

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಕುಸಿತ ಮುಂದುವರೆದಿದ್ದು, ಗುರುವಾರ ಕೂಡ ಷೇರುಮಾರುಕಟ್ಟೆ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ.
ಹೌದು.. ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ತನ್ನ ಗುರುವಾರ ಕೂಡ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.68ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಶೇ.0.69ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 528.28 ಅಂಕಗಳ ಇಳಿಕೆಯೊಂದಿಗೆ 77,620.21 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 162.45 ಅಂಕಗಳ ಇಳಿಕೆಯೊಂದಿಗೆ 23,526.50 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಮೆಟಲ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತವಾಗಿದ್ದು, ಎಫ್ಎಂಸಿಜಿ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಶ್ರೀರಾಮ್ ಫೈನಾನ್ಸ್, ಒಎನ್ಜಿಸಿ, ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಬಿಪಿಸಿಎಲ್ ಸಂಸ್ಥೆಯ ಷೇರುಗಳು ನಷ್ಟ ಕಂಡಿದೆ.
ಅಂತೆಯೇ HUL, ಬ್ರಿಟಾನಿಯಾ ಇಂಡಸ್ಟ್ರೀಸ್, ನೆಸ್ಲೆ ಇಂಡಿಯಾ, ಮಹೀಂದ್ರ ಅಂಡ್ ಮಹೀಂದ್ರ, ಬಜಾಜ್ ಆಟೋ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.