

ಮುಂಬೈ: ವಿಶಾಲ್ ಚತುರ್ವೇದಿ ನಿರ್ದೇಶನದ ಹನುಮಾನ್ ಅಂಶ್ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಇದೀಗ 100 ಕೋಟಿ ರೂ ಕ್ಲಬ್ ಸೇರಿದೆ.
ಹೌದು.. ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿರುವ ‘ಹನುಮಾನ್ ಅಂಶ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದ್ದು, 100 ಕೋಟಿ ರೂ ಗಡಿ ದಾಟಿದೆ.
ಅಂಕಿಅಂಶಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಸಾಕ್‌ನಿಲ್ಕ್ ಪ್ರಕಾರ, ಸಿನಿಮಾ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 124.70 ಕೋಟಿ ರೂ ಕಲೆಕ್ಷನ್ ಮಾಡಿದೆ.
ಆಗಸ್ಟ್ 7ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಹನುಮಾನ್ ಅಂಶ’ ಮೊದಲಿಗೆ ನಿಧಾನಗತಿಯ ಆರಂಭ ಕಂಡಿತ್ತು. ಮೊದಲ ಎರಡು ವಾರಗಳಲ್ಲಿ ಸಿನಿಮಾದ ಗಳಿಕೆ ಅಷ್ಟೇನೂ ಗಮನಾರ್ಹವಾಗಿರಲಿಲ್ಲ.
ಆದರೆ ಬಳಿಕ ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದ ಸಿನಿಮಾಗೆ ವೇಗ ದೊರೆತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.
ಚಿತ್ರದ ಕುರಿತು
ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾ, ತಾಯಿಯ ಸಾವಿನಿಂದ ದುಃಖಕ್ಕೀಡಾಗುವ ಯುವಕ ಲಕ್ಷ್ಮೀನಾರಾಯಣನ ಕಥೆಯನ್ನು ಹೇಳುತ್ತದೆ. ತಾಯಿಯನ್ನು ಕಳೆದುಕೊಂಡ ಬಳಿಕ ದೇವರನ್ನು ಹುಡುಕುತ್ತಾ ಆತ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸುತ್ತಾನೆ.
ಜೀವನ, ಸಾವು ಮತ್ತು ಮಾನವನ ಸಂಕಷ್ಟಗಳ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವ ಲಕ್ಷ್ಮೀನಾರಾಯಣ, ಕೊನೆಗೆ ಪ್ರೀತಿ, ಸೇವೆ ಮತ್ತು ಕರುಣೆಯ ಸಂದೇಶದ ಮೂಲಕ ಅಸಂಖ್ಯಾತ ಜನರ ಬದುಕನ್ನು ಸ್ಪರ್ಶಿಸಿದ ಗೌರವಾನ್ವಿತ ಸಂತ ನೀಮ್ ಕರೋಲಿ ಬಾಬಾ ಆಗಿ ಪರಿವರ್ತನೆಯಾಗುವ ಕಥೆಯನ್ನು ಸಿನಿಮಾ ಕಟ್ಟಿಕೊಡುತ್ತದೆ.
ಚಿತ್ರದಲ್ಲಿ ಶೋಭಿನವ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರೊಂದಿಗೆ ವಿಹಾನ್ ಶೆಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಹಾಗೂ ಭಗವಂದಾಸ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.