

ಮುಂಬೈ: ‘ರಾಮಾಯಣ’ ಚಿತ್ರದ ಟ್ರೇಲರ್‌ನಲ್ಲಿ ಭಗವಾನ್ ಶ್ರೀರಾಮನ ಪಾತ್ರವನ್ನು ಅತಿಯಾದ ಆ್ಯಕ್ಷನ್ ಹೀರೋ ರೀತಿಯಲ್ಲಿ ತೋರಿಸಿರುವುದಕ್ಕೆ ನಟ ಮುಖೇಶ್ ಖನ್ನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು.. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿನ ಶ್ರೀರಾಮನ ಆ್ಯಕ್ಷನ್ ಸೀನ್ ಗಳಿಗೆ ಖ್ಯಾತ ಹಿರಿಯ ನಟ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮುಖೇಶ್ ಖನ್ನಾ, ಚಿತ್ರದ ಟ್ರೇಲರ್ ನೋಡಿದ ಬಳಿಕ ತಮಗೆ ಬೇಸರವಾಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಶ್ರೀರಾಮನ ಪಾತ್ರಕ್ಕೆ ನೀಡಿರುವ ಆ್ಯಕ್ಷನ್ ದೃಶ್ಯಗಳು ಹಾಗೂ ಹೆಚ್ಚಿನ ಪ್ರಮಾಣದ ವಿಎಫ್‌ಎಕ್ಸ್ ಬಳಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ರೇಲರ್‌ನಲ್ಲಿರುವ ಶ್ರೀರಾಮ ಮರವನ್ನು ಏರಿ ಬಾಣ ಹಾರಿಸುವ ದೃಶ್ಯವನ್ನು ಉಲ್ಲೇಖಿಸಿದ ಅವರು, ದೈವಿಕ ಪಾತ್ರವನ್ನು ‘ಧುರಂಧರ’ನಂತೆ ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ರಜಿನಿಕಾಂತ್ ಮಾಡಿಬಿಟ್ಟಿದ್ದಾರೆ
“ನೀವು ಅವರನ್ನು ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ರಜನಿಕಾಂತ್ ಅವರಂತೆ ಮಾಡಿಬಿಟ್ಟಿದ್ದೀರಿ. ಆದ್ರೆ.. ರಾಮ ರಾಮನೇ. ಅವರು ಮರ್ಯಾದಾ ಪುರುಷೋತ್ತಮ. ಅವರು ನಗುತ್ತಿದ್ದರು. ಸಮುದ್ರದ ಬಳಿಗೂ ಕೈಮುಗಿದು, ‘ನಾನು ಮುಂದೆ ಹೋಗಬೇಕು, ದಾರಿ ಬಿಡು’ ಎಂದು ಕೇಳುತ್ತಿದ್ದರು” ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನಿಗಿಂತ ಹೆಚ್ಚು ಆ್ಯಕ್ಷನ್ ಹೀರೋ ಆಗಿ ತೋರಿಸಿದರೆ ಅದು ಸರಿಯಲ್ಲ ಎಂದಿರುವ ಅವರು, ಅವರನ್ನು ಹಾಲಿವುಡ್ ನಟ ಕ್ಲಿಂಟ್ ಈಸ್ಟ್‌ವುಡ್ ರೀತಿಯಲ್ಲಿ ಚಿತ್ರಿಸುವುದಕ್ಕೂ ಆಕ್ಷೇಪಿಸಿದ್ದಾರೆ. “ಶ್ರೀರಾಮ ಹೀಗೆ ಹೋರಾಡುತ್ತಿದ್ದರು ಎಂದು ನನಗೆ ಅನಿಸುವುದಿಲ್ಲ. ಅವರು ಹೀಗೆ ಹೋರಾಡುತ್ತಿದ್ದರೆ ವಾನರ ಸೇನೆಯ ಸಹಾಯ ಅವರಿಗೆ ಏಕೆ ಬೇಕಾಗುತ್ತಿತ್ತು?” ಎಂದು ಮುಖೇಶ್ ಖನ್ನಾ ಪ್ರಶ್ನಿಸಿದ್ದಾರೆ.
ಚಿತ್ರದಲ್ಲಿ ಅತಿಯಾದ ವಿಶೇಷ ಪರಿಣಾಮಗಳನ್ನು ಬಳಸಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಮಾಯಣ’ ಚಿತ್ರವನ್ನು ‘ಸ್ಟಾರ್ ವಾರ್ಸ್’ನಂತೆ ಹೋಲಿಸಬಹುದು, ವಾಣಿಜ್ಯವಾಗಿಯೂ ಯಶಸ್ಸು ಗಳಿಸಬಹುದು. ಆದರೆ ಭಾರತದಲ್ಲಿ ಇಂತಹ ಚಿತ್ರಗಳನ್ನು ಭಾರತದ ನಂಬಿಕೆ ಮತ್ತು ಭಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಬೇಕು ಎಂದು ಅವರು ಹೇಳಿದ್ದಾರೆ.
“ನಾವು ವಿಶೇಷ ಪರಿಣಾಮಗಳನ್ನು ನೋಡಲು ಹೋಗುವುದಿಲ್ಲ. ಭಾರತದಲ್ಲಿ ಚಿತ್ರವು ಭಾರತದ ನಂಬಿಕೆ ಮತ್ತು ಭಕ್ತಿಗೆ ಅನುಗುಣವಾಗಿರಬೇಕು,” ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
ಅಂದಹಾಗೆ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರುಣ್ ಗೋವಿಲ್, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ರವಿ ದುಬೆ, ಕಾಜಲ್ ಅಗರ್ವಾಲ್, ಲಾರಾ ದತ್ತಾ, ಇಂದಿರಾ ಕೃಷ್ಣನ್ ಹಾಗೂ ಶೀಬಾ ಚಡ್ಡಾ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.
‘ರಾಮಾಯಣ’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಈ ವರ್ಷದ ದೀಪಾವಳಿಗೆ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.