ಕೆಲಸಕ್ಕೇ ಬರುವುದಿಲ್ಲ': BSC CEO ಶಾಕಿಂಗ್ ಹೇಳಿಕೆ

ಮುಂಬೈ: ಭಾರತೀಯ ಕೆಲಸದ ಸಂಸ್ಕೃತಿಯ ಬಗ್ಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವ ಉದ್ಯಮಿಯೊಬ್ಬರು 'ಆರ್ಥಿಕ ಭದ್ರತೆ ಖಾತರಿಯಾದರೆ, ಶೇ.99ರಷ್ಟು ಭಾರತೀಯರು ಮರುದಿನವೇ ಕೆಲಸಕ್ಕೆ ಬರುವುದಿಲ್ಲ' ಎಂದು ಹೇಳಿದ್ದಾರೆ.
ಭಾರತೀಯ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಖಾತರಿಯ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ದೇಶದ ಪ್ರಮುಖ ಸಂಸ್ಥೆಯೊಂದರ ಸಿಇಒ ಈ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕ ಕ್ಷೇತ್ರದಲ್ಲಿ ತಮ್ಮ ನೇರವಾದ ಹೇಳಿಕೆಗಳು ಮತ್ತು ಟೀಕೆಗಳಿಂದಲೇ ಖ್ಯಾತಿಗಳಿಸಿರುವ ಬಾಂಬೇ ಶೇವಿಂಗ್ ಕಂಪನಿ ಸಂಸ್ಥೆಯ ಸಿಇಒ ಶಾಂತನು ದೇಶಪಾಂಡೆ, 'ಕೆಲಸಗಾರರ ಆರ್ಥಿಕ ಭದ್ರತೆ ಖಾತರಿಯಾದರೆ ಶೇ.99ರಷ್ಟು ಭಾರತೀಯರು ಮರುದಿನವೇ ಕೆಲಸಕ್ಕೆ ಬರುವುದಿಲ್ಲ' ಎಂದು ಟೀಕಿಸಿದ್ದಾರೆ.
ಸಂಪತ್ತಿನ ವಿಭಜನೆಯ ಬಗ್ಗೆ ಚರ್ಚಿಸುವಾಗ ಸುದೀರ್ಘ ಪೋಸ್ಚ್ ಮಾಡಿರುವ ದೇಶಪಾಂಡೆ, 'ಕೇವಲ 2,000 ಶ್ರೀಮಂತ ಕುಟುಂಬಗಳು ಭಾರತದ ಸಂಪತ್ತಿನ ಶೇ.18ರಷ್ಟನ್ನು ನಿಯಂತ್ರಿಸುತ್ತಿವೆ. ದೇಶದ ತೆರಿಗೆಗಳಲ್ಲಿ ಶೇ.1.8% ಕ್ಕಿಂತ ಕಡಿಮೆ ಕೊಡುಗೆ ನೀಡುತ್ತವೆ ಎಂದು ನೇರವಾಗಿಯೇ ಹೇಳಿದ್ದಾರೆ. ಆ ಮೂಲಕ ದೇಶದ ಕಾರ್ಯಪಡೆಯ ವಾಸ್ತವತೆಗಳು, ಸಂಪತ್ತಿನ ಅಸಮಾನತೆಗಳು ಮತ್ತು ಶತಮಾನಗಳಿಂದ ಆರ್ಥಿಕತೆಯನ್ನು ನಡೆಸುತ್ತಿರುವ ಆಳವಾಗಿ ಬೇರೂರಿರುವ "ಕಷ್ಟಪಟ್ಟು ಕೆಲಸ ಮಾಡಿ" ಎಂಬ ನೀತಿಯನ್ನು ಹೇಳುವ ಮನಸ್ಥಿತಿಗಳಿಗೆ ಟಾಂಗ್ ನೀಡಿದ್ದಾರೆ.
ಶಾಂತನು ದೇಶಪಾಂಡೆ ಅವರು ಇತ್ತೀಚಿನ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಭಾರತೀಯ ಕೆಲಸದ ಸಂಸ್ಕೃತಿಯ ಬಗ್ಗೆ ತೀಕ್ಷ್ಣವಾದ ಪ್ರತಿಬಿಂಬವನ್ನು ಹಂಚಿಕೊಂಡಿದ್ದಾರೆ. 'ಕೆಲಸಗಾರರ ಆರ್ಥಿಕ ಭದ್ರತೆಯನ್ನು ಖಾತರಿಪಡಿಸಿದರೆ, ಶೇ.99ರಷ್ಟು ಜನರು ಮರುದಿನದಿಂದಲೇ ಕೆಲಸಕ್ಕೆ ಬರುವುದಿಲ್ಲ. ಬಹುಪಾಲು ಜನರು ತಮ್ಮ ಕುಟುಂಬಗಳನ್ನು ಪೋಷಿಸಲು ನಿರಂತರವಾಗಿ ಶ್ರಮಿಸುತ್ತಿರುವಾಗ, ಕೆಲವರು ಮಾತ್ರ ಅಸಮಾನವಾಗಿ ಪ್ರಯೋಜನ ಪಡೆಯುವ ವ್ಯವಸ್ಥೆಯ ನೈತಿಕತೆಯನ್ನು ದೇಶಪಾಂಡೆ ಪ್ರಶ್ನಿಸಿದ್ದಾರೆ.
ಅಂತೆಯೇ ಕೆಲಸದ ಐತಿಹಾಸಿಕ ಪಾತ್ರವನ್ನು ಪ್ರತಿಬಿಂಬಿಸುತ್ತಾ ಅವರು, "250ಕ್ಕೂ ಅಧಿಕ ವರ್ಷಗಳಿಂದ, ನಾವು ಮುಂಜಾನೆಯಿಂದ ಸಂಜೆಯವರೆಗೆ, ಆಗಾಗ್ಗೆ ವಾರಗಳವರೆಗೆ, ಸಂಬಳದ ಭರವಸೆಯೊಂದಿಗೆ ದಣಿವರಿಯಿಲ್ಲದೆ ಕೆಲಸ ಮಾಡುವ ರೂಢಿಯನ್ನು ಒಪ್ಪಿಕೊಂಡಿದ್ದೇವೆ. ರಾಷ್ಟ್ರಗಳು ಇದರ ಮೇಲೆ ನಿರ್ಮಿಸಲ್ಪಟ್ಟಿವೆ, ಆದ್ದರಿಂದ ನಾವು ಅದನ್ನು ಮಾಡುತ್ತೇವೆ. ಆದಾಗ್ಯೂ, "ನಮಗೆ ಬೇರೆ ದಾರಿ ತಿಳಿದಿಲ್ಲ" ಎಂದು ತಮ್ಮಂತಹ ಇಕ್ವಿಟಿ ಬಿಲ್ಡರ್‌ಗಳು ಸಹ "ಕಷ್ಟಪಟ್ಟು ಕೆಲಸ ಮಾಡಿ ಮೇಲಕ್ಕೆ ಏರಿ" ಎಂಬ ನಿರೂಪಣೆಯನ್ನು ಶಾಶ್ವತಗೊಳಿಸುವ ತಪ್ಪಿತಸ್ಥರು ಎಂದು ಅವರು ಕಿಡಿಕಾರಿದ್ದಾರೆ.
ಶಾಂತನು ದೇಶಪಾಂಡೆ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ಓರ್ವ ಬಳಕೆದಾರ, 'ಉದ್ಯೋಗಗಳು ಆರ್ಥಿಕ ಸ್ಥಿರತೆಗಿಂತ ಹೆಚ್ಚಿನದನ್ನು ನೀಡುತ್ತವೆ ಎಂದು ವಾದಿಸಿದರೆ, ಮತ್ತೋರ್ವ 'ಉದ್ಯೋಗವು ಮನಸ್ಸನ್ನು ಸಕ್ರಿಯವಾಗಿರಿಸುತ್ತದೆ. ಇಲ್ಲದಿದ್ದರೆ, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕ್ರೋಲ್ ಮಾಡುವುದರಲ್ಲಿ ತಮ್ಮ ಸಮಯ ವ್ಯರ್ಥ ಮಾಡಬಹುದು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



