ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ವಿವೇಕ್ ಒಬೇರಾಯ್ ದತ್ತು ಪುತ್ರಿ ಸಿನಿಮಾಗೆ ಪದಾರ್ಪಣೆ!

ಇದೀಗ 22 ವರ್ಷದ ಸಹಾರಾ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದು, ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
vivek oberoi and sahara
ವಿವೇಕ್ ಒಬೆರಾಯ್ ಮತ್ತು ಸಹರಾ
Updated on

ಬಾಲಿವುಡ್ ನಟ ವಿವೇಕ್ ಒಬೆರಾಯ್ ಹಾಗೂ ಪತ್ನಿ ಪ್ರಿಯಾಂಕಾ ಆಳ್ವಾ ಅವರ ದತ್ತು ಪುತ್ರಿ ಚೊಚ್ಚಲ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಹುಟ್ಟಿದ ಎರಡೂವರೆ ವರ್ಷದಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಸಹಾರಾ ಶಾ ಅವರನ್ನು ದತ್ತು ಪಡೆದಿದ್ದ ವಿವೇಕ್ ದಂಪತಿ, ಚಿಕಿತ್ಸೆಯ ಜತೆಗೆ ವಿದ್ಯಾಭ್ಯಾಸವನ್ನೂ ನೋಡಿಕೊಂಡಿದ್ದರು.

ಇದೀಗ 22 ವರ್ಷದ ಸಹಾರಾ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದು, ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ವರ್ಷಗಳ ಹಿಂದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಪುಟ್ಟ ಬಾಲಕಿಯನ್ನು ದತ್ತು ಪಡೆದು ಆಕೆಯ ಚಿಕಿತ್ಸೆಗೆ ಬೆಂಬಲ ನೀಡಿದ್ದ ನಟ, ಇದೀಗ ಅದೇ ಮಗಳು ಜೀವನದ ಮತ್ತೊಂದು ದೊಡ್ಡ ಹೆಜ್ಜೆ ಇಡುವುದನ್ನು ಕಣ್ಣಾರೆ ಕಂಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು, ತನ್ನ ಶಿಕ್ಷಣ ಮತ್ತು ವೃತ್ತಿಜೀವನದ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿರುವ ಸಹಾರಾ ಶಾ ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಮಗಳು ಮೊದಲ ಸಿನಿಮಾಗೆ ಸಹಿ ಹಾಕಿದ ಕ್ಷಣವನ್ನು ಕಂಡ ವಿವೇಕ್ ಒಬೆರಾಯ್ ಭಾವುಕರಾಗಿ ಆಕೆಯನ್ನು ತಬ್ಬಿಕೊಂಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಿಆರ್‌ಪಿಎ ಕ್ಯಾನ್ಸರ್ ರೋಸ್ ಡೇ ಕಾರ್ಯಕ್ರಮದಲ್ಲಿ, ತಮ್ಮ ದತ್ತು ಪುತ್ರಿ ಸಹಾರಾ ಶಾ ನಟಿಸಲಿರುವ ಸಿನಿಮಾದ ಪೋಸ್ಟರ್ ಅನ್ನು ವಿವೇಕ್ ಒಬೆರಾಯ್ ಅವರು ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾವುಕರಾದ ಅವರು ದತ್ತು ಪುತ್ರಿಯನ್ನು ಕೊಂಡಾಡಿದ್ದಾರೆ.

vivek oberoi and sahara
ಒಂದೇ ವರ್ಷದಲ್ಲಿ ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಖಾನ್ ಆಸ್ತಿಯಲ್ಲಿ 2,500 ಕೋಟಿ ನಷ್ಟ!

ಸಹಾರಾ ಶಾ ಅವರು 26 ಕರೋಡ್ ನೇಪಾಳಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವುದಾಗಿ ಘೋಷಿಸಿದರು. ಬಳಿಕ ವಿವೇಕ್ ಒಬೆರಾಯ್ ಅವರನ್ನು ದಾದಾ ಎಂದು ಕರೆಯುತ್ತಾ, ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಸಹಾರಾ ಶಾ ಅವರು ವಾಣಿಜ್ಯಿಕ ವಿಮಾನಗಳ ಪೈಲಟ್‌ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ವಿವೇಕ್ ಒಬೆರಾಯ್ ಹಲವು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳಿಗೆ ನೆರವು ನೀಡುತ್ತಾ ಬಂದಿದ್ದಾರೆ. ಚಿಕಿತ್ಸೆಯ ಜೊತೆಗೆ ಅವರ ಶಿಕ್ಷಣ ಮತ್ತು ವೃತ್ತಿಪರ ತರಬೇತಿಗೂ ಸಹಾಯ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ನಟಿಸುವುದು ನನ್ನ ಕನಸಾಗಿತ್ತು. ಈಗ ನಾಯಕಿಯಾಗಿ ನೇಪಾಳಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ವಿವೇಕ್ ದಾದಾ ಅವರ ಹೆಜ್ಜೆಯನ್ನೇ ನಾನು ಅನುಸರಿಸಲು ಬಯಸುತ್ತೇನೆ. ಅವರು ಸಿನಿಮಾ ರಂಗದಲ್ಲಿ ಯಶಸ್ವಿಯಾಗಿ, ಹೇಗೆ ಸಾವಿರಾರು ಬಡ ಮಕ್ಕಳ ಬದುಕಿಗೆ ಬೆಳಕಾಗಿದ್ದಾರೋ, ಅದೇ ರೀತಿ ನಾನು ಕೂಡ ಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು, ಸ್ವಾವಲಂಬಿಯಾಗಿ ನನ್ನಂತೆಯೇ ಕಷ್ಟದಲ್ಲಿರುವ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುತ್ತೇನೆ ಎಂದು ಭಾವುಕರಾಗಿ ನುಡಿದರು.

ನನಗೆಷ್ಟು ಸಂತೋಷವಾಗುತ್ತಿದೆ ಎಂಬುದನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮಗಳ ಬಗ್ಗೆ ಹೆಮ್ಮೆಯಾಗಿ ಈ ಕಣ್ಣೀರು ಬರುತ್ತಿದೆ. ಕೆಂಪಾದ ಕಣ್ಣು ಹಾಗೂ ಬಿಳಿಚಿಕೊಂಡ ಮುಖದಿಂದ ಕೂಡಿದ್ದ ಎರಡೂವರೆ ವರ್ಷದ ಹುಡುಗಿ, ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಕೀಮೋಥೆರಪಿಗೆ ಒಳಗಾಗುವುದನ್ನು ನಾನು ಹತ್ತಿರದಿಂದ ನೋಡಿದ್ದೆ. ಅವಳಲ್ಲಿ‌ ಹೋರಾಟದ ಮನೋಭಾವವನ್ನು ನೋಡಿ, ಅವಳು ಖಂಡಿತ ಗೆಲ್ಲುತ್ತಾಳೆ ಎಂಬ ಭರವಸೆ ನನಗಿತ್ತು. ಪ್ರತಿದಿನ ಅವಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೆ. ಇಂದು ಅವಳು ಕ್ಯಾನ್ಸರ್‌ನಿಂದ ಗುಣಮುಖಳಾಗಿದ್ದಾಳೆ. ಅಷ್ಟೇ ಅಲ್ಲದೆ, ತನ್ನದೇ ಕಠಿಣ ಪರಿಶ್ರಮದಿಂದ ಸುಂದರವಾದ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ’ ಎಂದು ಹೇಳಿದ್ದಾರೆ.

ಇದೀಗ 22 ವರ್ಷದ ಸಹಾರಾ ಶಾ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಯಶಸ್ವಿಯಾಗಿ ಗೆದ್ದಿದ್ದಾರೆ. ಕಠಿಣ ಚಿಕಿತ್ಸೆಯ ಹಂತಗಳನ್ನು ದಾಟಿ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ತಮ್ಮ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com