

ಮುಂಬೈ: ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಭಾರಿ ಸಂಕಷ್ಟವೊಂದು ಎದುರಾಗಿದ್ದು, ₹29.67 ಕೋಟಿ ರೂ ಪಾವತಿಸುವಂತೆ ವಸೂಲಾತಿ ನೋಟಿಸ್ ನೀಡಲಾಗಿದೆ.
ಚಿತ್ರ ನಿರ್ಮಾಣ ಸಂಸ್ಥೆಯೊಂದು ರಾಮ್ ಗೋಪಾಲ್ ವರ್ಮಾ ವಿರುದ್ಧ ವಸೂಲಾತಿ ನೋಟಿಸ್ ಜಾರಿ ಮಾಡಿದ್ದು, ಪ್ರಮುಖ ಅಂಶವೆಂದರೆ ಈ ಸಂಸ್ಥೆ ಅವರೊಂದಿಗೆ ವ್ಯವಹರಿಸದಂತೆ ಚಿತ್ರರಂಗಕ್ಕೂ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ತಮ್ಮ ಕಂಪನಿಯಿಂದ ಲಿಖಿತ ಅನುಮತಿ ಪಡೆಯದೆ ನಿರ್ದೇಶಕರೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಮಾಪಕರು, ವಿತರಕರು, ಪ್ರಸಾರಕರು ಹಾಗೂ ಒಟಿಟಿ ವೇದಿಕೆಗಳಿಗೆ ಸಾರ್ವಜನಿಕ ಎಚ್ಚರಿಕೆಯನ್ನೂ ನೀಡಲಾಗಿದೆ.
ಎಕ್ಲಾಟಂಟ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (Eclatant Films Private Limited) ಈ ನೋಟಿಸ್ ಜಾರಿ ಮಾಡಿರುವ ಸಂಸ್ಥೆ. ಅಕ್ಟೋಬರ್ 24 ಮತ್ತು ಅಕ್ಟೋಬರ್ 31ರ ಕಂಪ್ಲೀಟ್ ಸಿನಿಮಾ (Complete Cinema) ಚಿತ್ರರಂಗದ ವಾಣಿಜ್ಯ ನಿಯತಕಾಲಿಕದ ಸಂಚಿಕೆಗಳಲ್ಲಿ ನೋಟಿಸ್ ಪ್ರಕಟಿಸಲಾಗಿದೆ. ಬಾಕಿ ಮೊತ್ತವನ್ನು ಅಕ್ಟೋಬರ್ 30ರೊಳಗೆ ಸಂಪೂರ್ಣವಾಗಿ ಪಾವತಿಸುವಂತೆ ಗಡುವು ನೀಡಲಾಗಿದೆ.
ನೋಟಿಸ್ ಪ್ರಕಾರ, ಅಕ್ಟೋಬರ್ 15ರಂದು ಕಂಪನಿಯು ರಾಮ್ ಗೋಪಾಲ್ ವರ್ಮಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದು, ಒಟ್ಟು ₹29,67,64,000 ಪಾವತಿಸುವಂತೆ ಸೂಚಿಸಿದೆ. ಇದರಲ್ಲಿ ಬಾಕಿ ಅಸಲು ಮೊತ್ತದ ಜೊತೆಗೆ ಸಂಗ್ರಹವಾಗಿರುವ ₹11.38 ಕೋಟಿ ಬಡ್ಡಿಯೂ ಸೇರಿದೆ.
ಈ ವಿವಾದಕ್ಕೆ 2010ರ ಏಪ್ರಿಲ್ 10ರಂದು ರಾಮ್ ಗೋಪಾಲ್ ವರ್ಮಾ ಮತ್ತು ಎಕ್ಲಾಟಂಟ್ ಫಿಲ್ಮ್ಸ್ ನಡುವೆ ನಡೆದ ಒಪ್ಪಂದವೇ ಮೂಲ ಕಾರಣ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ 2013ರ ಏಪ್ರಿಲ್ 17ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಕಂಪನಿ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಆದರೆ, ನ್ಯಾಯಾಲಯದ ಆದೇಶದ ನಿರ್ದಿಷ್ಟ ವಿವರಗಳನ್ನು ಸಾರ್ವಜನಿಕ ನೋಟಿಸ್‌ನಲ್ಲಿ ಬಹಿರಂಗಪಡಿಸಿಲ್ಲ.
ವರ್ಮಾ ಜೊತೆ ವ್ಯವಹರಿಸದಂತೆ ಚಿತ್ರರಂಗಕ್ಕೆ ಎಚ್ಚರಿಕೆ
ಈ ಬೆಳವಣಿಗೆಯು ಕೇವಲ ಹಣಕಾಸಿನ ವಿವಾದಕ್ಕೆ ಸೀಮಿತವಾಗದೆ ಇಡೀ ಚಿತ್ರರಂಗದ ಗಮನ ಸೆಳೆದಿದೆ. ರಾಮ್ ಗೋಪಾಲ್ ವರ್ಮಾ ಅಥವಾ ಅವರ ಸಿನಿಮಾಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ನಡೆಸುವ ಮೊದಲು ಎಕ್ಲಾಟಂಟ್ ಫಿಲ್ಮ್ಸ್‌ನಿಂದ ಲಿಖಿತ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯಬೇಕು ಎಂದು ಕಂಪನಿ ಸೂಚಿಸಿದೆ. ನಿರ್ಮಾಪಕರು, ವಿತರಕರು, ಪ್ರಸಾರಕರು ಮತ್ತು ಒಟಿಟಿ ಸ್ಟ್ರೀಮಿಂಗ್ ವೇದಿಕೆಗಳು ಈ ಸೂಚನೆಯನ್ನು ಪಾಲಿಸಬೇಕು ಎಂದು ಎಚ್ಚರಿಸಲಾಗಿದೆ.
2010ರ ಒಪ್ಪಂದದ ಷರತ್ತುಗಳ ಪ್ರಕಾರ, ಬಾಕಿ ಹಣ ಸಂಪೂರ್ಣವಾಗಿ ಪಾವತಿಯಾಗುವವರೆಗೆ ರಾಮ್ ಗೋಪಾಲ್ ವರ್ಮಾ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಕೈಜೋಡಿಸುವ ಮೊದಲು ಅಥವಾ ಸಿನಿಮಾ ನಿರ್ಮಾಣ, ಸಹನಿರ್ಮಾಣ, ನಿರ್ದೇಶನ ಹಾಗೂ ಬರವಣಿಗೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುವ ಮೊದಲು ಕಂಪನಿಯಿಂದ ಎನ್‌ಒಸಿ (ನಿರಾಪೇಕ್ಷಣಾ ಪತ್ರ) ಪಡೆಯಬೇಕಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಒಪ್ಪಂದದ ವ್ಯಾಪ್ತಿಗೆ ಬರುವ ಸಿನಿಮಾಗಳು ಮತ್ತು ಯೋಜನೆಗಳ ಹಕ್ಕುಗಳನ್ನು ಖರೀದಿಸುವವರು, ಪರವಾನಗಿ ಪಡೆಯುವವರು, ವಿತರಿಸುವವರು, ಪ್ರಸಾರ ಮಾಡುವವರು ಅಥವಾ ಒಟಿಟಿಯಲ್ಲಿ ಪ್ರದರ್ಶಿಸುವವರು ಅಗತ್ಯ ಅನುಮತಿ ಪಡೆಯದೆ ಮುಂದುವರಿದರೆ ಅದರ ಅಪಾಯವನ್ನು ತಾವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಕಂಪನಿ ಎಚ್ಚರಿಸಿದೆ.
ವರ್ಮಾ ಸಿನಿಮಾಗಳ ಆದಾಯದ ಮೇಲೂ ಕಂಪನಿಯ ಹಕ್ಕು?
ನಿಗದಿತ ಅವಧಿಯೊಳಗೆ ಬಾಕಿ ಹಣ ಪಾವತಿಸದಿದ್ದರೆ, 2010ರ ಒಪ್ಪಂದದ ವ್ಯಾಪ್ತಿಗೆ ಬರುವ ಸಿನಿಮಾಗಳು ಮತ್ತು ಯೋಜನೆಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಪಾಲು, ಹಕ್ಕುಗಳು, ಆದಾಯ ಹಾಗೂ ಇತರ ಆರ್ಥಿಕ ಲಾಭಗಳ ಮೇಲೆ ತನ್ನ ಒಪ್ಪಂದದ ಹಕ್ಕನ್ನು (Contractual Lien) ಚಲಾಯಿಸುವುದಾಗಿ ಎಕ್ಲಾಟಂಟ್ ಫಿಲ್ಮ್ಸ್ ತಿಳಿಸಿದೆ.
ಒಪ್ಪಂದದ ಪ್ರಕಾರ ಈ ಹಕ್ಕು ಜಾರಿಗೊಳಿಸಲು ಸಾಧ್ಯವಾದರೆ, ಸಂಬಂಧಿತ ಸಿನಿಮಾಗಳಿಂದ ಬರುವ ಆದಾಯ ಹಾಗೂ ಹಕ್ಕುಗಳ ಮೇಲೆ ಕಂಪನಿಯು ತನ್ನ ಹಕ್ಕು ಮಂಡಿಸಬಹುದು. ಇದರಿಂದ ವರ್ಮಾ ಅವರೊಂದಿಗೆ ಹೊಸದಾಗಿ ವ್ಯವಹಾರಕ್ಕೆ ಮುಂದಾಗುವ ಪಾಲುದಾರರಿಗೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಆದರೆ, 2010ರ ಒಪ್ಪಂದವು ಯಾವೆಲ್ಲ ಸಿನಿಮಾಗಳು ಮತ್ತು ಯೋಜನೆಗಳನ್ನು ಒಳಗೊಂಡಿದೆ, ವರ್ಮಾ ಅವರ ನಂತರದ ಸಿನಿಮಾಗಳಲ್ಲಿ ಎಷ್ಟು ಯೋಜನೆಗಳು ಇದರ ವ್ಯಾಪ್ತಿಗೆ ಬರುತ್ತವೆ ಹಾಗೂ ಎನ್‌ಒಸಿ ನಿಯಮವು ಅವರ ಎಲ್ಲ ವೃತ್ತಿಪರ ಚಟುವಟಿಕೆಗಳಿಗೂ ಅನ್ವಯಿಸುತ್ತದೆಯೇ ಅಥವಾ ನಿರ್ದಿಷ್ಟ ಒಪ್ಪಂದಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಸೀಮಿತವೇ ಎಂಬ ಬಗ್ಗೆ ಸಾರ್ವಜನಿಕ ನೋಟಿಸ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.
ವರ್ಮಾ ವಿವಾದ ಇದೇ ಮೊದಲೇನಲ್ಲ
ರಾಮ್ ಗೋಪಾಲ್ ವರ್ಮಾ ಅವರು ನಿರ್ಮಾಣ ಪಾಲುದಾರರಿಂದ ಹಣಕಾಸಿನ ಆರೋಪಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಅವರ ಡಿ ಕಂಪನಿ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಒತ್ತಾಯಿಸಿತ್ತು. ಆಗ ₹12 ಕೋಟಿ ಬಾಕಿ ಪಾವತಿಸದ ಆರೋಪ ಕೇಳಿಬಂದಿತ್ತು.
ಈಗ ₹29.67 ಕೋಟಿ ಮೊತ್ತದ ಹೊಸ ಬೇಡಿಕೆ ಎದುರಾಗಿದೆ. ಇದರಲ್ಲಿ ಸುಮಾರು ₹11.39 ಕೋಟಿ ಬಡ್ಡಿಯೇ ಸೇರಿದೆ. ಸುಮಾರು 16 ವರ್ಷಗಳ ಹಿಂದಿನ ಒಪ್ಪಂದಕ್ಕೆ ಸಂಬಂಧಿಸಿದ ಈ ವಿವಾದ ದೊಡ್ಡ ಹಣಕಾಸಿನ ಸಂಘರ್ಷವಾಗಿ ಬೆಳೆದಿದೆ.
ಸತ್ಯ (1998), ಕಂಪನಿ (2002) ಮತ್ತು ಸರ್ಕಾರ್ (2005) ಅಂತಹ ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿರುವ ರಾಮ್ ಗೋಪಾಲ್ ವರ್ಮಾ, ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಬಜೆಟ್‌ನ ಸ್ವತಂತ್ರ ಸಿನಿಮಾಗಳ ನಿರ್ಮಾಣ ಮತ್ತು ಸಣ್ಣ ವೇದಿಕೆಗಳು ಹಾಗೂ ತಮ್ಮದೇ ಚಾನೆಲ್‌ಗಳ ಮೂಲಕ ಬಿಡುಗಡೆ ಮಾಡುವತ್ತ ಗಮನಹರಿಸಿದ್ದಾರೆ.
ಅವರ ಕೆಲವು ಸಿನಿಮಾಗಳು ವಿವಾದಗಳಿಗೂ ಕಾರಣವಾಗಿವೆ. ಸದ್ಯ ವರ್ಮಾ ಅವರು ಹರ್ಷವರ್ಧನ್ ರಾಣೆ ನಟನೆಯ ಪೊಲೀಸ್ ಕಂಪನಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.