

ನವದೆಹಲಿ: ಶಬಾನಾ ಆಜ್ಮಿ ಇತ್ತೀಚೆಗೆ ತಮ್ಮ ಬಾಲ್ಯದ ದಿನಗಳಲ್ಲಿ ಧರ್ಮದ ಕುರಿತಾದ ತಮ್ಮ ಅಭಿಪ್ರಾಯಗಳು ಮತ್ತು ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ತಮ್ಮ ತಂದೆ, ಉರ್ದು ಕವಿ ಮತ್ತು ಗೀತರಚನೆಕಾರ ಕೈಫಿ ಆಜ್ಮಿ ಅವರು ನಾಸ್ತಿಕರಾಗಿದ್ದರೆ, ರಂಗಭೂಮಿ ಮತ್ತು ಚಲನಚಿತ್ರ ನಟಿಯಾಗಿದ್ದ ತಮ್ಮ ತಾಯಿ ಶೌಕತ್ ಕೈಫಿ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿದ್ದರೂ, ಅದನ್ನು ಅಷ್ಟೊಂದು 'ಗಂಭೀರವಾಗಿ' ಪರಿಗಣಿಸುತ್ತಿರಲಿಲ್ಲ ಎಂದು ವಿವರಿಸಿದರು.
IIMUNನ ಯೂಟ್ಯೂಬ್ ಚಾನೆಲ್‌ನಲ್ಲಿನ ಸಂವಾದವೊಂದರಲ್ಲಿ ಶಬಾನಾ ಆಜ್ಮಿ, 'ಕೆಲವೊಮ್ಮೆ ನಾನು 'ಮಾಶಾ ಅಲ್ಲಾ' (mashallah) ಮತ್ತು 'ಇನ್ಶಾ ಅಲ್ಲಾ' (inshallah) ಎಂದು ಹೇಳುತ್ತೇನೆ. ಆಗ ಜಾವೇದ್, 'ನೀವು ಯಾಕೆ ಪದೇ ಪದೆ ಹೀಗೆ ಹೇಳುತ್ತೀರಿ? ಯಾರಾದರೂ ಸದಾಕಾಲ 'ಪ್ರಭು ಜಿ ಕಿ ಮರ್ಜಿ' (ದೇವರ ಇಚ್ಛೆ) ಎಂದು ಹೇಳುತ್ತಿದ್ದರೆ, ಆಗ ನಿಮಗೆ ಹೇಗನಿಸುತ್ತದೆ?' ಎಂದು ಕೇಳುತ್ತಾರೆ. ಆದರೆ, ನನ್ನ ಪ್ರಕಾರ ಇವು ನನ್ನ ಭಾಷೆಯ ಅವಿಭಾಜ್ಯ ಅಂಗಗಳಷ್ಟೇ' ಎಂದಿದ್ದಾರೆ.
ಶಬಾನಾ ಅಜ್ಮಿ ಅವರು ತಮಗೆ ಧರ್ಮದ ಬಗ್ಗೆ ಎಂದಿಗೂ ಕುತೂಹಲವಿರಲಿಲ್ಲ. ಅಲ್ಲದೆ, ತಮ್ಮ ಪತಿ, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಅವರು 'ಕಟ್ಟಾ ನಾಸ್ತಿಕ' ಎಂದು ತಿಳಿಸಿದರು.
'ಅವರು ಒಬ್ಬ ಕಟ್ಟಾ ನಾಸ್ತಿಕರು. ನಾನು ಅವರನ್ನು, 'ನೀವು ಇದನ್ನು ಇಷ್ಟೊಂದು ಬಹಿರಂಗವಾಗಿ ಏಕೆ ಪ್ರದರ್ಶಿಸುತ್ತೀರಿ? ಯಾರಾದರೂ ಧರ್ಮವನ್ನು ಆಚರಿಸುವುದರಿಂದ ಸಮಾಧಾನ ಕಂಡುಕೊಳ್ಳುತ್ತಿದ್ದರೆ, ಅದನ್ನು ಹಾಗೆಯೇ ಬಿಡಿ. ಅವರನ್ನು ಏಕೆ ನೋಯಿಸಬೇಕು?' ಎಂದು ಕೇಳಿದೆ. ಅದಕ್ಕವರು, 'ಏಕೆಂದರೆ ಅವರು ನನ್ನನ್ನು ನೋಯಿಸುತ್ತಾರೆ. ಒಬ್ಬ ನಾಸ್ತಿಕನಾಗಿ, ಅದರಿಂದ ನೊಂದುಕೊಳ್ಳುವ ಹಕ್ಕು ನನಗಿಲ್ಲವೇ?' ಎಂದು ಉತ್ತರಿಸಿದರು ಎಂದು ತಿಳಿಸಿದರು.
'ಹೌದು, ನಾನು ಮುಸ್ಲಿಂ. ನನಗೆ ಈದ್, ಉರ್ದು ಭಾಷೆ ಮತ್ತು ಅಲ್ಲಿನ ಖಾದ್ಯಗಳು ಇಷ್ಟ; ಇವೆಲ್ಲವೂ ನನಗೆ ಇಷ್ಟವೇ. ಆದರೆ ನಾವು ನಮಾಜ್ ಮಾಡುವುದಿಲ್ಲ ಮತ್ತು ಧರ್ಮದೊಂದಿಗೆ ನಮಗೆ ಯಾವುದೇ ನೇರ ಸಂಬಂಧವಿಲ್ಲ. ದೇವರ ಪರಿಕಲ್ಪನೆಯ ವಿಷಯಕ್ಕೆ ಬಂದರೆ... ಇದು ಸಂಪೂರ್ಣವಾಗಿ ವೈಯಕ್ತಿಕ ವಿಷಯ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಬೇರೆ ಯಾರೂ ತಲೆಹಾಕುವ ಅಗತ್ಯವಿಲ್ಲ. ಇದರಲ್ಲಿ ಸರ್ಕಾರವೂ ಮಧ್ಯಪ್ರವೇಶಿಸಬಾರದು. ಇದು ಖಾಸಗಿ ವಿಷಯ; ಪ್ರಾರ್ಥನೆ ಮಾಡುವುದರಿಂದ ನಿಮಗೆ ಒಳ್ಳೆಯ ಭಾವನೆ ಉಂಟಾಗುವುದಾದರೆ, ಅದರಲ್ಲಿ ನನಗೇನೂ ತೊಂದರೆಯಿಲ್ಲ' ಎಂದು ಶಬಾನಾ ಆಜ್ಮಿ ಹೇಳಿದರು.
ಶಬಾನಾ ಆಜ್ಮಿ ಅವರೊಂದಿಗಿನ ವಿವಾಹಕ್ಕೂ ಮೊದಲು, ಜಾವೇದ್ ಅಖ್ತರ್ ಅವರು 1972ರಲ್ಲಿ ಚಿತ್ರಕಥೆಗಾರ್ತಿ ಹನಿ ಇರಾನಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು; ಅವರೇ ನಿರ್ದೇಶಕಿ, ನಿರ್ಮಾಪಕಿ ಜೋಯಾ ಅಖ್ತರ್ ಮತ್ತು ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್.
ಜಾವೇದ್ ಮತ್ತು ಹನಿ 1978ರಲ್ಲಿ ಬೇರ್ಪಟ್ಟರು. ಆದರೆ, 1985ರಲ್ಲಿ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತು. ಜಾವೇದ್ ಅಖ್ತರ್ ಅವರು 1984ರಲ್ಲಿ ಶಬಾನಾ ಆಜ್ಮಿ ಅವರನ್ನು ವಿವಾಹವಾದರು.