
ಮುಂಬೈ: 'ತಮಿಳಿನಿಂದ ಕನ್ನಡ ಹುಟ್ಟಿತು' ಎಂಬ ತಮಿಳುನಟ ಕಮಲ್ ಹಾಸನ್ ಹೇಳಿಕೆ ವ್ಯಾಪಕ ವಿವಾದಕ್ಕೀಡಾಗಿರುವಂತೆಯೇ ಕನ್ನಡದ ಖ್ಯಾತ ವರನಟ ಡಾ.ರಾಜ್ ಕುಮಾರ್ ಕುರಿತು ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಲಿಗೆ ಹರಿಬಿಟ್ಟಿದ್ದಾರೆ.
ಹೌದು.. ನಟ ಕಮಲ್ ಹಾಸನ್ ಬಳಿಕ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕನ್ನಡಿಗರನ್ನು ಕೆಣಕಿದ್ದು, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಡಾ ರಾಜ್ ಕುಮಾರ್ ಸ್ಟಾರ್ ಆದರು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, 'ಮೊದಲೆಲ್ಲ ಇಡೀ ದಕ್ಷಿಣದ ಭಾಷೆಗಳಾದಂತಹ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದರು.
ಕಾಲಿವುಡ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ಎನ್‌ಟಿ ರಾಮರಾಮ್ ಮತ್ತು ಕನ್ನಡದ ರಾಜ್‌ಕುಮಾರ್ ನಂತಹ ನಟರುಗಳು 70 ಮತ್ತು 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ಭಾರೀ ಜನಪ್ರಿಯತೆ ಗಳಿಸಿದರು' ಎಂದು ಹೇಳಿದರು.
'90ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಿಂದ ಐದು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಆಗ ದಕ್ಷಿಣದ ಸಿನಿಮಾ ನಿರ್ದೇಶಕರು ಬಚ್ಚನ್ ಅವರ ಸ್ಟೈಲ್‌ನಲ್ಲಿ ಮಸಾಲಾ ಚಿತ್ರಗಳನ್ನು ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಇದೇ ರೀತಿ ದಕ್ಷಿಣ ಸಿನಿ ತಾರೆಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು, ಅದು ಇಂದಿಗೂ ಮುಂದುವರೆದಿದೆ' ಎಂದು ಆರ್‌ಜಿವಿ ಹೇಳಿಕೊಂಡಿದ್ದಾರೆ.
ಅಂದಹಾಗೆ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗಿಂತಲೂ ಹೆಚ್ಚಾಗಿ ವಿವಾದ್ಮತಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ನೀಲಿಚಿತ್ರತಾರೆ ಮಿಯಾಮಾಲ್ಕೋವಾರೊಂದಿಗೆ ಸಿನಿಮಾ ಮಾಡಿ ವಿವಾದಕ್ಕೀಡಾಗಿದ್ದ ರಾಮ್ ಗೋಪಾಲ್ ವರ್ಮಾರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ʻಕೆಜಿಎಫ್2ʼ ರಿಲೀಸ್ ಆದಾಗಲೇ "ಕೆಜಿಎಫ್2 ಸಿನಿಮಾ ಯಾರಿಗೂ ಇಷ್ಟವಾಗಲಿಲ್ಲ" ಎಂದು ಹೇಳಿಕೆ ಕೊಟ್ಟು ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಂತೆಯೇ ಇತ್ತೀಚೆಗೆ ʻಕಮಲ್ ಹಾಸನ್ʼ ಅವರ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಅಂತ ಬೆದರಿಕೆ ಹಾಕುವುದು ಹೊಸ ರೀತಿಯ ಗೂಂಡಾಗಿರಿʼ ಎಂದು ಟ್ವೀಟ್ ಮಾಡಿ ಡಿಲೀಟ್ ಮಾಡಿ ಸುದ್ದಿಯಾಗಿದ್ದರು. ಇದೀಗ ʻಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜ್‌ಕುಮಾರ್ ಅವರು ಫೇಮಸ್ ಆಗಿದ್ದಾರೆʼ ಎಂಬ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
Advertisement