'ಭಾವನೆಗಳಿಗಿಂತ ದೊಡ್ಡದು ಯಾವುದೂ ಇಲ್ಲ'.. ಸಂಭಾಷಣೆ ಬದಲಿಸಲು 'ಆದಿಪುರುಷ್' ಚಿತ್ರತಂಡ ನಿರ್ಧಾರ!!

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿ ಪುರುಷ್ ಚಿತ್ರ ಬಿಡುಗಡೆಯಾದ ಬಳಿಕ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಚಿತ್ರತಂಡ ಚಿತ್ರದಲ್ಲಿನ ಸಂಭಾಷಣೆಗಳನ್ನು ಬದಲಿಸುವ ಕುರಿತು ಮಾತನಾಡಿದೆ.
ಆದಿಪುರುಷ್
ಆದಿಪುರುಷ್

ಮುಂಬೈ: ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿ ಪುರುಷ್ ಚಿತ್ರ ಬಿಡುಗಡೆಯಾದ ಬಳಿಕ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಚಿತ್ರತಂಡ ಚಿತ್ರದಲ್ಲಿನ ಸಂಭಾಷಣೆಗಳನ್ನು ಬದಲಿಸುವ ಕುರಿತು ಮಾತನಾಡಿದೆ.

ಶುಕ್ರವಾರ ಬಿಡುಗಡೆಯಾದ ರಾಮಾಯಣ ಕುರಿತ ಕಥಾಹಂದರದ ಆದಿ ಪುರುಷ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಮೊದಲ ದಿನ ಕಲೆಕ್ಷನ್ 140 ಕೋಟಿ ರೂ ದಾಟಿದೆ. 500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಆದಿಪುರುಷ ಶುಕ್ರವಾರ ಬಿಡುಗಡೆಯಾದ ಮೊದಲ ದಿನವೇ 140 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಯಾರಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿನ ಸಂಭಾಷಣೆಗಳ ಕುರಿತು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಮಾಹಿತಿ ನೀಡಿರುವ ಚಿತ್ರತಂಡ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗಳನ್ನು ಬದಲಿಸುವುದಾಗಿ ಹೇಳಿದೆ.

ಈ ಕುರಿತು ಮಾತನಾಡಿರುವ ಆದಿ ಪುರುಷ್ ಚಿತ್ರದ ಹಿಂದಿ ಅವತರಣಿಕೆಯ ಸಂಭಾಷಣಾ ಬರಹಗಾರ ಮನೋಜ್ ಮುಂತಾಶಿರ್ ಶುಕ್ಲಾ, ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದು, ರಾಮಾಯಣದ ಪುನರಾವರ್ತನೆಯ ಹಿಂದಿ ಸಂಭಾಷಣೆಗಳು ಮತ್ತು ಹಾಡುಗಳನ್ನು ಬರೆದಿರುವ ಶುಕ್ಲಾ, ಈ ವಾರದೊಳಗೆ ತಿದ್ದುಪಡಿ ಮಾಡಿದ ಸಾಲುಗಳನ್ನು ಚಿತ್ರಕ್ಕೆ ಸೇರಿಸಲಾಗುವುದು ಎಂದು ಹೇಳಿದರು.

'...ನನಗೆ ನಿಮ್ಮ ಭಾವನೆಗಳಿಗಿಂತ ದೊಡ್ಡದು ಯಾವುದೂ ಇಲ್ಲ. ನನ್ನ ಡೈಲಾಗ್‌ಗಳ ಪರವಾಗಿ ನಾನು ಲೆಕ್ಕವಿಲ್ಲದಷ್ಟು ವಾದಗಳನ್ನು ನೀಡಬಲ್ಲೆ, ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ನಿಮಗೆ ನೋವುಂಟು ಮಾಡುವ ಕೆಲವು ಡೈಲಾಗ್‌ಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದೇವೆ ಮತ್ತು ಅವುಗಳನ್ನು ಈ ವಾರ ಚಿತ್ರಕ್ಕೆ ಸೇರಿಸಲಾಗುವುದು ಎಂದು ಶುಕ್ಲಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾದ ಆದಿಪುರುಷ, ರಾಘವ್ (ರಾಮ್) ಪಾತ್ರದಲ್ಲಿ ಪ್ರಭಾಸ್, ಜಾನಕಿ (ಸೀತಾ) ಆಗಿ ಕೃತಿ ಸನೋನ್ ಮತ್ತು ಲಂಕೇಶ್ (ರಾವಣ) ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಓಂ ರಾವುತ್ ನಿರ್ದೇಶಿಸಿದ ಮತ್ತು ಟಿ-ಸೀರೀಸ್ ನಿರ್ಮಿಸಿದ, ದೊಡ್ಡ-ಬಜೆಟ್ ಬಹುಭಾಷಾ ಸಾಹಸಗಾಥೆ ಆದಿಪುರುಷ ತನ್ನ ಕಳಪೆ ವಿಎಫ್‌ಎಕ್ಸ್ ಮತ್ತು ಆಡುಮಾತಿನ ಸಂಭಾಷಣೆಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. 'ಲಂಕಾ ದಹನ್' ಸೀಕ್ವೆನ್ಸ್‌ನಲ್ಲಿ ಭಗವಾನ್ ಹನುಮಾನ್ ಅವರ ಸಂಭಾಷಣೆಗಳಿಗಾಗಿ ಶುಕ್ಲಾ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com