

ನವದೆಹಲಿ: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಚಾಕೊಲೇಟ್ ಪ್ಯಾಕೆಟ್ ಹಿಡಿದ ಬೆನ್ನಲ್ಲೇ ಭಾರತದಲ್ಲಿ ಸಂಸ್ಥೆಯೊಂದರ ಷೇರುಗಳ ಮೌಲ್ಯ ಭಾರಿ ಹೆಚ್ಚಳ ಕಂಡಿದೆ.
ಹೌದು.. ಇಟಲಿ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಸಂಸ್ಥೆಯ ಮೆಲೋಡಿ ಚಾಕ್ಲೆಟ್ ಗಳನ್ನು ಗಿಫ್ಟ್ ಮಾಡಿದ್ದು ಈ ಬೆಳವಣಿಗೆ ಬೆನ್ನಲ್ಲೇ ಪಾರ್ಲೆ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಏರಿಕೆಯಾಗಿದೆ.
ಮೂಲಗಳ ಪ್ರಕಾರ ಪಾರ್ಲೆ ಇಂಡಸ್ಟ್ರೀಸ್ ನ ಷೇರುಗಳ ಮೌಲ್ಯ ಬರೊಬ್ಬರಿ ಶೇ.5ರಷ್ಟು ಏರಿಕೆ ಕಂಡಿದ್ದು, 5 ರೂಗಳಷ್ಟಿದ್ದ ಪಾರ್ಲೆ ಸಂಸ್ಥೆಯ ಷೇರು ಮೌಲ್ಯ ಇದೀಗ 5.25ಕ್ಕೆ ಏರಿಕೆಯಾಗಿ ವಹಿವಾಟು ನಡೆಸುತ್ತಿದೆ.
ಬರೊಬ್ಬರಿ 8 ಲಕ್ಷ ಮಂದಿ ಷೇರು ಖರೀದಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಚಾಕ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ ಬೆನ್ನಲ್ಲೇ ಲಕ್ಷಾಂತರ ಹೂಡಿಕೆದಾರರು ಪಾರ್ಲೆ ಇಂಡಸ್ಟ್ರೀಸ್ ಸಂಸ್ಛೆಯ ಷೇರು ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಸುಮಾರು 8 ಲಕ್ಷ ಮಂದಿ ಹೂಡಿಕೆದಾರರು ಪಾರ್ಲೆ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋ ವೈರಲ್
ಪ್ರಧಾನಿ ನರೇಂದ್ರ ಮೋದಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಪಾರ್ಲೆ ಸಂಸ್ಥೆಯ ಮೆಲೋಡಿ ಹೆಸರಿನ ಚಿಕ್ಕ ಚಿಕ್ಕ ಚಾಕಲೇಟ್‌ಗಳ ಸಿಹಿ ಗಿಫ್ಟ್ ನೀಡಿದ್ದಾರೆ. ಇಟಲಿ ಪ್ರಧಾನಿ ಮೆಲೋನಿ ಅವರು ಪ್ರಧಾನಿ ಭಾರತದ ಮೋದಿ ತಮಗೆ ಚಾಕೊಲೇಟ್ ನೀಡುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೇವಲ 27 ಸೆಕೆಂಡುಗಳ ಮುದ್ದಾದ ವಿಡಿಯೋ ಜೊತೆಗೆ ‘ಗಿಫ್ಟ್‌ಗೆ ಧನ್ಯವಾದಗಳು ಪ್ರಧಾನಿ ಮೋದಿ’ ಅಂತ ಮೆಲೋನಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದಿದೆ.
ಒಂದೇ ವಾರದಲ್ಲಿ ಶೇಕಡಾ 7ರಷ್ಟು ಏರಿಕೆ
ಇಷ್ಟು ಮಾತ್ರವಲ್ಲದೇ ಪಾರ್ಲೆ ಇಂಡಸ್ಟ್ರೀಸ್ ಷೇರುಗಳು ದಿನದ ವಹಿವಾಟಿನಲ್ಲಿ ಶೇ.5 ರಷ್ಟು ಏರಿಕೆಯಾಗಿ ರೂ.5.25 ಕ್ಕೆ ತಲುಪಿದೆ. ಕಳೆದ ಒಂದು ವಾರದಲ್ಲಿ ಷೇರುಗಳು ಸುಮಾರು ಶೇ.7 ರಷ್ಟು ಏರಿಕೆ ಕಂಡಿವೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಇಟಲಿಗೆ ಮೆಲೋಡಿ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದ ಸುದ್ದಿ ಚಿಲ್ಲರೆ ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ, ಇದರಿಂದಾಗಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳು ತೀವ್ರವಾಗಿ ಏರಿಕೆಯಾಗಿವೆ.
ಆದರೆ ಟಾಫಿ ಬ್ರಾಂಡ್‌ಗೆ ಯಾವುದೇ ವ್ಯವಹಾರ ಸಂಬಂಧವಿಲ್ಲ. ಪಾರ್ಲೆ ಪ್ರಾಡಕ್ಟ್ಸ್ ಮೆಲೋಡಿ ಟಾಫಿ ಉತ್ಪಾದಿಸುವ ಸಂಸ್ಥೆಯಾಗಿದೆ ಎನ್ನಲಾಗಿದೆ.
ಪಾರ್ಲೆ ಮೆಲೋಡಿ ಪಾರ್ಲೆ ಪ್ರಾಡಕ್ಟ್ ನ ಸ್ವತ್ತು
ಅಂದಹಾಗೆ ಪಾಲ್ಲೆ ಇಂಡಸ್ಟ್ರೀಸ್ ಗೂ ಮತ್ತು ಪಾರ್ಲೆ ಮೆಲೋಡಿ ಚಾಕ್ಲೆಟ್ ಗೂ ಸಂಬಂಧ ಇಲ್ಲ ಎನ್ನಲಾಗಿದೆ. ಪಾರ್ಲೆ-ಜಿ ಬಿಸ್ಕತ್ತುಗಳು ಮತ್ತು ಹಲವಾರು ಮಿಠಾಯಿ ವಸ್ತುಗಳಿಗೆ ಹೆಸರುವಾಸಿಯಾದ ಪಾರ್ಲೆ ಪ್ರಾಡಕ್ಟ್ಸ್‌ನಿಂದ ಮೆಲೋಡಿ ಟಾಫಿಗಳನ್ನು ಉತ್ಪಾದಿಸಲಾಗುತ್ತದೆ. ಪಾರ್ಲೆ ಇಂಡಸ್ಟ್ರೀಸ್ ಸಂಸ್ಥೆ ಮೂಲಸೌಕರ್ಯ, ರಿಯಲ್ ಎಸ್ಟೇಟ್ ಮತ್ತು ಕಾಗದದ ತ್ಯಾಜ್ಯ ಮರುಬಳಕೆಯಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.
ಧನ್ಯವಾದ ಹೇಳಿದ ಸಂಸ್ಥೆ
ಅತ್ತ ಪಾರ್ಲೆ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆಯಾಗುತ್ತಲೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾರ್ಲೆ ಸಂಸ್ಥೆ ಧನ್ಯವಾದ ಹೇಳಿದೆ. ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಂಸ್ಥೆ, 'ಜಾಗತಿಕ ವೇದಿಕೆಯಲ್ಲಿ ನಮ್ಮ ಸಂಸ್ಥೆಯ ಪ್ರಾಡಕ್ಟ್ ಅನ್ನು ತೆಗೆದುಕೊಂಡು ಹೋಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇವೆ. ಗಡಿಯಾಚೆಗೂ ನಮ್ಮ ಸಂಸ್ಥೆಯ ಉತ್ಪನ್ನಗಳನ್ನು ನೋಡಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
Advertisement