
ಮುಂಬೈ: ಅನಿಮಲ್, ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಮತ್ತು ನಟ ಪ್ರಭಾಸ್ (Prabhas) ಅವರ ಬಹು ನಿರೀಕ್ಷಿತ ಸ್ಪಿರಿಟ್ (Spirit)ಚಿತ್ರದ ಕಥೆ ಲೀಕ್ ಆಗಿದ್ದು, ಅದೂ ಬಾಲಿವುಡ್ ನ ಖ್ಯಾತ ನಟಿಯೊಬ್ಬರೇ ಕಥೆಯನ್ನು ಲೀಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು.. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸ್ಪಿರಿಟ್ ಚಿತ್ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಚಿತ್ರ ಒಂದಲ್ಲಾ ಒಂದು ವಿಚಾರಕ್ಕೆ ನಿತ್ಯ ಸುದ್ದಿಗೆ ಗ್ರಾಸವಾಗುತ್ತಿದೆ. ಈ ಹಿಂದೆ ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಾರೆ ಎಂದು ಹೇಳಲಾಗಿತ್ತು.
ಆದರೆ ಬಳಿಕ ಬದಲಾದ ಸನ್ನಿವೇಶದಲ್ಲಿ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರ ಹೋದರು ಎಂದು ಸುದ್ದಿಗಳಾದವು. ಚಿತ್ರದ ಡಬ್ಬಿಂಗ್ ಮತ್ತು ಹಣದ ವಿಚಾರವಾಗಿ ಉಂಟಾದ ಗೊಂದಲದಿಂದಾಗಿ ನಟಿ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ ಅನಿಮಲ್ ಖ್ಯಾತಿಯ ನಟಿ ತ್ರಿಪ್ತಿ ಡಿಮ್ರಿ (Triptii Dimri) ಸ್ಪಿರಿಟ್ ಚಿತ್ರದ ನಾಯಕಿಯಾಗಿ ಆಯ್ಕೆಯಾದರು. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತಮ್ಮ ಸ್ಪಿರಿಟ್ ಚಿತ್ರದ ಹೊಸ ನಾಯಕಿ ಕುರಿತು ವಿಶೇಷ ಟ್ವೀಟ್ ಮಾಡಿ ಮಾಹಿತಿನೀಡಿದ್ದರು.
ಕನ್ನಡ, ತೆಲುಗು ಸೇರಿದಂತೆ ಚಿತ್ರ ಬಿಡುಗಡೆಯಾಗುತ್ತಿರುವ ಎಲ್ಲ ಭಾಷೆಗಳಲ್ಲಿ ನಟಿ ತ್ರಿಪ್ತಿ ಡಿಮ್ರಿ (Triptii Dimri) ಹೆಸರುಗಳನ್ನು ಅಪ್ಲೋಡ್ ಮಾಡುವ ಮೂಲಕ ಇವರೇ ನಮ್ಮ ಚಿತ್ರದ ನಾಯಕಿ ಎಂದು ಘೋಷಣೆ ಮಾಡಿದ್ದರು. ಆ ಮೂಲಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಖಡಕ್ ತಿರುಗೇಟು ನೀಡಿದ್ದಾರೆ ಎಂದು ವರದಿಯಾಗುತ್ತಿತ್ತು. ಈ ಹಗ್ಗಜಗ್ಗಾಟ ನಡುವೆಯೇ ಸ್ಪಿರಿಟ್ ಚಿತ್ರದ ಕಥೆ ಲೀಕ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.
Spirit ಕಥೆ ಲೀಕ್ ಮಾಡಿದ್ರಾ ನಟಿ Deepika Padukone?
ಇನ್ನು 'ಸ್ಪಿರಿಟ್' ಚಿತ್ರದಿಂದ ಹೊರ ನಡೆದ ಬೆನ್ನಲ್ಲೇ ದೀಪಿಕಾ ಪಡುಕೋಣೆ ಅವರು ಚಿತ್ರದ ಕಥೆ ಲೀಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಾಗಿದೆ. ಸ್ಪಿರಿಟ್ ಚಿತ್ರದಲ್ಲಿ ತಮ್ಮ ಬದಲಿಗೆ ತ್ರಿಪ್ತಿ ಡಿಮ್ರಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಕ್ಕೆ ನಟಿ ದೀಪಿಕಾ ಹೊಟ್ಟೆಕಿಚ್ಚಿನಿಂದ ಚಿತ್ರದ ಕಥೆ ಲೀಕ್ ಮಾಡಿದ್ದಾರೆ ಎನ್ನಲಾಗಿದೆ.
ದೀಪಿಕಾ ಪಡುಕೋಣೆ ಅವರು 'ಸ್ಪಿರಿಟ್' ಚಿತ್ರದಿಂದ ಹೊರ ನಡೆದ ಬಳಿಕ ತಮ್ಮ ಆಪ್ತ ವಲಯದಲ್ಲಿ ಕಥೆಯನ್ನು ಸೋರಿಕೆ ಮಾಡಿದ್ದಾರೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪರೋಕ್ಷ ಆರೋಪ ಮಾಡಿದ್ದಾರೆ. ಚಿತ್ರದ ಬೋಲ್ಡ್ ದೃಶ್ಯಗಳು ಮತ್ತು 'ಎ' ಪ್ರಮಾಣ ಪತ್ರದ ಬಗ್ಗೆ ದೀಪಿಕಾ ಅವರ ಆಪ್ತ ವಲಯದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಕಥೆ ಮಾತ್ರವಲ್ಲದೇ ಚಿತ್ರದ ಪ್ರಮುಖ ವಿಷಯಗಳೇ ಸೋರಿಕೆ ಆಗಿದೆ. ಇದರಿಂದ ಸಂದೀಪ್ ಸಿಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಕೊಳಕು PR ಆಟ, ನಂಬಿಕೆ ದ್ರೋಹ.. ಇದೇನಾ ಸ್ತ್ರೀವಾದ?
ಈ ಬಗ್ಗೆ ಸುದೀರ್ಘ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, '‘ನಾನು ಓರ್ವ ಕಲಾವಿದನಿಗೆ ಕಥೆ ಹೇಳುವಾಗ ಸಂಪೂರ್ಣ ನಂಬಿಕೆ ಇಡುತ್ತೇನೆ. ಯಾರಿಗೂ ಕಥೆಯನ್ನು ಹೇಳಬಾರದು ಎಂಬ ಒಪ್ಪಂದ ಇರುತ್ತದೆ. ಆದರೆ ನೀವು ನಿಯಮ ಮುರಿಯುವ ಮೂಲಕ ನಿಮ್ಮ ತನವನ್ನು ನೀವು ಬಹಿರಂಗಪಡಿಸಿದಂತಾಗಿದೆ. ಕಿರಿಯ ಕಲಾವಿದರನ್ನು ಕೆಳಕ್ಕೆ ಹಾಕಿದ್ದಲ್ಲದೆ, ನನ್ನ ಕಥೆಯನ್ನು ರಿವೀಲ್ ಮಾಡಿದ್ದೀರಿ’ ಎಂದು ಸಂದೀಪ್ ಟ್ವೀಟ್ ಮಾಡಿದ್ದಾರೆ.
ಮುಂದವರೆದು, ‘ಇದು ನಿಮ್ಮ ಸ್ತ್ರೀವಾದದ ಅರ್ಥವೇ? ಒಬ್ಬ ನಿರ್ದೇಶಕನಾಗಿ ನಾನು ಸಾಕಷ್ಟು ಶ್ರಮ ಹಾಕಿರುತ್ತೇನೆ. ನಿಮಗೆ ಇದು ಅರ್ಥ ಆಗಿಲ್ಲ, ಆಗುವುದೂ ಇಲ್ಲ. ಮುಂದಿನ ಬಾರಿ ಪೂರ್ತಿ ಕಥೆಯನ್ನೇ ಹೇಳಿ. ನನಗೆ ಏನೂ ಫರಕ್ ಆಗುವದಿಲ್ಲ’ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪರೋಕ್ಷವಾಗಿ ದೀಪಿಕಾ ಪಡುಕೋಣೆ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಅಭಿಮಾನಿಗಳ ಆಕ್ರೋಶ
ಇನ್ನು ಸಂದೀಪ್ ರೆಡ್ಡಿ ವಂಗಾ ಟ್ವೀಟ್ ವಿಚಾರದ ಬೆನ್ನಲ್ಲೇ ನಟಿ ದೀಪಿಕಾ ಪಡುಕೋಣೆ ವಿರುದ್ಧ ನಟ ಪ್ರಭಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರು ಕಾಮೆಂಟ್ ಬಾಕ್ಸ್ನಲ್ಲಿ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಈ ಬಗ್ಗೆ ದೀಪಿಕಾ ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
Advertisement