ಐಪಿಎಲ್ ವಿಡಿಯೋ ವಿವಾದ: 'ಇನ್ನು ಸಾಕು ಮಾಡಿ'; ನಟಿ Nushrratt Bharuccha ಅಳಲು

ವೈರಲ್ ವಿಡಿಯೋದಲ್ಲಿದ್ದ ಹಿನ್ನಲೆ ಧ್ವನಿಯನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಈ ಕುರಿತು ಗುರುವಾರ ಇನ್‌ಸ್ಟಾಗ್ರಾಂ ಸ್ಟೋರಿಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Nushrratt Bharuccha shares emotional toll of viral IPL video
ನಟಿ ನುಶ್ರತ್ ಭರುಚ್ಚಾ
Updated on

ಮುಂಬೈ: ಐಪಿಎಲ್ 2026ರ ಫೈನಲ್ ಪಂದ್ಯದ ವೇಳೆ ಆರ್ ಸಿಬಿ ಗೆದ್ದ ಬಳಿಕ ಸಂಭ್ರದ ವಿಡಿಯೋ ಹಂಚಿಕೊಂಡು ವಿವಾದಕ್ಕೀಡಾಗಿದ್ದ ನಟಿ ನುಶ್ರತ್ ಭರುಚ್ಚಾ ಇದೀಗ ತಮ್ಮ ವಿರುದ್ಧದ ಟ್ರೋಲ್ ಗಳನ್ನು ಸಾಕುಮಾಡಿ ಎಂದು ಗೊಗರೆದಿದ್ದಾರೆ.

ಹೌದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಪ್ರಶಸ್ತಿ ಸಂಭ್ರಮಾಚರಣೆಯ ವೇಳೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಒಂದು ವಿಡಿಯೋಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸಿದ ಟ್ರೋಲಿಂಗ್ ಹಾಗೂ ಸುಳ್ಳು ಪ್ರಚಾರದ ಬಗ್ಗೆ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಮನಬಿಚ್ಚಿ ಮಾತನಾಡಿದ್ದಾರೆ.

ವೈರಲ್ ವಿಡಿಯೋದಲ್ಲಿದ್ದ ಹಿನ್ನಲೆ ಧ್ವನಿಯನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು. ಈ ಕುರಿತು ಗುರುವಾರ ಇನ್‌ಸ್ಟಾಗ್ರಾಂ ಸ್ಟೋರಿಗಳ ಮೂಲಕ ಸ್ಪಷ್ಟನೆ ನೀಡಿದ್ದ ನಟಿ, ಇದೀಗ ಈ ವಿವಾದದಿಂದ ತಾವು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Nushrratt Bharuccha shares emotional toll of viral IPL video
RCB ವಿಕ್ಟರಿ ಸೆಲೆಬ್ರೇಷನ್ ವಿಡಿಯೋ, ಬ್ಯಾಗ್ರೌಂಡ್ ನಲ್ಲಿ ಬೆ** ರೂಂ ಸೌಂಡ್?; ನಟಿ Nushrratt Bharuccha ಹೇಳಿದ್ದೇನು?

"ಅದು ಸಾಮಾನ್ಯ ಸಂತೋಷದ ಕ್ಷಣವಾಗಿತ್ತು"

ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ನಟಿ, 'ಈ ಘಟನೆ ಎಷ್ಟು ಬೇಗ ತಪ್ಪು ದಿಕ್ಕಿನಲ್ಲಿ ಸಾಗಿತೋ ಎಂಬುದನ್ನು ನೋಡಿ ತಮಗೆ ಆಘಾತವಾಗಿತ್ತು ಎಂದು ಹೇಳಿದ್ದಾರೆ.

"ನಿಜ ಹೇಳಬೇಕೆಂದರೆ, ನನ್ನ ಮೊದಲ ಪ್ರತಿಕ್ರಿಯೆ ನಂಬಲಾರದಂತಹದ್ದಾಗಿತ್ತು. ಅದು ತುಂಬಾ ಸಾಮಾನ್ಯವಾದ, ಸಂತೋಷದ ಕ್ಷಣವಾಗಿತ್ತು. ನಾನು ನನ್ನ ಸ್ನೇಹಿತೆಯ ಮನೆಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದೆ. ಅಲ್ಲಿ ಒಂದು ಪುಟ್ಟ ನಾಯಿಮರಿ ಅಳುತ್ತಿರುವ ಶಬ್ದ ಹಿನ್ನಲೆಯಲ್ಲಿ ಕೇಳಿಸುತ್ತಿತ್ತು. ಆದರೆ ಅದನ್ನೇ ತಿರುಚಿ ಕೆಟ್ಟ ರೀತಿಯಲ್ಲಿ ಪ್ರಚಾರ ಮಾಡಿರುವುದು ಮತ್ತು ಅದು ಎಷ್ಟು ವೇಗವಾಗಿ ಹರಡಿತು ಎಂಬುದನ್ನು ನೋಡಿ ನಾನು ಆಘಾತಗೊಂಡೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಸುಳ್ಳು ಸುದ್ದಿಯೇ ತನ್ನದೇ ಆದ ರೂಪ ಪಡೆದುಕೊಂಡಿತ್ತು," ಎಂದು ಅವರು ಹೇಳಿದರು.

ಮಾಡದ ಕೆಲಸವನ್ನು ಮಾಡಿದೆ ಎಂದು ಆರೋಪಿಸುವುದು ತಪ್ಪು

ಈ ವಿವಾದ ತಾವು ಊಹಿಸಿದ್ದಕ್ಕಿಂತ ಹೆಚ್ಚು ಮಾನಸಿಕವಾಗಿ ಕಾಡಿದೆ ಎಂದು ನುಶ್ರತ್ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ಟೀಕೆ ಮತ್ತು ದ್ವೇಷಪೂರಿತ ಕಾಮೆಂಟ್‌ಗಳಿಂದ ದೂರವಿರಲು ಕೆಲ ದಿನಗಳ ಕಾಲ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾಗಿ ಹೇಳಿದ್ದಾರೆ.

"ಅದು ನನಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ನಾನು ಹೇಳುವುದಿಲ್ಲ. ನಾನು ಎಂದಿಗೂ ಹೇಳದ ಅಥವಾ ಮಾಡದ ಸಂಗತಿಗೆ ನನ್ನ ಹೆಸರನ್ನು ಜೋಡಿಸುವುದು ಮತ್ತು ಅಪರಿಚಿತರು ನನ್ನ ಬಗ್ಗೆ ಕ್ರೂರವಾಗಿ ಚರ್ಚಿಸುವುದನ್ನು ಓದುವುದು ತುಂಬಾ ನೋವಿನ ಅನುಭವ. ಕೆಲ ದಿನಗಳ ಕಾಲ ನಾನು ನನ್ನ ಫೋನ್‌ನಿಂದ ದೂರ ಉಳಿದೆ. ಏಕೆಂದರೆ ಮತ್ತೆ ಮತ್ತೆ ಅದನ್ನು ನೋಡುತ್ತಿದ್ದರೆ ಆತಂಕ ಮಾತ್ರ ಹೆಚ್ಚುತ್ತಿತ್ತು," ಎಂದು ಅವರು ಹೇಳಿದ್ದಾರೆ.

ಕುಟುಂಬ ಮತ್ತು ಸ್ನೇಹಿತರು ಬೆಂಬಲವಾಗಿ ನಿಂತರು

ಈ ಕಠಿಣ ಸಮಯದಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ತಮ್ಮ ಬೆನ್ನಿಗೆ ನಿಂತು ಧೈರ್ಯ ತುಂಬಿದರು ಎಂದು ನಟಿ ತಿಳಿಸಿದ್ದಾರೆ. "ನನ್ನ ಜೊತೆ ಸತ್ಯವಿದೆ ಎಂಬುದನ್ನು ನಾನು ನನಗೆ ನೆನಪಿಸಿಕೊಂಡೆ. ನನ್ನನ್ನು ನಿಜವಾಗಿ ತಿಳಿದಿರುವ ಜನರ ಬೆಂಬಲವೇ ನನಗೆ ಶಕ್ತಿ ನೀಡಿತು. ಪ್ರತಿಯೊಂದು ಕಾಮೆಂಟ್‌ಗೆ ಉತ್ತರ ಕೊಡುವುದರಿಂದ ವಿವಾದ ಮತ್ತಷ್ಟು ಹೆಚ್ಚುತ್ತದೆ ಎಂಬುದನ್ನೂ ನಾನು ಕಲಿತೆ. ಸಾವಿರಾರು ಸಣ್ಣ ಹೋರಾಟಗಳನ್ನು ನಡೆಸುವುದಕ್ಕಿಂತ ಮೌನವಾಗಿ ಇದ್ದು, ನಂತರ ಒಂದೇ ಸ್ಪಷ್ಟನೆ ನೀಡುವುದು ಹೆಚ್ಚು ಆರೋಗ್ಯಕರ ಎಂದು ನನಗನಿಸಿತು," ಎಂದು ಅವರು ಹೇಳಿದರು.

ಕುಟುಂಬದ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ ಅವರು, "ಒಂದು ಹಂತದಲ್ಲಿ ಅವರು ನನಗಿಂತಲೂ ಹೆಚ್ಚು ಆತಂಕಗೊಂಡಿದ್ದರು. ನನ್ನ ಕುಟುಂಬದ ಮೊದಲ ಪ್ರತಿಕ್ರಿಯೆ ನನ್ನನ್ನು ರಕ್ಷಿಸುವುದಾಗಿತ್ತು. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಇವುಗಳನ್ನು ಓದಬೇಡ ಎಂದು ಹೇಳಿದರು. ಈ ಘಟನೆಯ ಮೂಲವಾಗಿದ್ದ ನನ್ನ ಸ್ನೇಹಿತೆ ಹಾಗೂ ಆಕೆಯ ನಾಯಿಮರಿಯೂ ಸೇರಿದಂತೆ ಎಲ್ಲ ಸ್ನೇಹಿತರೂ ನನಗೆ ಬೆಂಬಲವಾಗಿ ನಿಂತರು. ಒಂದು ಮುಗ್ಧ ಘಟನೆಯನ್ನು ಇಷ್ಟು ತಿರುಚಲಾಗಿದೆ ಎಂಬುದಕ್ಕೆ ಅವರಿಗೂ ಬೇಸರವಿತ್ತು. ನಿಜವಾಗಿ ಏನಾಯಿತು ಎಂಬುದು ನಮ್ಮನ್ನು ತಿಳಿದಿರುವ ಎಲ್ಲರಿಗೂ ಗೊತ್ತಿದೆ ಎಂದು ಅವರು ನನಗೆ ಧೈರ್ಯ ತುಂಬಿದರು. ಹೊರಗಿನ ಗದ್ದಲ ಹೆಚ್ಚಾದಾಗ ಇಂತಹವರ ಬೆಂಬಲವೇ ನಮ್ಮನ್ನು ಸ್ಥಿರವಾಗಿ ನಿಲ್ಲಿಸುತ್ತದೆ," ಎಂದರು.

Nushrratt Bharuccha shares emotional toll of viral IPL video
ಬೇರೆ ದಾರಿಯೇ ಇರಲಿಲ್ಲ, ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳು: ನಟಿ ಶಿಲ್ಪಾ ಶಿಂದೆ ಸ್ಫೋಟಕ ಹೇಳಿಕೆ! Video

"ಅಭಿಪ್ರಾಯದ ಹೆಸರಿನಲ್ಲಿರುವ ಕಿರುಕುಳವೂ ಕಿರುಕುಳವೇ"

ಈ ಘಟನೆ ಡಿಜಿಟಲ್ ಯುಗದಲ್ಲಿ ಸಾರ್ವಜನಿಕ ವ್ಯಕ್ತಿಯಾಗಿರುವುದರ ಸವಾಲುಗಳನ್ನು ಮತ್ತಷ್ಟು ಅರಿಯುವಂತೆ ಮಾಡಿದೆ ಎಂದು ನುಶ್ರತ್ ಹೇಳಿದ್ದಾರೆ. ಆದರೆ, ಈ ಅನುಭವ ತಮ್ಮ ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳುವುದನ್ನು ತಡೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

"ಈ ಘಟನೆ ನನ್ನನ್ನು ಹೆಚ್ಚು ಎಚ್ಚರಿಕೆಯಿಂದ ಇರಲು ಕಲಿಸಿದೆ. ಒಬ್ಬ ಮಹಿಳೆಯಾಗಿ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ, ಒಂದು ನಾಯಿಮರಿ ಅಳುವ ಶಬ್ದವನ್ನೂ ತಿರುಚಿ ಆಯುಧವನ್ನಾಗಿ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ. ಆದರೆ ಇದರ ಪಾಠವೆಂದರೆ 'ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ' ಅಥವಾ 'ನಿಮ್ಮ ಜೀವನವನ್ನು ಮುಕ್ತವಾಗಿ ಬದುಕುವುದನ್ನು ನಿಲ್ಲಿಸಿ' ಎಂಬುದಾಗಿರಬಾರದು. ಟ್ರೋಲ್‌ಗಳು ನಾನು ನನ್ನ ವ್ಯಕ್ತಿತ್ವದ ಎಷ್ಟು ಭಾಗವನ್ನು ಜಗತ್ತಿಗೆ ತೋರಿಸಬೇಕು ಎಂದು ನಿರ್ಧರಿಸಲು ನಾನು ಅವಕಾಶ ನೀಡುವುದಿಲ್ಲ," ಎಂದು ಅವರು ಹೇಳಿದ್ದಾರೆ.

ಸತ್ಯಾಂಶ ತಿಳಿದು ಮಾತನಾಡಿ

"ಈ ಘಟನೆಯಿಂದ ಜನರು ಕಲಿಯಬೇಕಾದದ್ದು ಒಂದೇ—ಯಾವುದನ್ನಾದರೂ ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಪರದೆಯ ಇನ್ನೊಂದು ಬದಿಯಲ್ಲೂ ಒಬ್ಬ ಮನುಷ್ಯ ಇದ್ದಾನೆ ಎಂಬುದನ್ನು ಮರೆಯಬೇಡಿ. ಜಾಗರೂಕರಾಗಿರುವ ಹೊಣೆಗಾರಿಕೆ ಕೇವಲ ಗುರಿಯಾಗಿರುವ ವ್ಯಕ್ತಿಯದ್ದಲ್ಲ; ನಾವೆಲ್ಲರೂ ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ಮಾನವೀಯತೆಯಿಂದ ವರ್ತಿಸಬೇಕು," ಎಂದು ನುಶ್ರತ್ ಭರುಚ್ಚಾ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಕೊನೆಯಲ್ಲಿ, ಅಭಿಪ್ರಾಯದ ಹೆಸರಿನಲ್ಲಿ ನಡೆಯುವ ಕಿರುಕುಳವೂ ಕಿರುಕುಳವೇ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com